ADVERTISEMENT

ಬಿಕಿನಿ ರೌಂಡ್‌ಗಾಗಿ ಕಿಕ್‌ ಬಾಕ್ಸಿಂಗ್‌ ಕಲಿಕೆ

‘ಗ್ರ್ಯಾಂಡ್‌ ಸೀ ವರ್ಲ್ಡ್‌– 2019’ ಬ್ಯೂಟಿ ಪೆಜೆಂಟ್‌ನಲ್ಲಿ ಚಂದನಾ ಗೌಡ

ಸತೀಶ ಬೆಳ್ಳಕ್ಕಿ
Published 10 ಜೂನ್ 2019, 19:30 IST
Last Updated 10 ಜೂನ್ 2019, 19:30 IST
ಚಂದನಾ ಗೌಡ
ಚಂದನಾ ಗೌಡ   

ಬಲ್ಗೇರಿಯಾದಲ್ಲಿ ಇದೇ 23ರಿಂದ ಆರಂಭಗೊಳ್ಳಲಿರುವ ‘ಗ್ರ್ಯಾಂಡ್‌ ಸೀ ವರ್ಲ್ಡ್‌– 2019’ ಬ್ಯೂಟಿ ಪೆಜೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಹಾಗೂ ಸೂಪರ್‌ ಮಾಡೆಲ್‌ ಚಂದನಾ ಗೌಡ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಚೆಲುವೆ ಇವರು. ಸ್ಪರ್ಧೆಯಲ್ಲಿ ಐದು ಸುತ್ತುಗಳಿದ್ದು, ತೀರ್ಪುಗಾರರು ಸ್ಪರ್ಧಿಗಳ ಐದು ಗುಣಗಳನ್ನು ಇಲ್ಲಿ ಒರೆಹಚ್ಚಿ ನೋಡಲಿದ್ದಾರೆ.

ಚಂದನಾ ಗೌಡ ಈ ಹಿಂದೆ ರ‍್ಯಾಂಪ್‌ ಮೇಲೆ ಮೂಡಿಸಿದ ಹೊಳಪಿನಿಂದಲೇ ಅವರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಿಕ್ಕಿದೆ. ವಿವಿಧ ಪ್ರತಿಷ್ಟಿತ ಬ್ರ್ಯಾಂಡ್‌ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದ ಇವರು ಆ ಬಲದಿಂದಲೇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನೆಚ್ಚಿನ ಸ್ಪರ್ಧಿಗಳಿಗೆ ವೋಟ್‌ ಮಾಡಿ ಹುರಿದುಂಬಿಸುವ ಪ್ರಕ್ರಿಯೆ ಈಗ ನಡೆಯುತ್ತಿದ್ದು, ಚಂದನಾ ಗೌಡ ಅವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಿಗಳನ್ನೆಲ್ಲಾ ಹಿಂದಿಕ್ಕಿ, ಅತಿ ಹೆಚ್ಚು ವೋಟ್‌ಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

‘ನನ್ನ ಜೀವನದಲ್ಲಿ ಸಿಕ್ಕ ಅತ್ಯಂತ ದೊಡ್ಡ ಅವಕಾಶ ಇದು. ಎಲ್ಲಕ್ಕಿಂತ ಮುಖ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಹೆಮ್ಮೆಯೇ ನನ್ನಲ್ಲಿ ಪುಳಕ ಮೂಡಿಸುತ್ತಿದೆ. ಈ ಸ್ಪರ್ಧೆಗಾಗಿ ನಾನು ಕಠಿಣ ಪರಿಶ್ರಮ ಹಾಕುತ್ತಿದ್ದೇನೆ. ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್‌ ಅನ್ನು ಮುಂದಕ್ಕೆ ಹಾಕಿದ್ದೇನೆ. ಈ ಹಂತದಲ್ಲಿ ನಿರ್ದೇಶಕರ ಸಹಕಾರವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ಚಂದನಾ ಗೌಡ.

ADVERTISEMENT

‘ಗ್ರ್ಯಾಂಡ್‌ ಸೀ ವರ್ಲ್ಡ್‌– 2019’ ಬ್ಯೂಟಿ ಪೆಜೆಂಟ್‌ ಬಲ್ಗೇರಿಯಾ ಮತ್ತು ಪ್ಯಾರೀಸ್‌ನಲ್ಲಿ ನಡೆಯಲಿದ್ದು, ಚಂದನಾ ಅವರು ಸ್ಪರ್ಧೆಗಾಗಿ ಕಠಿಣ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಡಿ ಟೋನಿಂಗ್‌ ಹಾಗೂ ಬಿಕಿನಿ ರೌಂಡ್‌ಗಾಗಿ ಅವರು ಅಂತರರಾಷ್ಟ್ರೀಯ ಮಟ್ಟದ ಫೈಟರ್‌ ಮದನ್‌ ಗೌಡ ಅವರಿಂದ ಕಿಕ್‌ ಬಾಕ್ಸಿಂಗ್‌ ತರಬೇತಿ ಕೂಡ ಪಡೆಯುತ್ತಿದ್ದಾರೆ.

‘ಈ ಸ್ಪರ್ಧೆಗಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದು, ಪ್ರತಿನಿತ್ಯ ದೇಹ ದಣಿಯುವಷ್ಟು ವ್ಯಾಯಾಮ ಮಾಡುತ್ತೇನೆ. ದಿನ ಬೆಳಿಗ್ಗೆ ಐದು ಕಿಲೋ ಮೀಟರ್‌ ಓಡುತ್ತೇನೆ. ರನ್ನಿಂಗ್‌ ಮುಗಿದ ನಂತರ ಒಂದೂವರೆ ಗಂಟೆ ಕಿಕ್‌ ಬಾಕ್ಸಿಂಗ್‌ ತರಬೇತಿ ಪಡೆಯುತ್ತೇನೆ. ಮತ್ತೆ ಸಂಜೆ ವೇಳೆ ಎರಡು ಗಂಟೆ ಸಮಯವನ್ನು ಕಿಕ್‌ ಬಾಕ್ಸಿಂಗ್‌ಗೆ ಮೀಸಲಿಡುತ್ತೇನೆ. ಬ್ಯೂಟಿ ಪೆಜೆಂಟ್‌ಗೂ ಕಿಕ್‌ ಬಾಕ್ಸಿಂಗ್‌ಗೂ ಏನು ಸಂಬಂಧ ಅಂತ ಅನ್ನಿಸಬಹುದು. ಅದಕ್ಕೂ ಒಂದು ಕಾರಣವಿದೆ. ಕಿಕ್‌ ಬಾಕ್ಸಿಂಗ್‌ ಕಲಿಯುವುದರಿಂದ ದೇಹವನ್ನು ತುಂಬ ಬೇಗ ಟೋನ್‌ ಮಾಡಬಹುದು. ನನಗೆ ಸಮಯ ಕೂಡ ಕಡಿಮೆ ಇದ್ದಿದ್ದರಿಂದ ಕಿಕ್‌ ಬಾಕ್ಸಿಂಗ್‌ ಮೂಲಕ ದೇಹಾಕಾರವನ್ನು ಅಂದಗೊಳಿಸುವ ನಿರ್ಧಾರ ತೆಗೆದುಕೊಂಡೆ. ಕಿಕ್‌ ಬಾಕ್ಸರ್‌ ಮದನ್‌ ಗೌಡ ಅವರ ಮಾರ್ಗದರ್ಶನದಿಂದ ಮೂರು ವಾರಗಳಲ್ಲಿ ಆರು ಕೆ.ಜಿ. ತೂಕ ಇಳಿಸಿಕೊಂಡಿದ್ದೇನ’ ಎನ್ನುತ್ತಾರೆ ನಟಿ ಚಂದನಾ.

ಕಿಕ್‌ ಬಾಕ್ಸಿಂಗ್‌ ಕಲಿಕೆಯ ಬಗೆಗಿನ ಕಷ್ಟ ಸುಖದ ಬಗ್ಗೆ ಚಂದನಾ ಗೌಡ ಅವರು ವಿವರಿಸುವುದು ಹೀಗೆ:

‘ಕಿಕ್‌ ಬಾಕ್ಸಿಂಗ್‌ ಹೆಣ್ಣು ಮಕ್ಕಳನ್ನು ತುಂಬ ಸುಸ್ತಾಗಿಸಿಬಿಡುತ್ತದೆ. ಕೈ, ಕಾಲು ಮತ್ತು ಮನಸ್ಸು ಕೇಂದ್ರೀಕರಿಸಿ ಆಡುವ ಕಲೆ ಇದು. ಆಟದ ಸೂಕ್ಷ್ಮಗಳನ್ನು ತಿಳಿದುಕೊಂಡು ಕಲಿತರೆ ದೇಹ ಹುರಿಗೊಳ್ಳುತ್ತದೆ. ಕೈ ಅಥವಾ ಕಾಲಿನಿಂದ ಕಿಕ್‌ ಮಾಡುವಾಗ ನಮ್ಮ ಶಕ್ತಿಯನ್ನೆಲ್ಲಾ ಮುಷ್ಠಿಗೆ ಸಂಚಯಿಸಬೇಕು. ಹೊಡೆತ ಪ್ರಬಲವಾಗಿರಬೇಕು. ಈ ರೀತಿಯಾಗಿ ಮದನ್‌ ಅವರು ನಿರಂತರವಾಗಿ ವರ್ಕೌಟ್‌ ಮಾಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಉಸಿರಾಡುವುದಕ್ಕೂ ಕಷ್ಟ ಅನಿಸುತ್ತಿತ್ತು. ಒಮ್ಮೊಮ್ಮೆ ನಿಶ್ಯಕ್ತಿಯಿಂದ ರಿಂಗ್‌ನಲ್ಲೇ ಕುಸಿದು ಬಿದ್ದಿದ್ದೇನೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ನಮ್ಮ ಇಡೀ ದೇಹವನ್ನು ಟೋನ್‌ ಮಾಡಿಕೊಳ್ಳಬೇಕು. ಅದರಲ್ಲೂ ಬಿಕಿನಿ ರೌಂಡ್‌ಗೆ ಅಂಗಸೌಷ್ಠವವೇ ಮುಖ್ಯ. ಬಿಕಿನಿ ಧರಿಸಿ ವಾಕ್‌ ಮಾಡುವಾಗ ನೋಡುಗರಿಗೆ ಪರ್ಫೆಕ್ಟ್‌ ಅಂತ ಅನ್ನಿಸಬೇಕು. ಬಿಕಿನಿ ರೌಂಡ್‌ನಲ್ಲಿ ಮಿಂಚು ಮೂಡಿಸಬೇಕು ಅಂದರೆ ದೇಹವನ್ನು ಅದ್ಭುತವಾಗಿ ಕಟೆದುಕೊಳ್ಳಲೇಬೇಕು. ಹಾಗಾಗಿ, ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಹೇಳಿ ಕಿಕ್‌ ಬಾಕ್ಸಿಂಗ್‌ ಕಲಿಯುವ ಮನಸ್ಸು ಮಾಡಿದೆ’.

ಈ ಸೌಂದರ್ಯ ಸ್ಪರ್ಧೆಯಲ್ಲಿ ಫ್ಯಾಷನ್‌ ಹಾಗೂ ಸ್ಟೈಲ್‌ ಅನಾವರಣದ ಜತೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಸುತ್ತುಗಳು ಕೂಡ ಇರುತ್ತವೆ. ಅದಕ್ಕಾಗಿಯೂ ಚಂದನಾ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ.

‘ಈ ಸ್ಪರ್ಧೆಯಲ್ಲಿ ಫ್ಯಾಷನ್‌ ಮಾತ್ರವಲ್ಲದೇ ನಮ್ಮ ದೇಶದ ಸಂಸ್ಕೃತಿಯನ್ನೂ ನಾನು ಪ್ರತಿನಿಧಿಸಬೇಕಿದೆ. ಟ್ಯಾಲೆಂಟ್‌ ರೌಂಡ್‌ನಲ್ಲಿ ಭರತನಾಟ್ಯಂ ಮಾಡುತ್ತಿದ್ದೇನೆ. ನಾನು ಒಳ್ಳೆ ನೃತ್ಯಗಾರ್ತಿಯೂ ಹೌದು. ಎರಡೂವರೆ ನಿಮಿಷದಲ್ಲಿ ದೇಶದ ವಿವಿಧ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸುತ್ತೇನೆ. ನ್ಯಾಷನಲ್‌ ಕಾಸ್ಟ್ಯೂಮ್‌ ಅಂತ ಹೇಳಿ ನವಿಲು, ಕಮಲದ ಥೀಮ್‌ ಇಟ್ಟುಕೊಂಡು ನಾನೇ ವಸ್ತ್ರವಿನ್ಯಾಸ ಮಾಡಿದ್ದೇನೆ’ ಎನ್ನುತ್ತಾರೆ ಚಂದನಾ.

ಓಟ, ಕಿಕ್‌ ಬಾಕ್ಸಿಂಗ್‌ ಜತೆಗೆ ಕಟ್ಟುನಿಟ್ಟಿನ ಡಯೆಟ್‌ ಅನುಸರಿಸುತ್ತಿರುವ ಚಂದನಾ ಗೌಡ, ಮನಸ್ಸಿನ ಶಾಂತಿಗಾಗಿ ಯೋಗಾಭ್ಯಾಸ ಕೂಡ ಮಾಡುತ್ತಿದ್ದಾರೆ. ‘ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಇದೇ 18ರಂದು ಬಲ್ಗೇರಿಯಾಕ್ಕೆ ಹೊರಡಲಿದ್ದೇನೆ’ ಎನ್ನುವ ಚಂದನಾ ಗೌಡ ಅವರ ಮಾತುಗಳಲ್ಲಿ ‘ಗ್ರ್ಯಾಂಡ್‌ ಸೀ ವರ್ಲ್ಡ್‌– 2019’ ಬ್ಯೂಟಿ ಪೆಜೆಂಟ್‌ನಲ್ಲಿ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ಪುಟಿಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.