ADVERTISEMENT

ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2023, 7:43 IST
Last Updated 6 ಅಕ್ಟೋಬರ್ 2023, 7:43 IST
ನಟ ರಣಬೀರ್ ಹಾಗೂ ಶ್ರದ್ಧಾ ಕಪೂರ್
ನಟ ರಣಬೀರ್ ಹಾಗೂ ಶ್ರದ್ಧಾ ಕಪೂರ್   

ಮುಂಬೈ: ಮಹಾದೇವ ಬೆಟ್ಟಿಂಗ್ ಆ್ಯಪ್‌ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು, ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿದೆ.

ಮಹಾದೇವ ಬೆಟ್ಟಿಂಗ್ ಆ್ಯಪ್‌ ಜಾಹೀರಾತಿನಲ್ಲಿ ಶ್ರದ್ಧಾ ಅವರು ನಟಿಸಿದ್ದರು. ಇದಕ್ಕೆ ಪಡೆದ ಸಂಭಾವನೆ ಕುರಿತಂತೆ ಇ.ಡಿ. ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಹಾದೇವ್‌ ಆನ್‌ಲೈನ್ ಬೆಟ್ಟಿಂಗ್‌ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ದೇಶದ ಹಲವು ನಗರಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮೂಲದ ಮಹಾದೇವ ಬೆಟ್ಟಿಂಗ್ ಆ್ಯಪ್‌ ಮೂಲಕ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕೋಲ್ಕತ್ತ, ಭೋಪಾಲ್, ಮುಂಬೈ ನಗರಗಳಲ್ಲಿ ಶೋಧ ನಡೆದಿತ್ತು. ದೊಡ್ಡ ಮಟ್ಟದ ಹವಾಲಾ ನಡೆದಿರುವ ಸಾಧ್ಯತೆಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಪ್‌ನ ಪ್ರವರ್ತಕರಾದ ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ ಅವರಿಂದ ₹417 ಕೋಟಿ ಮೊತ್ತದ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ವಶಕ್ಕೆ ಪಡೆದಿದ್ದರು. ದುಬೈನಲ್ಲಿ ನಡೆದ ಸೌರಭ್ ಚಂದ್ರಕರ್ ವಿವಾಹ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್‌ ಭಾಗಿಯಾಗಿದ್ದರು. ಸೌರಭ್ ಹಾಗೂ ರಣಬೀರ್ ನಡುವಿನ ಸಂಬಂಧ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ. ಇದಕ್ಕಾಗಿ ಅ. 6 ದಿನಾಂಕ ನಿಗದಿಪಡಿಸಿದೆ ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟ ರಣಬೀರ್ ಕಪೂರ್, ಹಾಸ್ಯಗಾರ ಕಪಿಲ್ ಶರ್ಮ, ನಟಿಯರಾದ ಹುಮಾ ಖುರೇಷಿ ಮತ್ತು ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿದೆ.

ರಣಬೀರ್ ಕಪೂರ್ ಅವರು ಎರಡು ವಾರಗಳ ಸಮಯ ಕೋರಿದ್ದಾರೆ ಎಂದು ಗೊತ್ತಾಗಿದೆ. ಆ್ಯಪ್‌ನ ಪ್ರವರ್ತಕರು ಈ ಮೂವರು ಕಲಾವಿದರಿಗೆ ಹಣ ನೀಡಿದ್ದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇ.ಡಿ. ಅಧಿಕಾರಿಗಳು ಯತ್ನಿಸಲಿದ್ದಾರೆ ಎಂದೆನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.