ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ತಮ್ಮ ವಿಭಿನ್ನ ಪಾತ್ರಗಳಲ್ಲಿ ನಟನೆಯ ಮೂಲಕ ಜನರ ಮನಸ್ಸು ಗೆದ್ದವರು ಮಂಡ್ಯ ರವಿ. ‘ಮಗಳು ಜಾನಕಿ’ ಧಾರಾವಾಹಿಯ ಚಂದು ಭಾರ್ಗಿ ಪಾತ್ರಧಾರಿಯಾಗಿ ಈಗಂತೂ ಕಿರುತೆರೆ ವೀಕ್ಷಕರಿಗೆ ಅವರ ಅಭಿನಯವೂಅಚ್ಚುಮೆಚ್ಚು. ರಾಜಕಾರಣದ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತೆ ಇರುವ ಪಾತ್ರಕ್ಕೆ ರವಿ ಜೀವತುಂಬುವ ಜತೆಗೆ, ‘ಚಂದುಭಾರ್ಗಿ’ಯಾಗಿಯೇ ಧಾರಾವಾಹಿಯ ಇಡೀ ಪಾತ್ರಗಳು ಅವರ ಸುತ್ತವೇ ಗಿರಕಿಹೊಡೆಯುತ್ತಿವೆ. ರವಿ ಅವರು ಈಗ ಬಿಡುವಿಲ್ಲದ, ಸಖತ್ ಬ್ಯುಸಿಯಾಗಿರುವ ನಟ.ಸದ್ಯ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ವರಲಕ್ಷ್ಮಿ ಸ್ಟೋರ್ಸ್’ ಧಾರಾವಾಹಿಯಲ್ಲಿ ಭಾಂಧವ್ಯ ಬಿತ್ತುವ ಅಣ್ಣನ ಪಾತ್ರದಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.
ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಾ, ಬಣ್ಣದ ಲೋಕದ ಮೇಲೆ ಒಲವು ಬೆಳೆಸಿಕೊಂಡವರು ಅವರು. ಈ ಸಕಲ ಕಲಾವಲ್ಲಭನ ಪೂರ್ಣ ಹೆಸರು ರವಿ ಪ್ರಸಾದ್ ಎಂ.; ಸಾಲು ಸಾಲು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಮಂಡ್ಯ ರವಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸದ್ಯ ಹಗಲು, ರಾತ್ರಿ ಎನ್ನದೇ ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ತಮ್ಮ ನಟನೆಯ ಪಯಣ ಸಾಗಿ ಬಂದ ಹಾದಿಯನ್ನು ರವಿ ವಿವರಿಸಿವುದು ಹೀಗೆ; ‘ನಾನುಓದಿದ್ದು ಎಂ.ಎ.(ಇಂಗ್ಲಿಷ್), ಎಲ್‌ಎಲ್‌ಬಿ. ಆದರೆ ನಟನೆ ಬಗ್ಗೆ ಹೆಚ್ಚು ಒಲವು ಇದ್ದುದ್ದರಿಂದ 1996ರಲ್ಲಿ ‘ಜನದನಿ’ ಹವ್ಯಾಸಿ ನಾಟಕ ತಂಡ ಸೇರಿದೆ. ಅಲ್ಲಿ ನಟನೆಯಲ್ಲಿ ಇನ್ನಷ್ಟು ಪಳಗಿದೆ. ಆ ತಂಡದ ಮೂಲಕ ರಂಗಭೂಮಿಯ ಹಾದಿಯಲ್ಲಿ ಸಾಗಿಬಂದೆ. ನಾಟಕಗಳಲ್ಲಿ ನಟಿಸುತ್ತಿದ್ದ ನನಗೆ ಮೊದಲ ಬಾರಿಗೆ ಟಿ.ಎಸ್. ನಾಗಾಭರಣ ಅವರು ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದರು. ಹೀಗೆ ಅಂದು ಆರಂಭವಾದ ನನ್ನ ಕಿರುತೆರೆ ಪಯಣ ಇಂದು ನಿಲ್ಲದ ನದಿಯ ನೀರಿನಂತೆ ಸಾಗುತ್ತಿದೆ’.
‘ನಾನು ಲೆಕ್ಕವಿಲ್ಲದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಆದರೆ, ನಿಜವಾದ ಬ್ರೇಕ್ ನೀಡಿದ್ದು ‘ಮಿಂಚು’ ಧಾರಾವಾಹಿ. ಇದಾದ ನಂತರ ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ಓಂ ಶಕ್ತಿ ಓಂ ಶಾಂತಿಯಲ್ಲಿನ ಅಭಿನಯವೂ ಖುಷಿ ನೀಡಿದೆ. ಕಾಫಿತೋಟ, ಘಜಲ್ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದೇನೆ’.
‘ಒಬ್ಬ ನಟನಾಗಿ ಹಲವಾರು ಪಾತ್ರಗಳನ್ನು ಮಾಡಿದ್ದೇನೆ. ನನಗೆ ಇಂತದ್ದೇ ಪಾತ್ರ ಮಾಡಬೇಕು ಎಂಬ ಆಸೆ ಇಲ್ಲ. ಯಾವ ಪಾತ್ರವಾದರೂ ಸರಿ ನಟಿಸುತ್ತೇನೆ. ಒಬ್ಬ ಕಲಾವಿದನಿಗೆ ಯಾವ ಪಾತ್ರ ಕೊಟ್ಟರೇನು? ನಟಿಸಬೇಕು ಅಷ್ಟೆ, ನನಗೆ ಎಲ್ಲಾ ಪಾತ್ರಗಳು ಖುಷಿ ನೀಡಿವೆ’.
‘ನನಗೆ ರಂಗಭೂಮಿಯಲ್ಲಿ ಸಿಕ್ಕಿದ ಅನುಭವ ದೊಡ್ಡದು. ಸಿ.ಬಸವಲಿಂಗಯ್ಯ, ಮಾಲತೇಶ್ ಬಡಿಗೇರ್, ಅಶೋಕ್ ಬಾದರದಿನ್ನಿ, ಬಿ.ವಿ. ಕಾರಂತ್ ಅವರಂಥ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವೇ ಇಂದು ನಾನು ನಟನಾಗಿ ರೂಪುಗೊಳ್ಳಲು ಕಾರಣ’ಎನ್ನುವ ರವಿ, ತಮ್ಮ ನಟನಾ ಬದುಕಿಗೆ ಅಡಿಪಾಯ ಹಾಕಿಕೊಟ್ಟವರನ್ನೂ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ.
ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರು. ಅದರಲ್ಲಿ ಹಿರಿಯಣ್ಣನ ಪಾತ್ರ ನನ್ನದು. ನಮ್ಮ ನಡುವಿನ ಪ್ರೀತಿ ವಾತ್ಸಲ್ಯದ ಜತೆಗೆ ತಮ್ಮಂದಿರ ಜೀವನ ರೂಪಿಸಲು ಹಾಗೂ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಹೇಗೆ ಸಾಗುವುದು ಎಂಬುದು ಈ ಧಾರಾವಾಹಿಯ ಕಥಾಹಂದರ. ಪ್ರತಿ ಕಲಾವಿದರು ನಿರೀಕ್ಷಿಸುವಂತೆಯೇ ನಾವೂಜನಮೆಚ್ಚುಗೆಯ ನಿರೀಕ್ಷೆಯಲ್ಲಿ ಇದ್ದೇವೆ. ನಮ್ಮ ತಂಡವೂ ಉತ್ತಮವಾಗಿದ್ದು, ‘ವರಲಕ್ಷ್ಮಿ ಸ್ಟೋರ್ಸ್’ ಅಚ್ಚುಕಟ್ಟಾಗಿ ನಡೆಯುತ್ತಿದೆ ಎನ್ನುತ್ತಾರೆ ರವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.