ಮುಂಬೈ: ಚಂದ್ರಮುಖಿ–2ರಲ್ಲಿ ನಟಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಮೊದಲ ಲುಕ್‌ನ ಪೋಸ್ಟರ್ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಹಸಿರು ಮಿಶ್ರಿತ ಗೋಲ್ಡನ್ ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದಾರೆ.
ಲೈಕಾ ನಿರ್ಮಾಣ ಸಂಸ್ಥೆಯು ಪೋಸ್ಟರ್ ಬಿಡುಗಡೆ ಮಾಡಿ, ‘ಹಸಿರು ಸೀರೆ ಧರಿಸಿ, ಚಿನ್ನಾಭರಣಗಳನ್ನು ತೊಟ್ಟು ಕಾಣಿಸಿಕೊಂಡಿರುವ ಕಂಗನಾ ಅವರ ಆತ್ಮಸ್ಥೈರ್ಯದ ನೋಟವು ವರ್ಣರಂಜಿತವಾಗಿ ಮೂಡಿಬಂದಿದೆ. ಇದು ಖಂಡಿತ ಪ್ರೇಕ್ಷಕರ ಮನಗೆಲ್ಲುತ್ತದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಈ ಚಿತ್ರದಲ್ಲಿ ನಟ ರಾಘವ ಲಾರೆನ್ಸ್ ಅವರು ಅಭಿನಯಿಸಿದ್ದಾರೆ. ಪಿ. ವಾಸು ನಿರ್ದೇಶಿಸಿರುವ ‘ಚಂದ್ರಮುಖಿ– 2‘ ಇದೇ ಸೆಪ್ಟೆಂಬರ್ 19ರಂದು ಗಣೇಶ ಹಬ್ಬಕ್ಕೆ ಹಿಂದಿ, ತೆಲುಗು, ಕನ್ನಡ, ಸೇರಿದಂತೆ ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.
ಪಿ. ವಾಸು ನಿರ್ದೇಶನದ ಚಂದ್ರಮುಖಿ ಚಿತ್ರವು 2005ರ ತಮಿಳಿನಲ್ಲಿ ಮೂಡಿಬಂದ ಹಾಸ್ಯಭರಿತ ಭಯಾನಕ ಕಥೆ ಹಂದರ ಹೊಂದಿತ್ತು. ಈ ಚಿತ್ರವು ಕನ್ನಡದ ‘ಆಪ್ತಮಿತ್ರ‘ ಸಿನಿಮಾದ ಅಧಿಕೃತ ರಿಮೇಕ್ ಆಗಿತ್ತು. ಚಿತ್ರದಲ್ಲಿ ರಜನಿಕಾಂತ್, ಜ್ಯೋತಿಕಾ, ಪ್ರಭು, ವಡಿವೇಲು ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಕಂಗನಾ ರನೌತ್ ಅವರು ಮುಂಬರುವ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಅವಧಿಯಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಘಟನಾವಳಿಯನ್ನು ಚಿತ್ರಕಥೆ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.