‘ನೂರು ಪರ್ಸೆಂಟ್ ವರ್ಜಿನ್’ –‘ಬ್ರಹ್ಮಚಾರಿ’ಯ ಮುಹೂರ್ತಕ್ಕೆ ಬಂದವರಿಗೆ ಸಿನಿಮಾದ ಈ ಅಡಿಬರಹ ಥಟ್ಟನೆ ಸೆಳೆಯಿತು. ಬ್ರಹ್ಮಚಾರಿ ವರ್ಜಿನ್ ಆಗಿರಲು ಎಷ್ಟೆಲ್ಲಾ ಕಷ್ಟಪಡಬೇಕು ಎಂದು ಅವರೆಲ್ಲರೂ ಒಳಗೊಳಗೆ ಪ್ರಶ್ನಿಸಿಕೊಂಡರು.
‘ಅಯೋಗ್ಯ’ನಾಗಿ ಜನರ ಮೆಚ್ಚುಗೆಗಳಿಸಿದ್ದ ನಟ ಸತೀಶ್ ನೀನಾಸಂ ಈ ಕಥೆಯಲ್ಲಿ ಅಪ್ಪಟ ಬ್ರಹ್ಮಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಬ್ರಹ್ಮಚಾರಿಯ ಬದುಕಿನ ಪಯಣದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. ಆತ ಸಂಕಷ್ಟದ ಸಂಕೋಲೆಯನ್ನು ಹೇಗೆ ಕಳಚುತ್ತಾನೆ ಎನ್ನುವುದು ಚಿತ್ರದ ಹೂರಣ.
‘ಬಜಾರ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಅದಿತಿ ಪ್ರಭುದೇವ ‘ಸಿಂಗ’, ‘ರಂಗನಾಯಕಿ’, ‘ತೋತಾಪುರಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅವರು ಬ್ರಹ್ಮಚಾರಿಯ ಕೈಹಿಡಿದಿದ್ದಾರೆ. ಚಿತ್ರದಲ್ಲಿ ಅವರದು ಸಖತ್ ಗ್ಲಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಅವರು ಲೈಬ್ರೆರಿಯನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಅಂದಹಾಗೆ ‘ಬಾಂಬೆ ಮಿಠಾಯಿ’, ‘ಡಬ್ಬಲ್ ಡೆಕ್ಕರ್’ ಚಿತ್ರ ನಿರ್ದೇಶಿಸಿದ್ದ ಚಂದ್ರಮೋಹನ್ ಅವರು ಈ ಸಿನಿಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ನಾಲ್ಕು ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ ವಿ. ಅವರದ್ದು.
ಉದಯ್ ಆರ್ಥಿಕ ಇಂಧನ ಒದಗಿಸುತ್ತಿದ್ದಾರೆ. ಮೊದಲ ದೃಶ್ಯಕ್ಕೆ ನಟ ಧ್ರುವ ಸರ್ಜಾ ಕ್ಲಾಪ್ ಮಾಡಿ ಶುಭ ಕೋರಿದರು. ತಾರಾಗಣದಲ್ಲಿ ದತ್ತಣ್ಣ, ಅಶೋಕ್, ಶಿವರಾಜ್ ಕೆ.ಆರ್. ಪೇಟೆ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.