ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಮಿಷನ್ ಮಂಗಳ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಉಪಗ್ರಹ ಉಡಾವಣೆ ಮಾಡುವ ಮಂಗಳಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು ಹಾಗೂ ಸಿಬ್ಬಂದಿ ಪಟ್ಟ ಪರಿಶ್ರಮ ಮತ್ತು ಅದರಲ್ಲಿ ಯಶಸ್ವಿಯಾದ ನಂತರ ಸಂಭ್ರಮಿಸಿದ ಸಂತಸದ ಅವಿಸ್ಮರಣೀಯ ಕ್ಷಣಗಳು ಈ ಟ್ರೇಲರ್‌ನಲ್ಲಿವೆ.
ಮಂಗಳನ ಅಂಗಳಕ್ಕೆ ರಾಕೆಟ್ ಉಡಾವಣೆ ಮಾಡುವ ಮೊದಲ ಪ್ರಯತ್ನ ಹಾಗೂ ಮಂಗಳಯಾನದ ಕೊನೆಯ ಕ್ಷಣಗಳಲ್ಲಿವಿಜ್ಞಾನಿಗಳ ತಂಡದ ಆತಂಕ ಹೊರ ಜಗತ್ತಿಗೆ ಕಾಣುವುದಿಲ್ಲ. ಕೊನೆಯ 45 ನಿಮಿಷ ವಿಜ್ಞಾನಿಗಳ ಮನಸ್ಥಿತಿ ಹೇಗಿತ್ತು ಎಂಬ ಪ್ರಶ್ನೆಗಳಿಗೆ ‘ಮಿಷನ್ ಮಂಗಳ’ ಚಿತ್ರತಂಡ ಬಿಡುಗಡೆ ಮಾಡಿರುವ ಮೊದಲ ಟ್ರೇಲರ್ ಉತ್ತರ ನೀಡುತ್ತದೆ.
ಇದರಲ್ಲಿ ಅಕ್ಷಯ್‌ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಯಾರು ಯಾವ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂಬುವುದು ಈ ಟ್ರೇಲರ್‌ನಲ್ಲಿದೆ.ಉಡಾವಣಾ ತಂಡದ ಮುಖ್ಯಸ್ಥರಾಕೇಶ್ ಧವನ್ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದು, ಪ್ರಾಜೆಕ್ಟ್ ನಿರ್ದೇಶಕಿ ತಾರಾ ಶಿಂಧೆಯಾಗಿ ವಿದ್ಯಾ ಬಾಲನ್ ನಟಿಸಿದ್ದಾರೆ. ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್, ತಾಪ್ಸಿ ಅವರು ಪ್ರಾಜೆಕ್ಟ್ ಡಿಸೈನರ್ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಾಮಾನ್ಯ ಜನರು ಭಾರತದ ಅಸಾಮಾನ್ಯ ಕನಸನ್ನು ಹೇಗೆ ನನಸು ಮಾಡುವಲ್ಲಿ ಯಶಸ್ವಿಯಾದರು. ಅವರು ಕೈಗೊಂಡ ಕಾರ್ಯವೈಖರಿ, ಗಟ್ಟಿ ನಿರ್ಧಾರ, ಅಗಾಧ ಆತ್ಮವಿಶ್ವಾಸ ಹಾಗೂ ಎಲ್ಲವನ್ನೂ ಸಾಧಿಸುವ ಹುಮ್ಮಸ್ಸು ಮಂಗಳಯಾನ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಈ ಟ್ರೇಲರ್ ಕಟ್ಟಿಕೊಡುತ್ತದೆ. ಮಹಿಳಾ ವಿಜ್ಞಾನಿಗಳು ಮನೆಯನ್ನು ನಿರ್ವಹಣೆ ಮಾಡುತ್ತಾ ವೃತ್ತಿಯಲ್ಲೂ ಯಶಸ್ಸು ಸಾಧಿಸುವುದನ್ನು ಮನ ಮುಟ್ಟುವಂತೆ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.