ADVERTISEMENT

ಸಾಕಾನೆ ಮೇಲೆ ಸವಾರಿ: ನಟ ಧನ್ವೀರ್‌ ಸೇರಿದಂತೆ 6 ಮಂದಿ ವಿರುದ್ಧ ಎಫ್‌ಐಆರ್‌

ರಾತ್ರಿ ಸಫಾರಿ ಪ್ರಕರಣದಲ್ಲೂ ಎಫ್‌ಐಆರ್‌– ವಿಚಾರಣೆಗೆ ಹಾಜರಾಗಿ ಕ್ಷಮೆ ಕೇಳಿದ ನಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 16:29 IST
Last Updated 24 ಅಕ್ಟೋಬರ್ 2020, 16:29 IST
ಚಿತ್ರನಟ ಧನ್ವೀರ್
ಚಿತ್ರನಟ ಧನ್ವೀರ್   

ಗೋಣಿಕೊಪ್ಪಲು (ಕೊಡಗು): ತಿಂಗಳ ಹಿಂದೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಅಕ್ರಮವಾಗಿ ಪ್ರವೇಶ ಪಡೆದು ಸಾಕಾನೆಯ ಮೇಲೆ ಸವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಧನ್ವೀರ್‌ ಸೇರಿದಂತೆ ಆರು ಮಂದಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರನಟ ಧನ್ವೀರ್, ವಿಶ್ವಾಸ್ ಅಯ್ಯರ್, ದರ್ಶನ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮತ್ತಿಗೋಡು ಸಾಕಾನೆ ಶಿಬಿರದ ಆರ್‌ಎಫ್‌ಒ ವೈ.ಕೆ.ಕಿರಣ್ ಕುಮಾರ್ ತಿಳಿಸಿದ್ದಾರೆ. ಎಲ್ಲರೂಬೆಂಗಳೂರಿನವರು ಎನ್ನಲಾಗಿದೆ.

ಆರೋಪಿಗಳು, ‘ಮಹೇಂದ್ರ’ ಎಂಬ ಸಾಕಾನೆಯ ಮೇಲೆ ಕುಳಿತು ಸವಾರಿ ಮಾಡಿದ ಫೋಟೊವನ್ನು ಅ.23ರಂದು ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿದ್ದರು. ಇದು ವೈರಲ್ ಆಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ADVERTISEMENT

ಮೈಸೂರು ಜಿಲ್ಲೆಯ, ಹುಣಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಆರೋಪಿಗಳ ವಿಳಾಸವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಹಕರಿಸಿದ ಸಾಕಾನೆ ಶಿಬಿರದ ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ.

ಗುಂಡ್ಲುಪೇಟೆ ವರದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ಮಾಡಿದ ಆರೋಪ ಪ್ರಕರಣದಲ್ಲಿಯೂ ನಟ ಧನ್ವೀರ್‌ ವಿರುದ್ಧ, ಅರಣ್ಯ ಇಲಾಖೆಯು ಎಫ್‌ಐಆರ್‌ ದಾಖಲಿಸಿದೆ.

ಈ ಸಂಬಂಧ ಶನಿವಾರ ಬೆಳಿಗ್ಗೆ ಅವರು ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

‘ಸಂಜೆ 6.30 ಸಫಾರಿಯಿಂದ ವಾಪಸ್‌ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಎಂದು ತಪ್ಪಾಗಿ ನಮೂದಿಸಿದ್ದಾಗಿ ನಟ ಹೇಳಿದ್ದಾರೆ. ಆಗಿರುವ ತಪ್ಪಿಗೆ ಕ್ಷಮೆ ಕೇಳಿದ್ದಾರೆ’ ಎಂದು ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.