ಬೆಂಗಳೂರು: ಪ್ರೇಮ ಬರಹ ಸಿನಿಮಾ ಒಪ್ಪಂದಕ್ಕೆ ಸಂಬಂಧಿಸಿದಂತೆನಟ, ನಿರ್ದೇಶಕ ಅರ್ಜುನ್ ಸರ್ಜಾ ಕಳುಹಿಸಿದ್ದ ಇ–ಮೇಲ್‌ನ್ನು ನಟ ಚೇತನ್ ಮಂಗಳವಾರ ಫೇಸ್‌ಬುಕ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.
‘ಪ್ರೇಮ ಬರಹ’ ಸಿನಿಮಾದಲ್ಲಿ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ನಟ ಚೇತನ್, ಶ್ರುತಿ ಹರಿಹರನ್ ಪರವಾಗಿ ನಿಂತು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಹಾಗೂಪ್ರಶಾಂತ್ ಸಂಬರ್ಗಿ ಮಾಡಿದ್ದ ಆರೋಪಕ್ಕೆ ಉತ್ತರದಂತೆ ಪೋಸ್ಟ್ ಪ್ರಕಟಿಸಿದ್ದಾರೆ.
‘ಅರ್ಜುನ್ ಸರ್ಜಾ ನಿರ್ದೇಶನದ ‘ಪ್ರೇಮ ಬರಹ’ ಚಿತ್ರಕ್ಕೆ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದರು. ಅದಕ್ಕಾಗಿ ಹತ್ತು ಲಕ್ಷ ಮುಂಗಡ ಹಣವನ್ನೂ ಪಡೆದುಕೊಂಡಿದ್ದರು. ನಂತರ ಅವರ ಅಭಿನಯ ಇಷ್ಟವಾಗದೆ ಚಿತ್ರದ ನಾಯಕನನ್ನು ಬದಲಾಯಿಸಲಾಯಿತು. ಮುಂಗಡ ಹಣವನ್ನು ವಾಪಸ್ ಕೊಡಲು ಸಾಧ್ಯವಾಗದೆ, ಶ್ರುತಿ ಅವರನ್ನು ಮುಂದಿಟ್ಟುಕೊಂಡು ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. ಜೊತೆಗೆ ‘ಹಣ ವಾಪಸ್ ನೀಡುವಂತೆ ಚೇತನ್‌ಗೆ ನೋಟೀಸ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರೋಪನ್ನು ತಳ್ಳಿಹಾಕಿರುವ ಚೇತನ್, ‘ಮುಂಗಡ ಹಣ ತೆಗೆದುಕೊಂಡಿರುವುದು ನಿಜ. ಆದರೆ ಅದಕ್ಕೂ ಶ್ರುತಿ ಹರಿಹರನ್ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಯಾವ ನೋಟೀಸ್ ಕೂಡ ಬಂದಿಲ್ಲ. ಅರ್ಜುನ್ ಅವರು ನನ್ನ ಬಳಿ ನೇರವಾಗಿ ಕೇಳಿದರೆ ಈಗಲೇ ಹಣ ವಾಪಸ್ ಕೊಡಲು ಸಿದ್ಧ’ ಎಂದು ಸೋಮವಾರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ್ದರು.
’ನನ್ನ ಮುಂದಿನ ಸಿನಿಮಾದಲ್ಲಿ ನೀವೇ ಪ್ರಮುಖ ಪಾತ್ರವಹಿಸಲಿದ್ದೀರಿ. ಮುಂದಿನ ಚಿತ್ರದಲ್ಲಿ ನೀವೇ ಪ್ರಮುಖ ಪಾತ್ರದಲ್ಲಿರುವುದನ್ನು ಬೇಕಾದರೇ ಈಗಲೇ ಘೋಷಿಸುತ್ತೇನೆ. ಈ ಮಾತಿಗೆ ನಾನು ಬದ್ಧನಾಗಿರುತ್ತೇನೆ. ನೀಡಿರುವ ಮುಂಗಡ ಹಣ ಅದಕ್ಕಾಗಿಯೇ ನಿಮ್ಮಲ್ಲಿರಲಿ..’ ಹೀಗೆ ಅರ್ಜುನ್ ಸರ್ಜಾ ಇ–ಮೇಲ್ ಮೂಲಕ ತಿಳಿಸಿರುವುದನ್ನು ಚೇತನ್ ಬಹಿರಂಗ ಪಡಿಸಿದ್ದಾರೆ.
ರಾಜಕೀಯ, ಧರ್ಮ ಹಾಗೂ ವೈಯಕ್ತಿಕ ನೆಲೆಯಲ್ಲಿನ ವೈಷಮ್ಯದ ಸರಕುಗಳನ್ನು ಬಳಸಿ ಕನ್ನಡ ಚಿತ್ರರಂಗದಲ್ಲಿ ಸಮಾನತೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸಲಾಗುತ್ತಿದೆ. ಈ ಘಟನೆಗಳು ನನ್ನನ್ನು ಘಾಸಿಗೊಳಿಸಿವೆ ಎನ್ನುತ್ತಲೇಮೂರು ವರ್ಷಗಳ ಹಿಂದಿನ ಘಟನೆಯನ್ನು ಚೇತನ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
’ಕೆಲವು ವರ್ಷದ ಹಿಂದೆ ನಾನು ಅರ್ಜುನ್ ಸರ್ಜಾ ಅವರ ಜತೆ ಪ್ರೇಮ ಬರಹ ಎಂಬ ಸಿನಿಮಾ ಮಾಡಬೇಕು ಎಂಬ ಪ್ಲ್ಯಾನ್ ಇತ್ತು. ಅವರು ನನ್ನ ಬಳಿ ನಟಿಸುವಂತೆ ಕೇಳಿದ್ದರು. ಒಂಬತ್ತು ಲಕ್ಷ ರೂಪಾಯಿ ಮುಂಗಡ ಹಣವನ್ನೂ ಕೊಟ್ಟರು. ಆಮೇಲೆ ಫೋಟೊ ಶೂಟ್ ಮಾಡಿದ್ವಿ. ಪ್ರೀಶೂಟ್ ಅನ್ನೂ ಮಾಡಿದ್ದೆವು. ಅರ್ಜುನ್ ಸರ್ಜಾ ನನ್ನ ಜತೆಗೆ ಚೆನ್ನಾಗಿಯೇ ನಡೆದುಕೊಂಡಿದ್ದಾರೆ. ಬಹಳ ವೃತ್ತಿಪರವಾಗಿ ನಡೆದುಕೊಂಡಿದ್ದಾರೆ. ಪ್ರೀತಿ ತೋರಿಸಿದ್ದಾರೆ....’ ಪೂರ್ಣ ಓದು:ಕೊಟ್ಟ ಮುಂಗಡ ಹಣವನ್ನು ಅರ್ಜುನ್ ಸರ್ಜಾ ವಾಪಸ್ ಕೇಳಿದರೆ ಕೊಡುವೆ: ಚೇತನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.