ADVERTISEMENT

ನನ್ನನ್ನು ಆತ್ಮಹತ್ಯೆಯ ಸನಿಹ ದೂಡಿದ್ದ ನಿರ್ಮಾಪಕ: ಚೇತನ್‌ ಭಗತ್‌ರಿಂದ ಹೊಸ ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2020, 15:15 IST
Last Updated 21 ಜುಲೈ 2020, 15:15 IST
ಲೇಖಕ ಚೇತನ್‌ ಭಗತ್‌
ಲೇಖಕ ಚೇತನ್‌ ಭಗತ್‌   

ಮುಂಬೈ: ಸುಶಾಂತ್‌ ಸಿಂಗ್‌ ರಜಪೂತ್ ಸಾವಿನ ಬೆನ್ನಲ್ಲೇ ಬಾಲಿವುಡ್‌ ಅಂಗಳದಲ್ಲಿ ವಿವಾದಿತ ಚರ್ಚೆಗಳು ಮುನ್ನೆಲೆಗೆ ಬರುತ್ತಲೇ ಇವೆ. ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗೆಗಿನ ಮಾತುಗಳಿಗೆ ಹಲವರು ದನಿಗೂಡಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಲೇಖಕ ಚೇತನ್‌ ಭಗತ್‌ ಹೊಸದೊಂದು ವಿವಾದಕ್ಕೆ ನಾಂದಿಹಾಡಿದ್ದಾರೆ.

ಬಾಲಿವುಡ್‌ ನಿರ್ಮಾಪಕ ವಿಧು ವಿನೋದ್ ಚೋಪ್ರಾ ನನ್ನನ್ನು ಆತ್ಯಹತ್ಯೆಯ ಸನಿಹ ದೂಡಿದ್ದರು ಎಂದು ಚೇತನ್‌ ಭಗತ್‌ ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಹಳೆಯ ಘಟನೆ, ಹೊಸ ವಿವಾದ, ಹಲವು ಚರ್ಚೆ: ಏನಿದರ ಹಿನ್ನೆಲೆ

ADVERTISEMENT

ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ಸುಶಾಂತ್‌ ಅವರ ಕೊನೆಯ ಚಿತ್ರದ ಬಗ್ಗೆ ಬರೆದುಕೊಂಡಿದ್ದ ಚೇತನ್‌ ಭಗತ್‌ ಚಿತ್ರ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

'ಸುಶಾಂತ್ ಅವರ ಕೊನೆಯ ಚಿತ್ರ ಈ ವಾರ ಬಿಡುಗಡೆಯಾಗಿದೆ. ನಾನು ಈಗ ಗಣ್ಯ ವಿಮರ್ಶಕರಿಗೆ ಹೇಳಲು ಬಯಸುತ್ತೇನೆ, ಸೂಕ್ಷ್ಮವಾಗಿ ಬರೆಯಿರಿ. ತುಂಬಾ ಬುದ್ದಿವಂತರಂತೆ ವರ್ತಿಸಬೇಡಿ. ಕಸವನ್ನು ಬರೆಯಬೇಡಿ. ಸಂವೇದನಾಶೀಲರಾಗಿ. ನಿಮ್ಮ ಕೊಳಕು ತಂತ್ರ ಉಪಯೋಗಿಸುವುದನ್ನು ನಿಲ್ಲಿಸಿ. ನೀವು ಸಾಕಷ್ಟು ಬದುಕುಗಳನ್ನು ಹಾಳು ಮಾಡಿದ್ದೀರಿ. ಈಗ ಅದನ್ನು ಬಿಟ್ಟುಬಿಡಿ' ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿದ್ದ ಚಿತ್ರ ವಿಮರ್ಶಕಿ ಅನುಪಮಾ ಚೋಪ್ರಾ 'ಪ್ರವಚನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಪ್ರತಿ ಬಾರಿಯೂ ನೀವು ಭಾವಿಸಿದಂತಿದ್ದೀರಿ' ಎಂದಿದ್ದರು.

ವಿಧು ವಿನೋದ್‌ ಚೋಪ್ರಾ ಪತ್ನಿಯೂ ಆಗಿರುವ ಅನುಪಮಾ ಚೋಪ್ರಾ ಅವರಿಗೆ ತಿರುಗೇಟು ನೀಡಿರುವ ಚೇತನ್‌ ಭಗತ್‌, 'ನಿಮ್ಮ ಪತಿ ಸಾರ್ವಜನಿಕವಾಗಿ ನನ್ನನ್ನು ಬೆದರಿಸಿದಾಗ, ಅತ್ಯುತ್ತಮ ಕಥೆ ಪ್ರಶಸ್ತಿಗಳನ್ನು ನಾಚಿಕೆಯಿಲ್ಲದೆ ಪಡೆದುಕೊಂಡಾಗ, ನನ್ನ ಕಥೆಗೆ ಕ್ರೆಡಿಟ್‌ ಕೊಡಲು ನಿರಾಕರಿಸಿದಾಗ, ನನ್ನನ್ನು ಆತ್ಮಹತ್ಯೆ ಸನಿಹಕ್ಕೆ ಕರೆದೊಯ್ದಿದ್ದಾಗ ನೀವು ಬರೀ ಗಮನಿಸುತ್ತ ಸುಮ್ಮನಿದ್ದಿರಿ. ಆಗ ಎಲ್ಲಿತ್ತು ನಿಮ್ಮ ಪ್ರವಚನ' ಎಂದು ಪ್ರತಿಕ್ರಿಯಿಸಿದ್ದರು.

ಚೇತನ್‌ ಭಗತ್‌ರ ಈ ಹೇಳಿಕೆ ಟ್ವಿಟರ್‌ನಲ್ಲಿ ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಚೇತನ್‌ ಭಗತ್‌ಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧಿಸಿ ಟ್ವೀಟ್‌ ಮಾಡಿದ್ದಾರೆ. ವಿಧು ವಿನೋದ್‌ ಚೋಪ್ರಾ ಬಗ್ಗೆ ಟ್ವೀಟ್‌ ಮಾಡುತ್ತಿದ್ದಂತೆ ಚೇತನ್‌ ಭಗತ್‌ ಹೆಸರು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.