ಮುಂಬೈ: ಸಿನಿಮಾ ಹಾಗೂ ಟಿವಿ ಅಂತಹ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದಿನಕ್ಕೆಸರಾಸರಿ 12 ತಾಸು ಕೆಲಸ ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಈ ಬಗ್ಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಎನ್‌ಜಿಒ ‘ಚೈಲ್ಡ್ ರೈಟ್ಸ್ ಆ್ಯಂಡ್ ಯು’ (ಸಿಆರ್‌ವೈ) ಎನ್ನುವ ಸಂಸ್ಥೆ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
ಶೀಘ್ರ ಜನಪ್ರಿಯತೆ ಸಿಗಬೇಕು ಎಂಬ ಹಂಬಲದಿಂದ ಹಾಗೂ ಔಪಚಾರಿಕ ಶಿಕ್ಷಣದ ಬಗೆಗಿನ ನಿರ್ಲಕ್ಷ್ಯ ಮತ್ತು ತಂದೆ–ತಾಯಿಗಳ ಅಲಕ್ಷ್ಯದಿಂದ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಯಾವುದೇ ವಿಶ್ರಾಂತಿ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಸಿಆರ್‌ವೈ ಹೇಳಿದೆ. ಮುಂಬೈನಲ್ಲಿನ ಮನರಂಜನಾ ಕ್ಷೇತ್ರದಲ್ಲಿನ ಆಯ್ದ ಸಂಸ್ಥೆಗಳಲ್ಲಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ.
ದೇಶದಲ್ಲಿ ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಮಕ್ಕಳ ನಿಖರ ಸಂಖ್ಯೆ ಲಭ್ಯವಿಲ್ಲ. ಆದರೆ ಸಿಆರ್‌ವೈ ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ 7 ಕಾಸ್ಟಿಂಗ್ ಸಂಸ್ಥೆಗಳಲ್ಲಿ 41,392 ಜನ ದುಡಿಯಲು ಲಭ್ಯರಿದ್ದಾರೆ ಎಂದು ಹೇಳಲಾಗಿದೆ.ಇದರಲ್ಲಿ ಶೇ 24.9 ರಷ್ಟು ಬಾಲ ಕಾರ್ಮಿಕರೇ ಇದ್ದಾರೆ ಎಂದುಸಿಆರ್‌ವೈ ಹೇಳಿದೆ. ಈ ಏಳೂ ಕಾಸ್ಟಿಂಗ್ ಸಂಸ್ಥೆಗಳಲ್ಲಿ 3,792 ಜನ ಬಾಲಕಿಯರು ಮನರಂಜನಾ ಕ್ಷೇತ್ರದಲ್ಲಿ ದುಡಿಯಲು ಇದ್ದಾರೆ ಎಂದು ಅದು ತಿಳಿಸಿದೆ.
ಇವರೆಲ್ಲ 18 ವರ್ಷ ವಯೋಮಾನದ ಕೇಳಗಿನವರು ಎಂದುಸಿಆರ್‌ವೈ ಹೇಳಿದೆ. ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಪ್ರಕಾರ ಯಾವುದೇ ಮಗು ದಿನಕ್ಕೆ 5 ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡುವ ಹಾಗಿಲ್ಲ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಬಾಲಕ ಬಾಲಕಿಯರು ವಾರದಲ್ಲಿ ಆರೂ ದಿನವೂ 12 ರಿಂದ 13 ತಾಸು ಕೆಲಸ ಮಾಡುತ್ತಾರೆ ಎಂದು ಸಿಆರ್‌ವೈ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಸಿಆರ್‌ವೈನ ಪಶ್ಚಿಮ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಕರಿನ್ನಾ ರಬಾಡಿ, ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಮಕ್ಕಳು ಬಾಲ ಕಾರ್ಮಿಕ ಪದ್ದತಿಯ ಅಗೋಚರ ಸಂತ್ರಸ್ತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.