ADVERTISEMENT

‘ಛಪಾಕ್‌’ ನಟನ ಚಮಕ್‌ ಮಾತು

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:30 IST
Last Updated 9 ಜನವರಿ 2020, 19:30 IST
ವಿಕ್ರಾಂತ್ ಮೇಸಿ ಜೊತೆ ದೀಪಿಕಾ ಪಡುಕೋಣೆ
ವಿಕ್ರಾಂತ್ ಮೇಸಿ ಜೊತೆ ದೀಪಿಕಾ ಪಡುಕೋಣೆ    

‘ನನ್ನ ಪಾಲಿಗೆ ನಿಜ ಜೀವನದ ಜನಸಾಮಾನ್ಯರೇ ಹೀರೊಗಳು. ಅವರನ್ನು ತೆರೆಯ ಮೇಲೆ ತೋರಿಸಬೇಕು. ಆದರೆ, ಸಿನಿಮಾ ಉದ್ಯಮವು ಬಹುಕಾಲದಿಂದಲೂ ಸಾಮಾನ್ಯ ವ್ಯಕ್ತಿಗಳನ್ನು ನಿರ್ಲಕ್ಷಿಸಿದೆ. ನನ್ನ ಸಿನಿಮಾಗಳ ಮೂಲಕ ಆ ಸಾಮಾನ್ಯ ವ್ಯಕ್ತಿಯನ್ನು ಕೇಂದ್ರ ಸ್ಥಾನಕ್ಕೆ ಕರೆತರಬೇಕು...’

–ಹೀಗೆ ಹೇಳಿದವರು ನಟ ವಿಕ್ರಾಂತ್ ಮೇಸಿ. ‘ನಾನೊಬ್ಬ ಕಲಾವಿದನಾಗಿ ಸಾಮಾನ್ಯ ವ್ಯಕ್ತಿಗಳ ದನಿಯಾಗಿ ಕೆಲಸ ಮಾಡಬಲ್ಲೆ’ ಎಂದೂ ವಿಕ್ರಾಂತ್ ಹೇಳುತ್ತಾರೆ. ಅವರು ಅಭಿನಯಿಸಿರುವ, ಆ್ಯಸಿಡ್ ದಾಳಿಗೆ ತುತ್ತಾದವಳ ಕಥೆ ಹೊಂದಿರುವ ‘ಛಪಾಕ್’ ಚಿತ್ರ ಶುಕ್ರವಾರ (ಜ. 10) ತೆರೆಗೆ ಬರುತ್ತಿದೆ. ದೀಪಿಕಾ ಪಡುಕೋಣೆ ಅವರದ್ದು ಈ ಚಿತ್ರದಲ್ಲಿ ಮುಖ್ಯ ಪಾತ್ರ.

ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿಕ್ರಾಂತ್, ‘ನಾನು ಜೀವನದಲ್ಲಿ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಆ ಹೋರಾಟಗಳ ಕಾರಣದಿಂದಾಗಿ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ’ ಎನ್ನುತ್ತಾರೆ.

ADVERTISEMENT

‘ನೀನು ಟಿ.ವಿ. ಕಾರ್ಯಕ್ರಮಗಳಲ್ಲಿ ನಟಿಸುವವ, ಸಿನಿಮಾಗಳಲ್ಲಿ ಕೆಲಸ ಮಾಡಲು ನಿನ್ನಿಂದ ಆಗದು ಎಂದು ನನ್ನಲ್ಲಿ ಕೆಲವರು ಹೇಳುತ್ತಿದ್ದರು. ಆದರೆ, ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದೆ. ಇಲ್ಲಿಗೆ ಬಂದಾಗ, ನೀನು ಹೀರೊನ ಸ್ನೇಹಿತನ ‍ಪಾತ್ರ ಮಾತ್ರ ನಿಭಾಯಿಸಬಲ್ಲೆ ಎಂದು ಕೆಲವರು ಹೇಳಿದರು. ಈಗ ನಾನೇ ಚಿತ್ರದ ನಾಯಕನ ಪಾತ್ರ ನಿಭಾಯಿಸಿದ್ದೇನೆ’ ಎಂದು ವಿಕ್ರಾಂತ್ ಅವರು ತಮ್ಮ ಸಿನಿಮಾ ಯಾನದ ಬಗ್ಗೆ ಹೇಳುತ್ತಾರೆ.

‘ಛಪಾಕ್ ಚಿತ್ರದಲ್ಲಿನ ಅಮೋಲ್ (ಈ ಪಾತ್ರವನ್ನು ವಿಕ್ರಾಂತ್ ನಿಭಾಯಿಸಿದ್ದಾರೆ) ಒಬ್ಬ ಸಾಮಾನ್ಯ ವ್ಯಕ್ತಿ. ಇಂತಹ ವ್ಯಕ್ತಿಗಳೇ ನನಗೆ ಹೀರೊಗಳು. ನಾನು ತರಬೇತಿ ಪಡೆದ ಕಲಾವಿದ ಅಲ್ಲವಾಗಿರುವ ಕಾರಣ, ನಾನು ಯಾವಾಗಲೂ ಸಮಾಜದಿಂದ ಸ್ಫೂರ್ತಿ ಪಡೆಯುತ್ತಿರುತ್ತೇನೆ’ ಎನ್ನುವುದು ಅಭಿನಯ ಕಲೆಯ ಕುರಿತು ವಿಕ್ರಾಂತ್ ಹೇಳುವ ಮಾತು.

‘ನಾನು ಪ್ರಯಾಣ ಮಾಡುತ್ತಿರುವ ವ್ಯಕ್ತಿ. ಪ್ರಯಾಣದಲ್ಲಿ ಪಡೆದ ಅನುಭವಗಳನ್ನೆಲ್ಲ ತೆರೆಯ ಮೇಲೆ ತರಲು ಬಯಸುವೆ. ನಾನಿನ್ನೂ ಚಿಕ್ಕವ. ಇನ್ನೂ ಕಲಿಕೆಯ ಹಂತದಲ್ಲಿ ಇರುವ ನಾನು, ನನ್ನ ಸುತ್ತ ಕಂಡಿದ್ದನ್ನೆಲ್ಲ ತೆರೆಯ ಮೇಲೆ ತರಲು ಬಯಸುತ್ತಿರುತ್ತೇನೆ. ವೀಕ್ಷಕರು ನನ್ನನ್ನು ಇಷ್ಟಪಡುತ್ತಾರೆ, ನನ್ನ ಜೊತೆ ನಗುವುದು ಅಳುವುದು ಮಾಡುತ್ತಾರೆ. ನಾನು ನಿಭಾಯಿಸುವ ಪಾತ್ರಗಳಿಂದ ತಾವೂ ಒಂದಿಷ್ಟು ಪಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ನನ್ನದು’ ಎಂದು ಅವರು ಹೇಳುತ್ತಾರೆ.

ವಿಕ್ರಾಂತ್ ಅವರು ಮೇಘನಾ ಗುಲ್ಜಾರ್ ನಿರ್ದೇಶನದ ‘ರಾಝಿ’ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಆದರೆ ಈಗ ‘ಛಪಾಕ್’ ಸಿನಿಮಾದಲ್ಲಿ ಅವರ ನಿರ್ದೇಶನದ ಅಡಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ವಿಕ್ರಾಂತ್ ಅವರಿಗೆ ಖುಷಿ ತಂದುಕೊಟ್ಟಿದೆ.

‘ಛಪಾಕ್‌ ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆಗಳೆಲ್ಲ ಸ್ಫೂರ್ತಿದಾಯಕವಾಗಿವೆ. ಮೇಘನಾ ಮತ್ತು ದೀಪಿಕಾ ಜೊತೆ ಕೆಲಸ ಮಾಡುವುದು ನನಗೆ ಒಂದು ಅವಕಾಶವಾಗಿತ್ತು. ಆ ಕಥೆಯನ್ನು (ಆ್ಯಸಿಡ್ ದಾಳಿಗೆ ತುತ್ತಾದವಳ ಕಥೆ) ಸಿನಿಮಾ ಮಾಡಿದ್ದು ಕೂಡ ಒಂದು ಅವಕಾಶ. ಈ ಚಿತ್ರ ತಂಡದ ಸದಸ್ಯನಾಗುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ಒಂದು ಅದೃಷ್ಟ’ ಎಂಬುದು ವಿಕ್ರಾಂತ್ ಅವರ ಅಭಿ‍ಪ್ರಾಯ.

ಆ್ಯಸಿಡ್ ದಾಳಿಯ ಕ್ರೌರ್ಯದ ಬಗ್ಗೆ ಜಾಗೃತಿ ಮೂಡಿಸುವುದು ‘ಛಪಾಕ್’ ಚಿತ್ರದ ಉದ್ದೇಶ. ‘ಆ್ಯಸಿಡ್ ಎರಚಿ ದಾಳಿ ನಡೆಸುವುದು ಅತ್ಯಂತ ಹೀನ ಕ್ರೌರ್ಯ. ಯಾರೂ ಇದಕ್ಕೆ ತುತ್ತಾಗಬಾರದು. ಈ ರೀತಿ ಬೇರೆಯವರ ಜೀವನದಲ್ಲಿ ಪರಿಣಾಮ ಉಂಟುಮಾಡುವ ಅಧಿಕಾರ ಯಾರಿಗೂ ಇಲ್ಲ. ಈ ಚಿತ್ರವನ್ನು ಜನ ಸರಿಯಾದ ರೀತಿಯಲ್ಲಿ ಗ್ರಹಿಸಿ, ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗಲಿ ಎಂಬುದು ನಮ್ಮ ಬಯಕೆ’ ಎಂದು ಅವರು ಹೇಳುತ್ತಾರೆ.

*
ಜಗತ್ತನ್ನು ಬದಲಿಸಲು ನಾನು ಪ್ರಯತ್ನ ಮಾಡುತ್ತಿಲ್ಲ. ಆದರೆ, ಜನ ತಮ್ಮನ್ನು ಅರಿತುಕೊಂಡು, ನಾನು ಮಾಡುವ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತೆ ಆಗಲಿ ಎಂಬುದು ನನ್ನ ಬಯಕೆ.
-ವಿಕ್ರಾಂತ್ ಮೇಸಿ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.