ನವದೆಹಲಿ (ಪಿಟಿಐ): ‘ಗುಜರಾತಿ ಚಲನಚಿತ್ರ ‘ಛೆಲ್ಲೊ ಶೋ’ 95ನೇ ಅಕಾಡೆಮಿ ಪ್ರಶಸ್ತಿಗೆ (2023ರ ಆಸ್ಕರ್ ಪ್ರಶಸ್ತಿ) ಅಧಿಕೃತ ಪ್ರವೇಶ ಪಡೆದಿರುವ ಭಾರತೀಯ ಚಲನಚಿತ್ರವಾಗಿದೆ’ ಎಂದು ಭಾರತೀಯ ಚಲನಚಿತ್ರ ಫೆಡರೇಷನ್ (ಎಫ್‌ಎಫ್‌ಐ) ಮಂಗಳವಾರ ತಿಳಿಸಿದೆ.
ಪಾನ್ ನಳಿನ್ ನಿರ್ದೇಶಿಸಿರುವ ಈ ಚಿತ್ರವು ಅಕ್ಟೋಬರ್ 14ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮುಖ್ಯಪಾತ್ರಗಳಲ್ಲಿ ಭವಿನ್ ರಾಬರಿ, ಭವೇಶ್ ಶ್ರೀಮಲಿ, ರಿಚಾ ಮೀನಾ, ದಿಪೇನ್ ರಾವಲ್ ಮತ್ತು ಪರೇಶ್ ಮೆಹ್ತಾ ಅವರು ಕಾಣಿಸಿಕೊಂಡಿದ್ದಾರೆ.
ಗುಜರಾತ್‌ನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಕಳೆವ ವೇಳೆ ತಾವು ಚಲನಚಿತ್ರಗಳಿಗೆ ಮನಸೋಲುತ್ತಿದ್ದ ನೆನಪುಗಳನ್ನೇ ಸ್ಫೂರ್ತಿಯಾಗಿಸಿಕೊಂಡು ನಿರ್ದೇಶಕ ನಳಿನ್ ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನ ಕಳೆದ ವರ್ಷ ಜೂನ್‌ನ ಆವೃತ್ತಿಯಲ್ಲಿ ಈ ಚಿತ್ರವನ್ನು ಮೊದಲಬಾರಿಗೆ ಪ್ರದರ್ಶಿಸಲಾಗಿತ್ತು.ಸ್ಪೇನ್‌ನಲ್ಲಿ ನಡೆದ 66ನೇ ವಲ್ಲಾಡೋಲಿಡ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರದರ್ಶನಗೊಂಡು ‘ಗೋಲ್ಡನ್ ಸ್ಪೈಕ್’ ಪ್ರಶಸ್ತಿ ಪಡೆದಿತ್ತು. ಇದರ ಜೊತೆ, ಹಲವಾರು ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡು, ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಚಿತ್ರವನ್ನು ರಾಯ್ ಕಪೂರ್ ಫಿಲ್ಮ್ಸ್, ಜುಗಾಡ್ ಮೋಷನ್ ಪಿಕ್ಚರ್ಸ್, ಮಾನ್ಸೂನ್ ಫಿಲ್ಮ್ಸ್, ಛೆಲ್ಲೊ ಶೋ ಎಲ್‌ಎಲ್‌ಪಿ ಮತ್ತು ಮಾರ್ಕ್ ಡ್ಯುಯೇಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ.
ಛೆಲ್ಲೊ ಶೋ ಎಂದರೆ ‘ಕೊನೆಯ ಚಿತ್ರ ಪ್ರದರ್ಶನ’ ಎಂದರ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.