ಬೆಂಗಳೂರು: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರ ಘಟ್ಟಮನೇನಿ ಅವರ ಇನ್‌ಸ್ಟಾಗ್ರಾಮ್ ಖಾತೆಯ ಹೆಸರನ್ನು ದುರುಪಯೋಗ ಮಾಡಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಜಿಎಂಬಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಿಎಂಬಿ ಎಂಟರ್‌ಟೈನ್‌ಮೆಂಟ್, ಸಿತಾರ ಘಟ್ಟಮನೇನಿ ಅವರ ಇನ್‌ಸ್ಟಾಗ್ರಾಮ್ ಖಾತೆಯ ಹೆಸರಿನಲ್ಲಿ ಅಪರಿಚಿತರು ಆನ್‌ಲೈನ್ ಗೇಮಿಂಗ್ ಹಾಗೂ ಇನ್ನಿತರೆ ಟ್ರೆಂಡಿಂಗ್ ಆ್ಯಪ್‌ಗಳ ಲಿಂಕ್‌ಗಳನ್ನು ಜನರಿಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಹೈದಾರಾಬಾದ್‌ನ ಮಾಧಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ರಮ ವಹಿಸಿದ್ದಾರೆ ಎಂದು ತಿಳಿಸಿದೆ.
ಈ ನಡುವೆ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು, ಸಿತಾರ ಘಟ್ಟಮನೇನಿಯ ಅಧಿಕೃತ ಖಾತೆ ಇದಾಗಿದೆ ಎಂದು ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಜನರು ಸೆಲೆಬ್ರಿಟಿ ಖಾತೆಗಳು ಅಧಿಕೃತವೋ ಇಲ್ಲವೊ ಎಂಬುವುದನ್ನು ಮೊದಲು ಪರಿಶೀಲಿಸಬೇಕು. ಸೆಲೆಬ್ರೆಟಿಗಳ ಹೆಸರಿನಲ್ಲಿರುವ ಅನಧಿಕೃತ ಖಾತೆಗಳಿಂದ ಬರುವ ಯಾವುದೇ ಸಂದೇಶಗಳನ್ನು ನಂಬಬೇಡಿ ಹಾಗೂ ಜಾಗರೂಕರಾಗಿರಿ ಎಂದು ಮನವಿ ಮಾಡಿದ್ದಾರೆ.
ಜಿಎಂಬಿ ಎಂಟರ್‌ಟೈನ್‌ಮೆಂಟ್ ಮಹೇಶ್ ಬಾಬು ಅವರ ಸಿನಿಮಾ ನಿರ್ಮಾಣ ಸಂಸ್ಥೆ.
ಸಿತಾರ ಘಟ್ಟಮನೇನಿ ಸಾಮಾಜಿಕ ಮಾಧ್ಯಮಗಳಲ್ಲಿ ನೃತ್ಯ ಸೇರಿದಂತೆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.