ಚೋಳ ರಾಜ ಹಿಂದೂವಾಗಿರಲಿಲ್ಲ ಎಂದು ಜನಪ್ರಿಯ ನಟ ಕಮಲ್ ಹಾಸನ್ ಹೇಳಿಕೆ ನೀಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಕಮಲ್ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಮಿಳರು ಹಿಂದುಗಳಲ್ಲ ಎಂಬ ಹ್ಯಾಷ್ ಟ್ಯಾಗ್ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.
ಪೊನ್ನಿಯಿನ್ ಸೆಲ್ವನ್ ಚಿತ್ರ ವೀಕ್ಷಿಸಿದ ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಚೋಳ ರಾಜ ಹಿಂದೂವಾಗಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಬೆಂಬಲ ಸೂಚಿಸಿ ಕಮಲ್ ಹಾಸನ್ ಮಾಧ್ಯಮಗಳೊಂದಿಗೆ ಮಾತನಾಡಿ, ಚೋಳ ಸಾಮ್ರಾಜ್ಯದ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಎಂದಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದುಗಳ ಒಂದು ಗುಂಪು ತಮಿಳರು ಹಿಂದುಗಳಲ್ಲ ಎಂಬ ಹ್ಯಾಷ್‌ಟ್ಯಾಗ್‌ನ್ನು ಟ್ರೆಂಡ್ ಮಾಡುತ್ತಿದೆ.
ಈ ಚರ್ಚೆ ಪ್ರಾರಂಭವಾಗಿದ್ದು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಿಂದ. ವಿಕ್ರಂ ಕಾರ್ತಿ, ಜಯರಾಂ ರವಿ, ಐಶ್ವರ್ಯಾ ರೈ ಮೊದಲಾದ ತಾರೆಯರು ಅಭಿಯನಿಸಿರುವ ಈ ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಕಥೆ ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ವೆಟ್ರಿಮಾರನ್ ‘ನಿರಂತರವಾಗಿ ನಮ್ಮ ಸಂಜ್ಞೆಗಳನ್ನು ನಮ್ಮಿಂದ ಕದಿಯಲಾಗಿದೆ. ವಳ್ಳುವರ್ ಸಮುದಾಯ ಅವಮಾನಿಸುವುದು ಅಥವಾ ರಾಜ ರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ನಿರಂತರವಾಗಿ ನಡೆಯುತ್ತಿದೆ’ ಎಂದು ಹೇಳಿಕೆ ನೀಡಿದ್ದರು.
‘ರಾಜ ರಾಜ ಚೋಳರ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ. ವೈನವಂ, ಶಿವಂ ಮತ್ತು ಸಮನಂ ಎಂದಿದ್ದವು. ಬ್ರಿಟಿಷರಿಗೆ ಇವುಗಳನ್ನು ಹೇಗೆ ಕರೆಯಬೇಕೆಂದು ಗೊತ್ತಾಗದ ಕಾರಣ ಇವುಗಳನ್ನು ಒಟ್ಟಾಗಿ ಹಿಂದೂ ಎಂದು ಕರೆದರು. ಇದು ತೂತುಕುಡಿ ಪದವು ಟ್ಯುಟಿಕಾರ್ನ್ ಆಗಿ ಬದಲಾದಂತೆಯೇ ಆಯಿತು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ:ಪೊನ್ನಿಯಿನ್ ಸೆಲ್ವನ್ ದಾಖಲೆ ಗಳಿಕೆ
ವೆಟ್ರಿಮಾರನ್ ಮತ್ತು ಕಮಲ್‌ಹಾಸನ್ ಹೇಳಿಕೆ ಬಿಜೆಪಿಯನ್ನು ಕೆರಳಿಸಿದ್ದು, ಯಾವ ಮಸೀದಿ ಅಥವಾ ಚರ್ಚ್‌ಗಳು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿತ್ತು? ಎಂದು ಬಿಜೆಪಿ ಮುಖಂಡ ಎಚ್.ರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಟ್ವಿಟರ್‌ನಲ್ಲಿ ಕಮಲ್ ಹಾಸನ್ ಪರ ಮತ್ತು ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ. ಇದೆಲ್ಲದರ ನಡುವೆ ಪೊನ್ನಿಯಿನ್ ಸೆಲ್ವನ್‌ಚಿತ್ರ ₹500 ಕೋಟಿ ಗಳಿಕೆಯೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರವಿದು. ಹೀಗಾಗಿ ಮಣಿರತ್ನಂ ಸುಂದರ ದೃಶ್ಯಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಎ.ಆರ್.ರೆಹಮಾನ್ ದೃಶ್ಯಗಳಿಗೆ ತಕ್ಕಂತೆ ಅತ್ಯದ್ಬುತ ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.