ADVERTISEMENT

ತಮಿಳಿಗೆ ಹಾರಿದ ಬುರ್ಲಿ

ಕೆ.ಎಂ.ಸಂತೋಷ್‌ ಕುಮಾರ್‌
Published 13 ಜುಲೈ 2019, 12:38 IST
Last Updated 13 ಜುಲೈ 2019, 12:38 IST
ಸಂಜನಾ ಬುರ್ಲಿ
ಸಂಜನಾ ಬುರ್ಲಿ   

ಚಂದನವನದ ಉದಯೋನ್ಮುಖ ನಟಿ ಸಂಜನಾ ಬುರ್ಲಿಗೆ ಈಗ ಅವಕಾಶಗಳು ಸಾಕಷ್ಟು ಅರಸಿ ಬರಲಾರಂಭಿಸಿವೆ. ‘ವೀಕ್‌ ಎಂಡ್‌’ ಸಿನಿಮಾದಲ್ಲಿ ಬುರ್ಲಿಯ ಅಭಿನಯ ಪ್ರತಿಭೆ ಅವರಿಗೆ ತಮಿಳು ಚಿತ್ರರಂಗದಲ್ಲೂ ಅವಕಾಶಗಳ ಬಾಗಿಲು ತೆರೆಸಿದೆ. ತ್ರಿಶಾ ಮತ್ತು ಮಾಧವನ್‌ ನಟಿಸಬೇಕಿದ್ದ ‘ಚೂಮಂದ್ರಕಾಳಿ’ ಸಿನಿಮಾದಲ್ಲಿ ಬುರ್ಲಿ ಅವಕಾಶ ಗಿಟ್ಟಿಸಿಕೊಂಡು, ಸದ್ದಿಲ್ಲದೆ 40 ದಿನಗಳ ಕಾಲ ನಿರಂತರ ಶೂಟಿಂಗ್‌ನಲ್ಲಿ ಭಾಗವಹಿಸಿ, ಸಿನಿಮಾ ಮುಗಿಸಿಕೊಟ್ಟು ಬಂದಿದ್ದಾರೆ.

ಅಣ್ಣಂ ಮೀಡಿಯಾ ಹೌಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ‘ಚೂಮಂದ್ರಕಾಳಿ’ಗೆ ನಿರ್ದೇಶಕ ಈಶ್ವರ್‌ ಕೊಟ್ರಾವೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ ಮತ್ತು ಚಿತ್ರಕಥೆಯೂ ಅವರದ್ದೇ. 2012ರಿಂದ ಈ ಚಿತ್ರಕಥೆಯನ್ನು ಹೊಸೆಯುತ್ತಿದ್ದರಂತೆ. ತಮಿಳಿನ ಜನಪ್ರಿಯ ನಟ ಮಾಧವನ್‌ ಮತ್ತು ನಟಿ ತ್ರಿಶಾ ಅವರ ಬಳಿಗೂ ಈ ಚಿತ್ರಕಥೆ ಹೋಗಿದ್ದು, ಇಬ್ಬರು ಇದರಲ್ಲಿ ನಟಿಸಬೇಕಿತ್ತಂತೆ. ಆದರೆ, ಚಿತ್ರಕಥೆಯ ಪಾತ್ರಗಳು ಯುವ ಮುಖಗಳನ್ನು ಬಯಸುತ್ತಿದ್ದರಿಂದ ತ್ರಿಶಾ ಮತ್ತುಮಾಧವನ್‌ಅವರಾಗಿಯೇ ಈ ಸಿನಿಮಾ ಕೈಬಿಟ್ಟರಂತೆ. ಮಾಧವನ್‌ ಬದಲು ಕಾರ್ತಿಕೆಯನ್‌ ವೇಲು ಅಭಿನಯಿಸಿದ್ದಾರಂತೆ. ಆದರೆ, ಮಾಧವನ್‌ ಈ ಸಿನಿಮಾಕ್ಕೆ ಸಾಕಷ್ಟು ಇನ್‌ಫುಟ್ಸ್‌ ನೀಡಿ, ಚಿತ್ರಕಥೆ ಇನ್ನಷ್ಟು ಚೆನ್ನಾಗಿ ಮೂಡುವಂತೆ ಮಾಡಿದ್ದಾರಂತೆ.

ಕನ್ನಡದ ಚಿತ್ರವೊಂದರಲ್ಲಿ ಬುರ್ಲಿ ಅಭಿನಯಿಸುತ್ತಿದ್ದರಿಂದ ಇವರ ಕಾಲ್‌ಶೀಟ್‌ಗಾಗಿ ನಿರ್ದೇಶಕರು ಒಂದು ತಿಂಗಳ ಕಾಲ ಕಾದಿದ್ದರಂತೆ. ಡಾರ್ಕ್‌ ಫ್ಯಾಂಟಸಿ ಮತ್ತು ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ಬುರ್ಲಿಯದು ಮಾಯಮಂತ್ರದ ಚಮತ್ಕಾರ ಮಾಡುವ ಮಾಯಾವಿಯ ಪಾತ್ರವಂತೆ. ಮಾಯಾಲೋಕದಲ್ಲಿ ಅತ್ಯಂತ ಗರ್ವದಿಂದ ರಾಜ್ಯಭಾರ ಮಾಡುವ ಹೆಣ್ಣಂತೆ. ಈ ಪಾತ್ರದಲ್ಲಿ ನೆಗೆಟಿವ್‌ ಶೇಡ್‌ ಸ್ವಲ್ವವೂ ಇಲ್ಲ, ಸಂಪೂರ್ಣ ಪಾಸಿಟಿವ್‌ ಶೇಡ್‌ನಿಂದ ಕೂಡಿದೆ. ಚಿತ್ರದಲ್ಲಿಶೇ 80ರಷ್ಟು ಭಾಗ ನನ್ನ ಪಾತ್ರವೇ ಆವರಿಸಿಕೊಂಡಿದೆ. ಅಲ್ಲದೇ ಹನ್ನೆರಡು ಸೀರೆಗಳಲ್ಲಿ ಮಿಂಚಿದ್ದೇನೆ. ಸಿನಿಮಾದಸ್ಕ್ರಿಪ್ಟ್‌ ತುಂಬಾ ಚೆನ್ನಾಗಿದೆ. ನಿರ್ದೇಶಕರು ಈ ಸಿನಿಮಾಕ್ಕಾಗಿಅಷ್ಟು ವರ್ಷ ಕೆಲಸ ಮಾಡಿರುವ ಶ್ರಮ ಸ್ಕ್ರಿಪ್ಟ್‌ನಲ್ಲಿ ಕಾಣಿಸುತ್ತದೆ. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ’ಎಂದು ತಮ್ಮ ಪಾತ್ರದ ಬಗ್ಗೆಯೂ ಮಾಹಿತಿ ಬಿಚ್ಚಿಟ್ಟರು ಬುರ್ಲಿ.

ADVERTISEMENT

ಶೂಟಿಂಗ್‌ಗೂ ಮೊದಲು ಚೆನ್ನೈನಲ್ಲಿ ಐದು ದಿನಗಳ ಕಾಲಕಾರ್ಯಾಗಾರ ನಡೆಸಿದರು. ತಮಿಳಿನ ನೇಟಿವಿಟಿಗೆ ಹೊಂದಿಕೊಳ್ಳುವಂತಹ ದೇಹಭಾಷೆ, ಮ್ಯಾನರಿಸಂ ಬಗ್ಗೆ ತರಬೇತಿ ನೀಡಿದರು.ಸಂಭಾಷಣೆಗೆ ಅನುಕೂಲವಾಗುವಂತೆ ಬೇಸಿಕ್‌ ತಮಿಳು ಕೂಡ ಹೇಳಿಕೊಟ್ಟರು. ಈಗ ಸ್ವಲ್ಪ ಸ್ವಲ್ಪ ತಮಿಳು ಭಾಷೆ ಕೂಡ ಕಲಿತಿದ್ದೇನೆ. ಸದ್ಯ ಸಿನಿಮಾಗಳಲ್ಲಿ ಸಿಗುತ್ತಿದ್ದ ಸಂಭಾವನೆಯನ್ನು ‘ಚೂಮಂದ್ರಕಾಳಿ’ಎರಡುಪಟ್ಟು ಹೆಚ್ಚು ಮಾಡಿದೆ. ಅಷ್ಟೇ ಅಲ್ಲ, ಒಂದು ಬ್ರೇಕ್‌ ಕೂಡ ನನಗೆ ನೀಡುವ ಆತ್ಮವಿಶ್ವಾಸವಿದೆ ಎನ್ನುವ ಮಾತನನ್ನು ಬುರ್ಲಿ ಸೇರಿಸಿದರು.

‘ವೀಕ್‌ ಎಂಡ್‌’ ಕನ್ನಡ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಕೊಡಲಿಲ್ಲ. ಆ ಕೊರಗನ್ನು ಈ ಸಿನಿಮಾದಲ್ಲಿ ತುಂಬಿಕೊಳ್ಳುವ ವಿಶ್ವಾಸವಿದೆ. ಅಲ್ಲದೆ, ಈ ಸಿನಿಮಾ ನಾನು ಸದ್ಯ ಪಡೆಯುತ್ತಿದ್ದ ಸಂಭಾವನೆಯನ್ನು ದುಪ್ಪಟ್ಟುಗೊಳಿಸಿದ ಖುಷಿಯೂ ಇದೆ. ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಇನ್ನು ಎರಡು ತಿಂಗಳಲ್ಲಿ ಸಿನಿಮಾ ಪ್ರಚಾರ ಕೆಲಸ ಆರಂಭವಾಗಲಿದೆ. ಸಬ್‌ ಟೈಟಲ್‌ನೊಂದಿಗೆ ಸಿನಿಮಾ ಬೆಂಗಳೂರಿನಲ್ಲೂ ಬಿಡುಗಡೆಯಾಗಲಿದೆ’ಎಂದು ಹೇಳುವುದನ್ನು ಬುರ್ಲಿ ಮರೆಯಲಿಲ್ಲ.

ಸದ್ಯ ಬುರ್ಲಿ ಕನ್ನಡದಲ್ಲಿ ನಟಿಸುತ್ತಿರುವ ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’ ಮತ್ತು ‘ಸ್ಟೀಲ್‌ ಪಾತ್ರೆ ಸಾಮಾನು’ಕನ್ನಡದ ಎರಡು ಚಿತ್ರಗಳ ಶೂಟಿಂಗ್‌ ಬಹುತೇಕ ಮುಗಿದಿದೆ. ಈ ಸಿನಿಮಾಗಳು ಇದೇ ವರ್ಷದ ಅಂತ್ಯದಲ್ಲಿ ತೆರೆಗೆ ಬರಲಿವೆಯಂತೆ. ಕನ್ನಡದ ಮತ್ತೊಂದು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿನಟಿಸುವ ಅವಕಾಶವೂ ಬುರ್ಲಿಗೆ ಸಿಕ್ಕಿದೆ. ತಮಿಳಿನ ಮತ್ತೆರಡು ಹೊಸಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಅರಸಿ ಬಂದಿದ್ದು, ಮಾತುಕತೆ ನಡೆಯುತ್ತಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.