ಬೆಂಗಳೂರು/ರಾಮನಗರ: ತೀವ್ರ ಹೃದಯಾಘಾತದಿಂದ ಮೃತಪಟ್ಟ ಚಿತ್ರನಟ ಚಿರಂಜೀವಿ ಸರ್ಜಾ ಅವರ ಅಂತ್ಯಸಂಸ್ಕಾರವು ದುಃಖತಪ್ತ ಕುಟುಂಬದ ಸದಸ್ಯರು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಬೆಂಗಳೂರಿನ ಕನಕಪುರ ರಸ್ತೆಗೆ ಸಮೀಪದ ನೆಲಗುಳಿ ಬಳಿಯ ತೋಟದ ಮನೆಯ ಆವರಣದಲ್ಲಿ ಸೋಮವಾರ ಸಂಜೆ ನಡೆಯಿತು. ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಚಿರಂಜೀವಿಅವರ ತಂದೆ ವಿಜಯ್ ಕುಮಾರ್ ನಡೆಸಿದರು.
ಹಿಂದೂ ಧಾರ್ಮಿಕ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದ ಅಂತ್ಯಸಂಸ್ಕಾರದಲ್ಲಿ ಚಿರಂಜೀವಿ ಅವರ ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ, ಮೇಘನಾ ಅವರ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯ್, ಚಿರಂಜೀವಿ ಕುಟುಂಬದ ಇತರ ಸದಸ್ಯರು, ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು. ಅಂತ್ಯಸಂಸ್ಕಾರ ನಡೆದ ತೋಟದ ಮನೆಯು ಧ್ರುವ ಅವರಿಗೆ ಸೇರಿದ್ದಾಗಿದೆ.
ಅಂತ್ಯಸಂಸ್ಕಾರದ ವೇಳೆ ಪತಿಯ ಶವದ ಸಮೀಪದಲ್ಲೇ ಕುಳಿತಿದ್ದ ಮೇಘನಾ ಅವರು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲಾರದೆ,ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಗಂಡನ ಮೃತದೇಹದ ಮೇಲೆ ಬಾಗಿ ಮೇಘನಾ ಅವರು, ಹಣೆಗೆ ಮುತ್ತಿಕ್ಕಿದರು. ದುಃಖತಪ್ತ ಮೇಘನಾ ಅವರಿಗೆ ಧ್ರುವ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು. ನಡುವೆ ಧ್ರುವ ಅವರೂ ಭಾವುಕರಾದರು. ಮೇಘನಾ–ಚಿರಂಜೀವಿ ಎರಡು ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ನೆಲಗುಳಿಯ ತೋಟದ ಮನೆಗೆ ತರುವ ಮುನ್ನ ಚಿರು ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಮೃತದೇಹವನ್ನು ತೋಟದ ಮನೆಗೆ ಸಾಗಿಸುವ ಮಾರ್ಗದ ಅಕ್ಕಪಕ್ಕದಲ್ಲಿ ನೂರಾರು ಜನ ನಿಂತಿದ್ದರು. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಯತ್ನಿಸಿದರು.
ನೆಚ್ಚಿನ ನಟನನ್ನು ಕಡೆಯ ಬಾರಿಗೆ ನೋಡುವ ಆಸೆಯಿಂದ ತೋಟದ ಮನೆಯ ಸುತ್ತ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸರು ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಸಚಿವ ಆರ್. ಅಶೋಕ, ಶಾಸಕರಾದ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ರಾಮಲಿಂಗಾರೆಡ್ಡಿ, ಚಿತ್ರನಟರಾದ ದೊಡ್ಡಣ್ಣ, ಸಾಧು ಕೋಕಿಲ, ನಿರ್ಮಾಪಕರಾದ ಕೆ. ಮಂಜು ಮತ್ತು ರಾಮು ಸೇರಿದಂತೆ ಹಲವು ಗಣ್ಯರು ಚಿರಂಜೀವಿ ಅವರ ಅಂತಿಮ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.