ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆಗೆ ವಿರುದ್ಧವಾಗಿ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ನಿರ್ಮಾಪಕ ಅಶೋಕ್ ಪಂಡಿತ್ ಎಂಬುವವರು ರಿಚಾ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿಚಾ ಟ್ವೀಟ್ ಅನ್ನು 'ಅಪರಾಧ' ಎಂದು ಉಲ್ಲೇಖಿಸಿರುವ ಪಂಡಿತ್, ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.
‘ರಿಚಾ ಚಡ್ಡಾ ನಮ್ಮ ಸೇನೆಯನ್ನು ಅಪಹಾಸ್ಯ ಮಾಡಿದ್ದಾರೆ, ವಿಶೇಷವಾಗಿ ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಸೈನಿಕರನ್ನು ಅವಮಾನಿಸಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಎಫ್‌ಐಆರ್ ದಾಖಲಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನೆಟ್ಟಿಗರು ಟ್ವಿಟರ್‌ನಲ್ಲಿ ‘ಫುಕ್ರೆ 3’ಬಾಯ್ಕಾಟ್ ಅಭಿಯಾನ ಆರಂಭಿಸಿದ್ದಾರೆ.
#BoycottFukrey3 #BoycottBollywood #BoycottbollywoodCompletely #BoycottBollywoodMovies #BoycottBollywoodActors #BoycottBollywoodForever ಹ್ಯಾಶ್‌ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಅನೇಕರು ಈ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ.
‘ಆತ್ಮೀಯ ರಿಚಾ ಚಡ್ಡಾ ಜೀ, ನಿಮ್ಮ ಟ್ವೀಟ್ ನೋಡಿ ನನಗಾದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನೀವು ಸಹ ನಾಗರಿಕರಿಂದ ಇಂತಹ ಅಸಹ್ಯಕರ ಮಾತುಗಳನ್ನು ಕೇಳುವುದು ಸರಿಯಲ್ಲ ಎನಿಸುತ್ತದೆ. ಇದರಿಂದ ನಿಮ್ಮಲ್ಲಿ ದಿಟ್ಟತನ ಮತ್ತು ನಾಚಿಕೆಯಿಲ್ಲದಿರುವುದನ್ನು ತೋರಿಸುತ್ತದೆ’ ಎಂದು ಮೇಜರ್ ಮಾಣಿಕ್ ಎಂಬುವರು ಟ್ವೀಟ್ ಮಾಡಿದ್ದಾರೆ.
‘ಆಕೆ ಯಾರು ? ಆಕೆ ‘ಸಿ ಗ್ರೇಡ್’ ನಟಿಯಾಗಿದ್ದು, ಅವರು ನಿಂದನೀಯ ಸಂಭಾಷಣೆಗಳನ್ನು ಒಳಗೊಂಡಿರುವ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅಂತಹ ಚಿತ್ರಗಳು ಆಕೆಯನ್ನು ಗುರುತಿಸುವಂತೆ ಮಾಡಿವೆ. ದೇಶಭಕ್ತಿಯ ಚಿತ್ರಗಳನ್ನು ಭಾರತೀಯರು ಯಾವಾಗಲೂ ಬೆಂಬಲಿಸುತ್ತಾರೆ. ಆದರೆ, ಈ ಬಾರಿ ಫುಕ್ರೆ–3 ಚಿತ್ರವನ್ನು ಬಾಯ್ಕಾಟ್ ಮಾಡಬೇಕಿದೆ’ ಎಂದು ಶ್ವೇತಾ ತ್ರಿಪಾಠಿ ಎಂಬುವರು ಟ್ವೀಟ್ ಮಾಡಿದ್ದಾರೆ.
‘ಫುಕ್ರೆ–3 ಸಿನಿಮಾಗೆ ವಿದಾಯ, ವಿದಾಯ’ ಎಂದು ದೇವಾಂಶ್ ನೇಗಿ ಎಂಬುವರು ಟ್ವೀಟ್ ಮಾಡಿದ್ದಾರೆ.
‘ಕೆಲವರು ಇದೀಗ ಭಾರತೀಯ ಸೇನೆಯ ಮೇಲೆ ದಾಳಿ ಮಾಡಲು, ಅವಮಾನಿಸಲು ಪ್ರಾರಂಭಿಸಿದ್ದಾರೆ. ಎಲ್ಲರೂ ಫುಕ್ರೆ–3 ಚಿತ್ರವನ್ನು ಬಾಯ್ಕಾಟ್ ಮಾಡುವ ಮೂಲಕ ತಕ್ಕಪಾಠ ಕಲಿಸಬೇಕು’ ಎಂದು ಸೋಮ ಸುಂದರಂ ಎಂಬುವರು ಟ್ವೀಟ್ ಮಾಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, ‘ಗಾಲ್ವಾನ್ಹಾಯ್ ಎನ್ನುತ್ತಿದೆ’ ಎಂಬುದಾಗಿ ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದರು. ಬಳಿಕ ತಮ್ಮ ಪೋಸ್ಟ್ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು.
2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ–ಚೀನಾ ಸಂಘರ್ಷವಾಗಿತ್ತು. ಇದರಲ್ಲಿ 20 ಭಾರತೀಯ ಸೈನಿಕರು ವೀರ ಮರಣವನ್ನಪ್ಪಿದ್ದರು. ಪ್ರತಿಕಾರದಲ್ಲಿ ಚೀನಾ ಸೈನಿಕರು ಕೂಡ ಸಾವನ್ನಪ್ಪಿದ್ದರು. ಇದಾದ ಬಳಿಕ ಚೀನಾ ಮತ್ತು ಭಾರತ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿತ್ತು. ಸೇನೆಯ ಈ ವೀರ ಹೋರಾಟವನ್ನು ರಿಚಾ ಗೇಲಿ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಕ್ರೈಮ್ ಹಾಗೂ ಕಾಮಿಡಿ ಕಥಾ ಹಂದರ ಒಳಗೊಂಡಿರುವ ‘ಫುಕ್ರೆ 3’ ಚಿತ್ರದಲ್ಲಿ ನಟರಾದ ಅಲಿ ಫಜಲ್, ಮಂಜೋತ್ ಸಿಂಗ್, ವರುಣ್ ಶರ್ಮಾ, ರಿಚಾ ಚಡ್ಡಾ ಅಭಿನಯಿಸಿದ್ದಾರೆ. ಈ ಚಿತ್ರ ಇದೇ ಡಿಸೆಂಬರ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.
ಫುಕ್ರೆ ಸರಣಿಯ ಮೊದಲ ಭಾಗ 2013ರಲ್ಲಿ ಬಿಡುಗಡೆ ಮಾಡಲಾಗಿತ್ತು. 2017ರಲ್ಲಿ ಎರಡನೇ ಭಾಗ ತೆರೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.