ADVERTISEMENT

ಚಿರು ಕೊನೆಯ ಸಿನಿಮಾದ ಭಾವುಕ ಕ್ಷಣಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 23:11 IST
Last Updated 5 ಅಕ್ಟೋಬರ್ 2023, 23:11 IST
ಚಿರು ಸರ್ಜಾ
ಚಿರು ಸರ್ಜಾ   

ಅಲ್ಪಾವಧಿಯಲ್ಲಿಯೇ ಚಿತ್ರರಂಗದಲ್ಲಿ ಗುರುತಾಗಿದ್ದ ನಟ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ನಿಧನರಾಗಿದ್ದರು.  ‘ರಾಜಮಾರ್ತಾಂಡ’ ಅವರ ಕೊನೆಯ ಸಿನಿಮಾ. ಅವರು ಬದುಕಿದ್ದಾಗಲೇ ಅದರ ಚಿತ್ರೀಕರಣ ಮುಕ್ತಾಯಗೊಂಡಿತ್ತು. ಡಬ್ಬಿಂಗ್ ಮಾತ್ರ ಬಾಕಿಯಿತ್ತು‌. ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿ ಚಿತ್ರವನ್ನು ಪೂರ್ತಿಗೊಳಿಸಿದ್ದು, ಅಂತಿಮವಾಗಿ ಈ ಚಿತ್ರ ತೆರೆ ಕಾಣುತ್ತಿದೆ.

‘‘2018ರಲ್ಲಿ ಪ್ರಾರಂಭಗೊಂಡಿದ್ದ ಚಿತ್ರ ಇದು. ಕರೋನಾ ಪ್ರಾರಂಭಕ್ಕೂ ಮೊದಲು ಚಿತ್ರೀಕರಣ ಮುಕ್ತಾಯಗೊಂಡಿತ್ತು. 60 ದಿನಗಳಿಗೂ ಹೆಚ್ಚು ಕಾಲ ಬೆಂಗಳೂರು, ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೆವು. ಚಿರು ಸರ್ಜಾ 35–40 ದಿನಗಳ ಕಾಲ ನಮ್ಮ ಜೊತೆಗಿದ್ದರು. ಅಜ್ಜಿಗೆ ಪ್ರೀತಿಯ ಮೊಮ್ಮಗನ ಪಾತ್ರದಲ್ಲಿ ಚಿರು ಕಾಣಿಸಿಕೊಂಡಿದ್ದಾರೆ. ಅಜ್ಜಿ ಆತನನ್ನು ಕೆಲಸ, ಕಾರ್ಯ ನೀಡದೆ ರಾಜನಂತೆ ಬೆಳೆಸುತ್ತಿರುತ್ತಾರೆ. ಪಾತ್ರದ ಹೆಸರು ಕೂಡ ‘ರಾಜ’’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌.

‘ಚಿರು ಸೆಟ್‌ನಲ್ಲಿ ತುಂಬಾ ಜಾಲಿ ವ್ಯಕ್ತಿ. ಮುನಿಸು, ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಚಿತ್ರದ ಡಬ್ಬಿಂಗ್‌ ಬಾಕಿಯಿತ್ತು. ನಾಲ್ಕು ಫೈಟ್‌ಗಳಿವೆ. ನಾಲ್ಕು ಹಾಡುಗಳಿದ್ದವು. ಆ ಪೈಕಿ ಎರಡರ ಚಿತ್ರೀಕರಣ ಮಾತ್ರ ಆಗಿದೆ. ಇನ್ನೆರಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಆಲೋಚನೆಯಿತ್ತು. ಆದರೆ ಅಷ್ಟರೊಳಗೆ ಚಿರು ಹೋಗಿಬಿಟ್ಟರು’ ಎಂದು ಹಳೆಯ ದಿನಗಳನ್ನು ರಾಮ್‌ನಾರಾಯಣ್ ನೆನ‍ಪಿಸಿಕೊಂಡರು .  

ADVERTISEMENT

ಚಿರು ಟೀಸರ್‌ಗೆ ಡಬ್ಬಿಂಗ್‌ ಮಾಡಿದ್ದರು. ಆ ಟೀಸರ್‌ ಅನ್ನು ಸಿನಿಮಾದಲ್ಲಿಯೂ ಉಳಿಸಿಕೊಳ್ಳಲಾಗಿದೆ. ‘ಚಿರು ಕರೋನಾ ಮೊದಲ ಅಲೆ ಮುಗಿಯುತ್ತಿದ್ದಂತೆ ಒಂದು ದಿನ ಸಿನಿಮಾ ನೋಡೋಣ ಎಂದರು. ಡಿಟಿಎಸ್‌ ನಡೆಯುತ್ತಿತ್ತು. ನಮ್ಮ ಮನೆಗೆ ಬಂದು ಹೆಗಲ ಮೇಲೆ ಕೈಹಾಕಿ ನಿಂತುಕೊಂಡೇ ಸಿನಿಮಾ ನೋಡಿದರು. ಈ ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ನನಗೊಂದು ದೊಡ್ಡ ಬ್ರೇಕ್‌ ಕೊಡಲಿದೆ ಎಂದಿದ್ದರು ಚಿರು. ಚಿತ್ರದ ಮೊದಲಾರ್ಧ ಮಾತ್ರ ತೋರಿಸಿದ್ದೆ. ದ್ವಿತೀಯಾರ್ಧವನ್ನು ಅವರು ಕೊನೆಗೂ ನೋಡದೇ ಹೊರಟುಹೋದರು’ ಎಂದು ಬೇಸರಪಟ್ಟುಕೊಂಡರು.

‘ಧ್ರುವ ಅವರಿಗೆ ಡಬ್ಬಿಂಗ್‌ ಮಾಡುವುದು ಬಹಳ ಕಷ್ಟವಾಯಿತು. ಕೆಲವೊಮ್ಮೆ ಅಣ್ಣನನ್ನು ನೋಡಿ ಬಹಳ ಭಾವುಕರಾಗುತ್ತಿದ್ದರು. ಧ್ರುವ ಮತ್ತು ಮೇಘನಾರಾಜ್‌ ಈ ಸಿನಿಮಾಕ್ಕೆ ಬೆಂಬಲವಾಗಿ ನಿಂತರು. ನಟ ದರ್ಶನ್‌ ಸಹಕಾರ ಮರೆಯುವಂತಿಲ್ಲ. ಚಿರು ಇಲ್ಲ ಎಂದು ಯಾರೂ ಅವರ ಕೊನೆಯ ಸಿನಿಮಾವನ್ನು ಕೈಬಿಡಲಿಲ್ಲ’ ಎನ್ನುತ್ತಾರೆ ರಾಮ್‌ನಾರಾಯಣ್‌. 

ರಾಮ್‌ನಾರಾಯಣ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.