ಬೆಂಗಳೂರು: ಎಸ್.ಎಸ್. ರಾಜಮೌಳಿ ನಿರ್ದೇಶನದಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ ‘ಆರ್‌ಆರ್‌ಆರ್’ ವಿದೇಶಗಳಲ್ಲೂ ಗಮನ ಸೆಳೆದಿದೆ. ಸಿನಿಮಾದ ಕಥಾ ವಸ್ತುವನ್ನು ಹೊರತುಪಡಿಸಿ ಅದರಾಚೆಗೂ ಚರ್ಚೆಗೆ ಗ್ರಾಸವಾಗಿರುವ ಆರ್‌ಆರ್‌ಆರ್ ಬಿಡುಗಡೆಯಾಗಿ ಅರ್ಧವರ್ಷ ಕಳೆಯುತ್ತಾ ಬಂದರೂ ಇನ್ನೂ ಅದರ ಕ್ರೇಜ್ ಸಿನಿಪ್ರಿಯರಿಗೆ ನಿಂತಿಲ್ಲ.
ಇತ್ತೀಚೆಗಷ್ಟೇಆರ್‌ಆರ್‌ಆರ್ ‘ಗೇ’ ಗಳ ಬಗ್ಗೆ ಮಾಡಿರುವ ಸಿನಿಮಾ ಎಂದು ಕೆಲವರು ಚೇಷ್ಟೆ ಮಾಡಿದ್ದರು. ಇದು ದೊಡ್ಡ ಸದ್ದು ಮಾಡಿತ್ತು. ಇದೀಗಆರ್‌ಆರ್‌ಆರ್ ಸಿನಿಮಾದ ಬಗ್ಗೆ ಪ್ರತಿಷ್ಟಿತ ಕೆಂಬ್ರಿಡ್ಜ್ ಯುನಿವರ್ಸಿಟಿಯ ಇತಿಹಾಸ ಪ್ರಾಧ್ಯಾಪಕರೊಬ್ಬರು ಆಡಿರುವ ಮಾತು ವಿವಾದದ ಅಲೆ ಎಬ್ಬಿಸಿದೆ.
ರಾಬರ್ಟ್ ಟಾಂಬ್ಸ್ ಎನ್ನುವ ಇತಿಹಾಸ ಪ್ರಾಧ್ಯಾಪಕ ಆರ್‌ಆರ್‌ಆರ್ ಬಗ್ಗೆ ಕಟು ವಿಮರ್ಶೆ ಮಾಡಿದ್ದಾರೆ, ‘ಚಿತ್ರದಲ್ಲಿ ತೋರಿಸಿರುವ ಬ್ರಿಟಿಷರ ಕ್ರೂರತನ ನಿಜವಲ್ಲ. ಅದು ತಿರುಚಲಾಗಿದ್ದು, ಇದು ಅಸಹ್ಯದ ಪರಮಾವಧಿ! ಚಿತ್ರದಲ್ಲಿ ತೋರಿಸಿರುವುದು 1920 ರ ಅಂದಿನ ಬ್ರಿಟಿಷರ ಅಟ್ಟಹಾಸವನ್ನಲ್ಲ, ಬದಲಿಗೆ ಇಂದಿನ ಪ್ರಸ್ತುತ ಭಾರತದ ಅಟ್ಟಹಾಸವನ್ನು’ ಎಂದು ಹೇಳಿದ್ದಾರೆ.
‘ಆರ್‌ಆರ್‌ಆರ್ ಸಿನಿಮಾ ಭಾರತದಲ್ಲಿನ ಬ್ರಿಟಿಷ್ ಇತಿಹಾಸವನ್ನು ದೂಷಿಸುವ ರೀತಿಯಲ್ಲಿ ನೋಡುತ್ತದೆ. ಈ ಚಿತ್ರವನ್ನು ಅಜ್ಞಾನದಿಂದ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಗವರ್ನರ್ ಸ್ಕಾಟ್ ಹಾಗೂ ಅವರ ಪತ್ನಿಯ ಹತ್ಯೆಯ ಚಿತ್ರಣವೂ ಕೇವಲ ಅಸಹ್ಯಕರವಷ್ಟೇ ಅಲ್ಲ, ಮೂರ್ಖತನದಿಂದ ಕೂಡಿದೆ’ ಎಂದು ಟಾಂಬ್ಸ್ ವಾದಿಸಿದ್ದಾರೆ.
‘the spectator’ ಎನ್ನುವ ವೆಬ್ ತಾಣಕ್ಕೆ ಬರೆದಿರುವ ಲೇಖನದಲ್ಲಿ ಟಾಂಬ್ಸ್ ಅವರು, ‘ಭಾರತೀಯ ಸಿನಿಮಾಗಳು ಜನರ ಭಾವನೆಗಳನ್ನು ಬಂಡವಾಳವನ್ನಾಗಿಟ್ಟುಕೊಂಡು ಹೇಗೆ ವಿಜೃಂಭಿಸುತ್ತವೆ ಮತ್ತು ಜಗತ್ತಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವ ಬ್ರಿಟಿಷರ ಬಗ್ಗೆ ಭಾರತದಲ್ಲಿ ಹೇಗೆ ತಪ್ಪು ಅಭಿಪ್ರಾಯ ಮೂಡಿಸುತ್ತಾರೆ’ ಎಂಬುದನ್ನು ಲೇಖನದಲ್ಲಿ ವಿವರಿಸಿದ್ದಾರೆ.
ಟಾಂಬ್ಸ್ ಬರೆದಿರುವ ಇಂಗ್ಲಿಷ್ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಆದರೆ, ಇದಕ್ಕೆ ಮಹಾಮಂಗಳಾರತಿ ಮಾಡಿರುವ ಭಾರತೀಯರು. ಟಾಂಬ್ಸ್ ಅವರನ್ನು ತೀವ್ರತರಾಟೆಗೆ ತೆಗೆದುಕೊಂಡಿದ್ದಾರೆ. ‘ಆರ್‌ಆರ್‌ಆರ್ ಸಿನಿಮಾದಲ್ಲಿ ನಿಮ್ಮ ನಿಜವಾದ ಬಣ್ಣ ತೋರಿಸಿರುವುದಕ್ಕೆ ಉರಿಯುತ್ತಿದಿಯಾ’? ಎಂದು ಪ್ರಶ್ನಿಸಿದ್ದಾರೆ.
‘ಹೇ ಟಾಂಬ್ಸ್ ಇದು ಬ್ರಿಟಿಷ್ ವರ್ಷನ್ ಹಿಸ್ಟರಿ ಅಲ್ಲ, ಇದು ಜಗತ್ತಿನ ವರ್ಷನ್ ಹಿಸ್ಟರಿ’ ಎಂದು ಮತ್ತೊಬ್ಬರು ಟಾಂಬ್ಸ್ ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಡಾ, ಲಾವಣ್ಯ ಎನ್ನುವರು ಟಾಂಬ್ಸ್ ಅವರನ್ನು ಟ್ವೀಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ‘ಭಾರತದಲ್ಲಿ ಬ್ರಿಟಿಷರು ಮಾಡಿರುವ ಲೆಕ್ಕವಿಲ್ಲದಷ್ಟು ಕೊಲೆಗಳು, ಪಾಪಗಳು, ದೌರ್ಜನ್ಯಗಳ ಬಗ್ಗೆ ಭಾರತೀಯರಿಗೆ ಗೊತ್ತಿಲ್ಲವೆಂದು ತಿಳಿದಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.
ಟಾಂಬ್ಸ್ ಅವರ ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾ ರಂಗದವರಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ.
ಕಳೆದ ಮಾರ್ಚ್ 24 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಆರ್‌ಆರ್‌ಆರ್ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್‌ಚರಣ್ ತೇಜ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಅನೇಕರು ನಟಿಸಿದ್ದರು. ಇದರಲ್ಲಿ ಬ್ರಿಟಿಷ್ ಪಾತ್ರಗಳನ್ನು ಬ್ರಿಟಿಷ್ ಕಲಾವಿದರೇ ಮಾಡಿದ್ದು ವಿಶೇಷವಾಗಿತ್ತು.
ಆರ್‌ಆರ್‌ಆರ್ ಇಷ್ಟೆಲ್ಲಾ ಚರ್ಚೆಗಳನ್ನು ಹುಟ್ಟುಹಾಕಿದ್ದರೂ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಆರಂಭದಲ್ಲೇ ಇದೊಂದು ‘ಸಂಪೂರ್ಣ ಕಾಲ್ಪನಿಕ’ ಚಿತ್ರ ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
RRR ಸಿನಿಮಾ ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ತೆಲುಗು, ತಮಿಳು, ಕನ್ನಡ ಹಾಗೂ ಮಲೆಯಾಳಂ ಜಿ5 ಒಟಿಟಿಯಲ್ಲಿ ಪ್ರಸಾರವಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.