ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ಅಂಗಳದಲ್ಲಿ 'ನೆಪೋಟಿಸಮ್' (ಸ್ವಜನಪಕ್ಷಪಾತ) ವಿಷಯ ಹೆಚ್ಚು ಮುನ್ನಲೆಗೆ ಬಂದಿತ್ತು. ನೆಪೋಟಿಸಮ್ ವಿರುದ್ಧ ನಟಿ ಕಂಗನಾ ರನೋತ್ ಹೆಚ್ಚು ಧ್ವನಿ ಎತ್ತಿದ್ದರು. ಆಲಿಯಾ ಭಟ್, ರಣಬೀರ್ ಕಪೂರ್, ಅನನ್ಯ ಪಾಂಡೆ ಸೇರಿ ಮುಂತಾದವರನ್ನು 'ನೆಪೋ ಕಿಡ್ಸ್' ಎಂದು ಟೀಕಿಸಿದ್ದರು. ಇದೀಗ ಆಲಿಯಾ ಭಟ್ ಅವರ ಪರ ನಟಿ ಚುರ್ನಿ ಗಂಗೂಲಿ ಬ್ಯಾಟ್ ಬೀಸಿದ್ದಾರೆ. ಆಲಿಯಾ ಭಟ್ ವಿಷಯದಲ್ಲಿ 'ನೆಪೋಟಿಸಮ್' ಅಪ್ರಸ್ತುತ ಎಂದಿದ್ದಾರೆ.
ಬಂಗಾಳಿ ಚಿತ್ರರಂಗದಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಚುರ್ನಿ ಗಂಗೂಲಿ, ಕರಣ್ ಜೋಹರ್ ಅವರ ಹೊಸ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪ್ರಚಾರದ ಸಂದರ್ಭ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಚುರ್ನಿ ಗಂಗೂಲಿ ಈ ವೇಳೆ 'ಬಾಲಿವುಡ್–ನೆಪೋಟಿಸಮ್' ಬಗ್ಗೆ ಮಾತನಾಡಿದ್ದಾರೆ. ಆಲಿಯಾ ಭಟ್ ಅವರನ್ನು ಪ್ರತಿಭಾನ್ವಿತೆ ಎಂದು ಹಾಡಿ ಹೊಗಳಿದ್ದಾರೆ.
'ಜನರು ಸ್ವಜನಪಕ್ಷಪಾತದ ಬಗ್ಗೆ ಮಾತನಾಡುತ್ತಾರೆ. ಈಗಾಗಲೇ ಇದರ ಬಗ್ಗೆ ಹಲವು ಚರ್ಚೆಗಳಾಗಿವೆ. ನಟ ಅಥವಾ ನಟಿಗೆ ಪ್ರತಿಭೆ ಇಲ್ಲದಿದ್ದರೆ ಮಾತ್ರ ಈ ವಾದ ಸರಿ ಹೊಂದುತ್ತದೆ. ಆಲಿಯಾ ಭಟ್ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಆಲಿಯಾ ಭಟ್ ವಿಷಯದಲ್ಲಿ 'ನೆಪೋಟಿಸಮ್' ಎನ್ನುವುದು ಅಪ್ರಸ್ತುತ' ಎಂದರು.
'ಒಂದೊಂದು ಸಿನಿಮಾದಲ್ಲಿಯೂ ಆಲಿಯಾ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿಯೂ ಅಷ್ಟೇ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿ ಸವಾಲಿನ ಪಾತ್ರದಲ್ಲೂ ನಮ್ಮಷ್ಟೇ ಶ್ರಮ ಹಾಕುತ್ತಾರೆ' ಎಂದು ಆಲಿಯಾ ಭಟ್ ಅವರನ್ನು ಹೊಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.