ದಬಾಂಗ್ 3 ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಖಾನ್ ಅಲಿಯಾಸ್ ಚುಲ್‌ಬುಲ್ ಪಾಂಡೆ (ಚಿತ್ರದಲ್ಲಿ ಸಲ್ಮಾನ್ ಪಾತ್ರದ ಹೆಸರು) ಈ ಊರಿನ ಬಗ್ಗೆ ಮೊದಲು ಆಡಿದ ಮಾತು: ‘ಒಂಬತ್ತು ವರ್ಷಗಳ ನಂತರ ಇಲ್ಲಿಗೆ ಮತ್ತೆ ಬಂದಿದ್ದೇನೆ’.
ಚಿತ್ರದ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಸಲ್ಮಾನ್–ಸುದೀಪ್ ಜೋಡಿಯು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಸಲ್ಮಾನ್ ಅವರನ್ನು ನೋಡಲು ಸುದ್ದಿಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದರು. ಚಿತ್ರದ ನಿರ್ದೇಶಕ ಪ್ರಭುದೇವ, ನಟಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಸಾಯಿ ಮಾಂಜ್ರೇಕರ್ ಕೂಡ ಇದ್ದರು. ‘ನನಗೆ ಇಲ್ಲಿ ಚೆಂದದ ಸ್ವಾಗತ ನೀಡಿದ್ದಕ್ಕಾಗಿ ಧನ್ಯವಾದ. ನಾನು ಊಟಿಗೆ ಚಿತ್ರೀಕರಣಕ್ಕೆ ಹೋಗುವಾಗ ಬೆಂಗಳೂರಿನಿಂದ ಮೈಸೂರಿಗೆ ಹೋಗಿ, ಅಲ್ಲಿಂದ ಊಟಿ ತಲುಪುತ್ತಿದ್ದೆ. ಆ ಮಾರ್ಗದಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವುದು ಬಹಳ ಖುಷಿಕೊಡುತ್ತಿತ್ತು’ ಎಂದರು ಸಲ್ಮಾನ್.
ನಂತರ ಅವರ ಮಾತು ಹೊರಳಿದ್ದು ಚಿತ್ರದ ಖಳನಾಯಕ ಸುದೀಪ್ ಬಗ್ಗೆ. ‘ಸುದೀಪ್ ಅವರು ನಿಜಕ್ಕೂ ಒಬ್ಬ ಸೂಪರ್‌ಸ್ಟಾರ್. ಅಷ್ಟೇ ಅಲ್ಲ, ಅವರೊಬ್ಬ ಸೂಪರ್ ಹೀರೊ. ಹಾಗೆಯೇ, ಒಬ್ಬ ಒಳ್ಳೆಯ ಮನುಷ್ಯ. ಸುದೀಪ್ ನಮಗೆ ಕಿರಿಯ ಸಹೋದರ ಇದ್ದಂತೆ’ ಎಂದರು.
‘ನಿಮ್ಮ ದಬಾಂಗ್ 4 ಚಿತ್ರದಲ್ಲೂ ಸುದೀಪ್ ಅವರು ಇರಲಿದ್ದಾರಾ’ ಎನ್ನುವ ಪ್ರಶ್ನೆ ಸುದ್ದಿಗಾರರಿಂದ ತೂರಿಬಂತು. ಅರೆಕ್ಷಣ ಕಣ್ಣರಳಿಸಿ ನೋಡಿದ ಸಲ್ಮಾನ್, ‘ದಬಾಂಗ್ 4 ಚಿತ್ರದಲ್ಲಿ ಸುದೀಪ್ ಅವರೇ ದಬಾಂಗ್ ಆಗಿರಲಿದ್ದಾರೆ’ ಎಂದರು. ನಂತರ ತಮ್ಮ ಉತ್ತರಕ್ಕೆ ಇನ್ನೊಂದು ಆಯಾಮ ಕೊಡಲೆಂಬಂತೆ, ‘ಈ ಚಿತ್ರವನ್ನು ನೋಡಿ, ಗೊತ್ತಾಗುತ್ತದೆ’ ಎಂದರು.
‘ಚುಲ್‌ಬುಲ್ ಪಾಂಡೆ ಪಾತ್ರದಲ್ಲಿ ನೀವು ಹೆಚ್ಚು ಇಷ್ಟಪಟ್ಟಿದ್ದು ಏನನ್ನು’ ಎಂಬ ಪ್ರಶ್ನೆಗೆ, ‘ಪಾಂಡೆಯ ಪತ್ನಿಯನ್ನು ಹೆಚ್ಚು ಇಷ್ಟಪಟ್ಟೆ’ ಎಂದು ಥಟ್ಟನೆ ಉತ್ತರಿಸಿ, ಎಲ್ಲರಲ್ಲೂ ನಗೆ ಉಕ್ಕಿಸಿದರು. ಸುದೀಪ್ ಅವರ ಪ್ರತಿಭೆಯನ್ನು ಕಂಡು ‘ದಬಾಂಗ್ 3’ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು.
‘ಈ ಚಿತ್ರವು ಆರು ವರ್ಷದ ಮಕ್ಕಳಿಂದ ಆರಂಭಿಸಿ, ಅರವತ್ತು ವರ್ಷದ ಹಿರಿಯ ನಾಗರಿಕರವರೆಗೆ ಎಲ್ಲರೂ ನೋಡಬಹುದಾದ ಕಥೆ ಹೊಂದಿದೆ’ ಎಂದರು ನಿರ್ದೇಶಕ ಪ್ರಭುದೇವ.
‘ಕನ್ನಡದ್ದೇ ಸಿನಿಮಾ’
‘ಸಲ್ಮಾನ್ ಅವರು ತಾವು ನಾಯಕ ಆಗಿ ನಟಿಸಿದ ಸಿನಿಮಾಕ್ಕೆ ಪ್ರಚಾರ ನೀಡುವ ಒಂದೇ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿಲ್ಲ. ಸಲ್ಮಾನ್ ಅವರು ಈ ಚಿತ್ರವನ್ನು ಕನ್ನಡದ್ದೇ ಒಂದು ಸಿನಿಮಾ ಎಂಬಂತೆ ಸಿದ್ಧಪಡಿಸಿದ್ದಾರೆ. ಇದು ಹಿಂದಿ ಸಿನಿಮಾ ಅಲ್ಲ; ಇದು ಕನ್ನಡದ ಸಿನಿಮಾ’ ಎಂದರು ಸುದೀಪ್.
ಈ ನಿಲುವಿಗೆ ಪೂರಕವಾಗಿ ಮಾತನಾಡಿದರು ಸಲ್ಮಾನ್. ‘ಹಿಂದಿ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತವೆ. ಆದರೆ, ಹಿಂದಿ ಗೊತ್ತಿಲ್ಲದವರೂ ಈ ಚಿತ್ರವನ್ನು ವೀಕ್ಷಿಸಲಿ ಎಂಬ ಕಾರಣಕ್ಕೆ ನಾವು ಇದನ್ನು ಕನ್ನಡಕ್ಕೆ ಡಬ್ ಮಾಡುವ ತೀರ್ಮಾನ ಕೈಗೊಂಡೆವು. ಇದು ಸುದೀಪ್ ಅವರ ಸಿನಿಮಾ’ ಎಂದರು. ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದು ತೀರ್ಮಾನಿಸಿದ್ದು ಸಲ್ಮಾನ್.
ಈ ಚಿತ್ರದ ಕನ್ನಡ ಆವೃತ್ತಿಯ ಟ್ರೇಲರ್‌ಗೆ ಸಲ್ಮಾನ್ ಅವರು ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಅದರ ಹಿನ್ನೆಲೆ ಕುರಿತೂ ಸುದೀಪ್ ಅವರು ಒಂದಿಷ್ಟು ವಿವರಣೆ ನೀಡಿದರು. ‘ನಾವು ಚಿತ್ರದ ಚಿತ್ರೀಕರಣದಲ್ಲಿ ಇದ್ದೆವು. ಆ ಹೊತ್ತಿಗೆ ಇದನ್ನು ಕನ್ನಡದಲ್ಲಿ ಡಬ್ ಮಾಡಬೇಕು ಎಂದು ತೀರ್ಮಾನಿಸಿ ಆಗಿತ್ತು. ಚಿತ್ರೀಕರಣದ ನಡುವೆ ಸಲ್ಮಾನ್ ಅವರು ಯಾರಿಗೂ ಹೇಳದೆ, ಹದಿನೈದು ನಿಮಿಷ ಮಾಯವಾದರು. ಅವರು ಎಲ್ಲಿಗೆ ಹೋದರು ಎಂಬುದು ನಮಗೆ ಗೊತ್ತಿರಲಿಲ್ಲ. ಅವರು ಕನ್ನಡದಲ್ಲಿ ತಾವು ಹೇಳಬೇಕಾದ ಮಾತುಗಳನ್ನು ಆ ಅವಧಿಯಲ್ಲಿ ಅಭ್ಯಾಸ ಮಾಡಿ, ಕನ್ನಡ ಟ್ರೇಲರ್‌ಗೆ ದನಿ ನೀಡಿದ್ದರು’ ಎಂದು ಸುದೀಪ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.