ADVERTISEMENT

ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಭ್ರಷ್ಟಾಚಾರ ಆರೋಪ: ಸಿಬಿಐನಿಂದ ಎಫ್‌ಐಆರ್ ದಾಖಲು

ಪಿಟಿಐ
Published 5 ಅಕ್ಟೋಬರ್ 2023, 10:47 IST
Last Updated 5 ಅಕ್ಟೋಬರ್ 2023, 10:47 IST
Venugopala K.
   Venugopala K.

ನವದೆಹಲಿ: ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಮುಂಬೈನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಲ್ಲಿ(ಸಿಬಿಎಫ್‌ಸಿ) ಲಂಚ ಪಡೆದರು ಎಂದು ತಮಿಳು ನಟ ವಿಶಾಲ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ವ್ಯಕ್ತಿಗಳು ಮತ್ತು ಸಿಬಿಎಫ್‌ಸಿ ವಿರುದ್ಧ ಕೇಂದ್ರೀಯ ತನಿಖಾ ದಳವು(ಸಿಬಿಐ) ಎಫ್‌ಐಆರ್ ದಾಖಲಿಸಿದೆ.

ತಮ್ಮ ಮಾರ್ಕ್ ಆ್ಯಂಟನಿ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಗೂ ಮುನ್ನ ಸಿಬಿಎಫ್‌ಸಿಯಿಂದ ಸೆನ್ಸಾರ್ ಪ್ರಮಾಣಪತ್ರ ಪಡೆಯಲು ₹6.5 ಲಕ್ಷ ಲಂಚ ನೀಡಿರುವುದಾಗಿ ತಮಿಳು ನಟ ವಿಶಾಲ್ ಹೇಳಿಕೊಂಡಿದ್ದರು. ವಿಡಿಯೊ ಸಂದೇಶ ಮೂಲಕ ಮಂಡಳಿ ವಿರುದ್ಧ ಅವರು ಹರಿಹಾಯ್ದಿದ್ದರು. ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ಪುರಾವೆಗಳನ್ನು ಹೊಂದಿರುವುದಾಗಿ ಅವರು ಹೇಳಿದ್ದರು.

ಪ್ರಕರಣ ಸಂಬಂಧ ಖಾಸಗಿ ವ್ಯಕ್ತಿಗಳಾದ ಮರ್ಲಿನ್ ಮೆನಗಾ, ಜೀಜಾ ರಾಮದಾಸ್, ರಜನ್ ಎಂ ಮತ್ತು ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ADVERTISEMENT

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಹೆಸರಿರುವ ವ್ಯಕ್ತಿಗಳ ಸ್ಥಳಗಳು ಸೇರಿ ಮುಂಬೈನಲ್ಲಿ 4 ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

24 ಗಂಟೆಗಳಲ್ಲಿ ತಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ಲಂಚ ಕೇಳಿದ್ದರು ಎಂದು ವಿಶಾಲ್ ಆರೋಪಿಸಿದ್ದರು.

ಸೆಪ್ಟೆಂಬರ್ 15ರಂದು ಬಿಡುಗಡೆಯಾದ ‘ಮಾರ್ಕ್ ಆಂಟನಿ’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರ ಹಿಂದಿ ಆವೃತ್ತಿಯು ಸೆಪ್ಟೆಂಬರ್ 28ರಂದು ತೆರೆ ಕಂಡಿತ್ತು.

ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ನಾನು ಇಚ್ಛಿಸುತ್ತೇನೆ. ಚಿತ್ರದ ಸೆನ್ಸಾರ್‌ಗಾಗಿ ಆನ್‌ಲೈನ್‌ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಆದರೆ, ಸಿಬಿಎಫ್‌ಸಿ ಪ್ರತಿಕ್ರಿಯೆ ಕಂಡು ಬೆಚ್ಚಿಬಿದ್ದೆವು. ನಮ್ಮ ಕಡೆಯ ವ್ಯಕ್ತಿಯೊಬ್ಬರು ಕಚೇರಿಗೆ ಭೇಟಿ ಕೊಟ್ಟಾಗ ಸರ್ಟಿಫಿಕೇಟ್ ನೀಡಲು ₹6.5 ಲಕ್ಷ ಲಂಚ ಕೇಳಿದ್ದಾರೆ. ಚಿತ್ರವನ್ನು ವೀಕ್ಷಿಸಿ ಪರಿಶೀಲನೆ ನಡೆಸಲು ₹3 ಲಕ್ಷ ಮತ್ತು ಸರ್ಟಿಫಿಕೇಟ್ ನೀಡಲು ₹3.5 ಲಕ್ಷ ಕೇಳಿದ್ದರು. ಬೇರೆ ದಾರಿ ಇಲ್ಲದೆ ಹಣ ಪಾವತಿಸಿ ಸರ್ಟಿಫಿಕೇಟ್ ಪಡೆದೆ. ಬಳಿಕ, ಚಿತ್ರ ಉತ್ತರ ಭಾರತದಲ್ಲಿ ತೆರೆ ಕಂಡಿತು ಎಂದು ವಿಶಾಲ್ ವಿಡಿಯೊ ಸಂದೇಶದಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.