* ನಿನಗೆ ಪ್ರಶಸ್ತಿ ತಂದುಕೊಟ್ಟಿರುವ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ?
ಡಿ. ಸತ್ಯಪ್ರಕಾಶ್ ಈ ಚಿತ್ರದ ನಿರ್ದೇಶಕರು. ನಾನು ಈ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆದವನು. ಮೈಸೂರಿನಲ್ಲಿ ನಡೆದ ಆಡಿಷನ್ ಪ್ರಕ್ರಿಯೆಯ ಬಗ್ಗೆ ನನ್ನ ತಂದೆಗೆ ಹೇಗೋ ಗೊತ್ತಾಗಿ, ಅವರು ನನ್ನಲ್ಲಿ ಹೇಳಿದ್ದರು. ಅಲ್ಲಿ ಕೊನೆಯವನಾಗಿ ಪಾಲ್ಗೊಂಡೆ. ಅಲ್ಲಿ ಒಂದೆರಡು ಡೈಲಾಗ್‌ಗಳನ್ನು ಹೇಳಬೇಕಿತ್ತು, ಹೇಳಿದೆ. ‘ನಾವು ಹೇಳಿದ್ದನ್ನು ತಕ್ಷಣಕ್ಕೆ ಗ್ರಹಿಸಿ, ಅಭಿನಯಿಸಿದ್ದೀಯ’ ಎಂದು ಹೇಳಿ ನನ್ನನ್ನು ನಿರ್ದೇಶಕರು ಆ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.
* ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಹೇಗಿತ್ತು?
ಅಪ್ಪ–ಅಮ್ಮನನ್ನು ಬಿಟ್ಟು ಸಿನಿಮಾ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿ ಮೂರು ತಿಂಗಳು ಇದ್ದೆ. ಚಿತ್ರತಂಡವು ನನ್ನನ್ನು ಅಪ್ಪ–ಅಮ್ಮನ ರೀತಿಯಲ್ಲೇ ನೋಡಿಕೊಂಡಿತು. ಸಿನಿಮಾ ತಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಕಾರಣ, ಅಪ್ಪ– ಅಮ್ಮನ ನೆನಪು ತೀವ್ರವಾಗಿ ಕಾಡಲಿಲ್ಲ. ಸಿನಿಮಾದಲ್ಲಿ ಅಭಿನಯಿಸುವ ಮೊದಲು ನನಗೆ ಸಿನಿಮಾ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಅವರು ಹೇಳಿಕೊಟ್ಟಂತೆ ಅಭಿನಯಿಸಿದೆ.
* ಈ ಸಿನಿಮಾ ಇಷ್ಟೊಂದು ಹೆಸರು ಮಾಡುತ್ತೆ ಅಂತ ಅನಿಸಿತ್ತಾ?
ಈ ಸಿನಿಮಾ ಬಗ್ಗೆ ತುಂಬಾ ನಿರೀಕ್ಷೆಗಳು ಇದ್ದಿದ್ದು ಹೌದು. ಆದರೆ ಈ ಪ್ರಶಸ್ತಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಈಗ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಂದ ಅದನ್ನು ಸ್ವೀಕರಿಸಿದ್ದೇನೆ. ನನಗೆ ಪ್ರಶಸ್ತಿ ಬಂದಿರುವುದಕ್ಕೆ ನನ್ನ ತಾತ ಕಾರಣ. ಹಾಗೇ, ನನ್ನ ಅಕ್ಕ ಕೂಡ ನನಗೆ ತುಂಬಾ ಬೆಂಬಲ ನೀಡಿದ್ದಳು.
* ನಟನೆಯಲ್ಲಿ ಮುಂದುವರಿಯುತ್ತೀಯಾ?
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದೇನೆ. ನನಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇದೆ. ನಟನೆಯನ್ನೂ ಮುಂದುವರಿಸುತ್ತೇನೆ. ‘ಪ್ರವೀಣ’ ಎನ್ನುವ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ. ನಾನು ಪ್ರವೀಣನ ಪಾತ್ರ ಮಾಡುತ್ತಾ ಇದ್ದೇನೆ. ಅವನು ಒಬ್ಬ ಜೋಕರ್.
* ಮುಂದೆ ಏನಾಗಬೇಕು ಅಂದುಕೊಂಡಿದ್ದೀಯ?
ಸಿ.ಎ. ಆಗಬೇಕು ಎಂಬ ಆಸೆ ಇದೆ. ಆದರೆ ಎಸ್‌ಎಸ್‌ಎಲ್‌ಸಿ ಹಂತಕ್ಕೆ ಬಂದ ನಂತರ, ಮುಂದೆ ಏನಾಗಬೇಕು ಎಂಬುದನ್ನು ಸ್ಪಷ್ಟವಾಗಿ ತೀರ್ಮಾನಿಸುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.