ADVERTISEMENT

ವದಂತಿ ಹರಡಿದರೆ ಕಾನೂನು ಕ್ರಮ: ಚಂದನ್‌–ನಿವೇದಿತಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:29 IST
Last Updated 10 ಜೂನ್ 2024, 14:29 IST
<div class="paragraphs"><p>ನಿವೇದಿತಾ ಗೌಡ, ಚಂದನ್‌ ಶೆಟ್ಟಿ</p></div>

ನಿವೇದಿತಾ ಗೌಡ, ಚಂದನ್‌ ಶೆಟ್ಟಿ

   

ಬೆಂಗಳೂರು: ತಮ್ಮ ವಿಚ್ಛೇದನಕ್ಕೆ ಸಂಬಂಧಿಸಿದಂತೆ ವದಂತಿಗಳನ್ನು ಹರಡುತ್ತಿರುವ ವ್ಯಕ್ತಿಗಳು ಹಾಗೂ ಸಾಮಾಜಿಕ ಮಾಧ್ಯಮಗಳ ವಿರುದ್ಧ ನಟ, ಗಾಯಕ ಚಂದನ್‌ ಶೆಟ್ಟಿ ಹಾಗೂ ಕಿರುತೆರೆ ಕಲಾವಿದೆ ನಿವೇದಿತಾ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿಚ್ಛೇದನ ಪಡೆದುಕೊಂಡ ಬಳಿಕ ಸೋಮವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಚಂದನ್‌–ನಿವೇದಿತಾ, ‘ನಾವು ಸ್ಪಷ್ಟನೆಗಳನ್ನು ನೀಡಿದ ಬಳಿಕವೂ ವದಂತಿಗಳನ್ನು ಹರಡಿದರೆ ಕಾನೂನಾತ್ಮಕ ಕ್ರಮ ಕೈಗೊಂಡು ಮಾನಹಾನಿ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.

ADVERTISEMENT

‘ಜೂನ್‌ 7ರಂದು ನಮಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ. ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿದ್ದೇವೆ. ಕೆಲವು ವರ್ಷಗಳಿಂದ ನನ್ನ ಜೀವನ ಶೈಲಿ ಒಂದು ಆಯಾಮದಲ್ಲಿ ಹೋದರೆ, ನಿವೇದಿತಾ ಅವರ ಜೀವನಶೈಲಿ ಇನ್ನೊಂದು ಆಯಾಮದಲ್ಲಿತ್ತು. ನಮ್ಮ ಜೀವನ, ಜೀವನಶೈಲಿ ವ್ಯಾಖ್ಯಾನಗಳು ಹೊಂದಾಣಿಕೆ ಆಗಲೇ ಇಲ್ಲ. ಒಬ್ಬರಿಗೊಬ್ಬರು ಸಮಯ ಕೊಡಲು ಆಗಲಿಲ್ಲ. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗಿರುವುದಕ್ಕಿಂತ ಬೇರೆಯಾಗುವುದು ಒಳ್ಳೆಯದು ಎಂದು ಒಮ್ಮತದಿಂದ ನಿರ್ಧಾರ ಮಾಡಿದೆವು. ನಮ್ಮಿಬ್ಬರ ನಡುವೆ ದ್ವೇಷ, ವೈಮನಸ್ಸು ಇಲ್ಲ. ನಾವಿಬ್ಬರೂ ಒಬ್ಬರಿಂದೊಬ್ಬರು ಜೀವನಾಂಶ ಪಡೆದುಕೊಂಡಿಲ್ಲ. ಮಗುವಿನ ವಿಚಾರದಲ್ಲೂ ಯಾವುದೇ ಒತ್ತಡ ಹಾಕಿಲ್ಲ. ನಿವೇದಿತಾ ಸ್ವತಂತ್ರ ಮಹಿಳೆ. ಅವರ ಖರ್ಚುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಅವರ ಸಂಬಂಧ ಕಲ್ಪಿಸುತ್ತಿರುವುದರಿಂದ ಮನಸ್ಸಿಗೆ ಬೇಸರವಾಗುತ್ತಿದೆ. ಇಂತಹ ವಿಕೃತ ಮನಃಸ್ಥಿತಿ ಶೋಭೆ ತರುವುದಿಲ್ಲ’ ಎಂದು ಚಂದನ್‌ ಹೇಳಿದರು.

‘ಕೆಲವು ಯೂಟ್ಯೂಬ್‌ ಚಾನೆಲ್‌ಗಳು ವದಂತಿ ಫ್ಯಾಕ್ಟರಿಗಳಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೇದಿತಾ ಮಾತನಾಡಿ, ‘ಮದುವೆ ನಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗಿಲ್ಲ. ವದಂತಿಗಳು ನಮಗಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೂ ನೋವು ತಂದಿವೆ. ಯಾರ ಜೊತೆಗಾದರೂ ಪೋಸ್ಟ್‌ ಹಾಕಿದ ತಕ್ಷಣ ವ್ಯೂವ್ಸ್‌ಗಳಿಗಾಗಿ ಸಂಬಂಧ ಕಲ್ಪಿಸುತ್ತಾರೆ. ಇದು ಮನಸ್ಸಿಗೆ ನೋವಾಗುತ್ತದೆ. ನಾನೂ ಹಾಗೂ ಚಂದನ್‌ ಒಳ್ಳೆಯ ಗೆಳೆಯರು. ನಮ್ಮ ನಮ್ಮ ವೃತ್ತಿಯಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ. ವಿಚ್ಛೇದನ ನಿರ್ಧಾರದ ಬಗ್ಗೆ ಯಾವುದೇ ವಿಷಾದ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.