ಮುಂಬೈ: ಬಾಲಿವುಡ್ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಹಠಾತ್ ಕಿವುಡುತನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪೋಸ್ಟ್ ಹಂಚಿಕೊಂಡ ಅವರು. ‘ಕೆಲವು ವಾರಗಳ ಹಿಂದೆ ವಿಮಾನದಿಂದ ಇಳಿದು ಬರುವಾಗ ಏನು ಕೇಳಿಸದಂತ ಅನುಭವವಾಯಿತು. ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ವೈರಾಣು ಸೋಂಕಿನಿಂದ ಕಿವಿಯಲ್ಲಿರುವ ನರಕೋಶಗಳಿಗೆ ಆಗಿರುವ ತೊಂದರೆಯಿಂದಾಗಿ ಇದ್ದಕ್ಕಿದ್ದಂತೆ ಕಿವುಡುತನ ಕಾಣಿಸಿಕೊಂಡಿದೆ ಎಂದರು’ ಎಂದು ತಿಳಿಸಿದ್ದಾರೆ.
‘ಆದಷ್ಟು ಹೆಡ್‌ಫೋನ್ ಬಳಕೆ ಮತ್ತು ಜೋರಾದ ಶಬ್ದಗಳಿಂದ ದೂರವಿರಿ ಎಂದು ನನ್ನ ಅಭಿಮಾನಿಗಳು ಮತ್ತು ಯುವಜನರನ್ನು ಕೇಳಿಕೊಳ್ಳುತ್ತೇನೆ. ನನ್ನ ವೃತ್ತಿ ಜೀವನದಲ್ಲಾದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಮುಂದೊಂದು ದಿನ ವಿವರಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದವಿರಲಿ ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಅಲ್ಕಾ ಅವರು ಬಾಲಿವುಡ್‌ನ ಹಿರಿಯ ಗಾಯಕಿ ಮಾತ್ರವಲ್ಲದೆ, ಹಿಂದಿಯ ಸೂಪರ್‌ಸ್ಟಾರ್ –2 ಸಂಗೀತ ರಿಯಾಲಿಟಿ ಶೋನ ತೀರ್ಪುಗಾರರೂ ಆಗಿದ್ದಾರೆ.
58 ವರ್ಷದ ಅಲ್ಕಾ ಅವರು ಈ ವರೆಗೆ 1,114 ಸಿನಿಮಾಗಳಿಗೆ ಸುಮಾರು 2,486 ಹಾಡುಗಳನ್ನು ಹಾಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.