ADVERTISEMENT

ಸಿನಿ ಸಮ್ಮಾನ | ಪ್ರಶಸ್ತಿಗಾಗಿ ಎಲ್ಲರೂ ಕಾಯುವಂತಾಗಲಿ: ಕಲಾವಿದರು ಹೀಗಂದರು...

ಪ್ರಜಾವಾಣಿ ವಿಶೇಷ
Published 26 ಮೇ 2023, 1:53 IST
Last Updated 26 ಮೇ 2023, 1:53 IST
ಸತ್ಯ ಹೆಗಡೆ
ಸತ್ಯ ಹೆಗಡೆ   

ಕಲಾವಿದರನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ

‘ಪ್ರಜಾವಾಣಿ’ ಪತ್ರಿಕೆ ಎಂದರೆ ಒಂದು ರೀತಿಯ ಆಪ್ತ ಭಾವನೆ. ನನ್ನ ಮೊದಲ ಸಿನಿಮಾ ‘ಚಂದ್ರಚಕೋರಿ’ಯ ಸುದ್ದಿ ಮೊದಲು ಬಂದಿದ್ದು ‘ಪ್ರಜಾವಾಣಿ’ಯಲ್ಲಿ. ನಾನು ಆಗ ಬಹುಶಃ ಕಾಲೇಜಿನಲ್ಲಿದ್ದೆ. ಗೆಳೆಯನೊಬ್ಬ ಆ ಲೇಖನ ತಂದು ತೋರಿಸಿ ಕಾಲೇಜಿಗೆಲ್ಲ ನನ್ನ ನಟನೆಯ ಸುದ್ದಿ ಹಬ್ಬಿಸಿದ್ದ. ಅದು ಇಂದಿಗೂ ಮರೆಯಲಾಗದ ಅನುಭವ. ಅಲ್ಲಿಂದ ನಂತರ ಪತ್ರಿಕೆ ನಿರಂತರವಾಗಿ ನನ್ನ ಕೆಲಸಗಳನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ. ಕೇವಲ ನನ್ನನ್ನು ಮಾತ್ರವಲ್ಲ, ಅಂದಿನ ಎಷ್ಟೋ ಹೊಸಬರ ಸಿನಿಮಾಗಳಿಗೆ ಪತ್ರಿಕೆ ಪ್ರೋತ್ಸಾಹ ಅನನ್ಯವಾದುದು. ಇಂತಹ ಪತ್ರಿಕೆ 75 ವರ್ಷ ಪೂರೈಸುತ್ತಿರುವುದಕ್ಕೆ ಅಭಿನಂದನೆಗಳು. ಜೊತೆಗೆ ಈ ಸಂಭ್ರಮದಲ್ಲಿ ‘ಸಿನಿ ಸಮ್ಮಾನ’ ಎಂಬ ಚಿತ್ರರಂಗವನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ. ತೀರ್ಪುಗಾರರ ಮಂಡಳಿ, ಆಯ್ಕೆ ವಿಧಾನ ಎಲ್ಲವೂ ಅನನ್ಯವಾಗಿದೆ. ಇದು ಚಿತ್ರರಂಗದ ಹೆಮ್ಮೆಯ ಸಮ್ಮಾನವಾಗಲಿ. ಪ್ರತಿವರ್ಷ ಈ ಸಮ್ಮಾನಕ್ಕೆ ಕಾಯುವಂತಾಗಲಿ.

–ಶ್ರೀಮುರುಳಿ, ನಟ

ಶಾಲೆಯಲ್ಲಿ ಪತ್ರಿಕೆ ಓದುತ್ತಿದ್ದೆವು

ಹೈಸ್ಕೂಲ್‌ನಿಂದ ‘ಪ್ರಜಾವಾಣಿ’ ಜೊತೆಗಿನ ನಂಟಿದೆ. ನಮ್ಮ ಶಾಲೆಗೆ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಬರುತ್ತಿತ್ತು. ಅದರ ಜೊತೆಗೆ ‘ಪ್ರಜಾವಾಣಿ’ ಪತ್ರಿಕೆಯೂ ಬರುತ್ತಿತ್ತು. ಆಂಗ್ಲಮಾಧ್ಯಮ ಶಾಲೆಯಾದರೂ ಬೆಳಗಿನ ಪ್ರಾರ್ಥನೆ ನಂತರ ‘ಡೆಕ್ಕನ್‌’ ಜೊತೆಗೆ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯಾಂಶಗಳನ್ನು ಓದುತ್ತಿದ್ದೆವು. ನಟನೆಗೆ ಬಂದ ಈ ನಂಟು ಇನ್ನಷ್ಟು ಹೆಚ್ಚಾಯಿತು. ಕೇವಲ ಸಿನಿಮಾ ಮಾತ್ರವಲ್ಲ, ಸುದ್ದಿ ಮಾತ್ರವಲ್ಲ. ಅದಕ್ಕಿಂತ ಹೆಚ್ಚಾದ ಸಾಕಷ್ಟು ಕೆಲಸಗಳನ್ನು ಪತ್ರಿಕೆ ಮಾಡಿದೆ. ಪತ್ರಿಕೆ ನಡೆಸುವ ‘ಭೂಮಿಕಾ’ ಕ್ಲಬ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಸಾಹಿತ್ಯವಾಗಿ ಕನ್ನಡದಲ್ಲಿ ಬಹಳ ಗಟ್ಟಿಯ ಧ್ವನಿ ‘ಪ್ರಜಾವಾಣಿ’. ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಇಂತಹ ಪತ್ರಿಕೆ ಈಗ ಸಿನಿಮಾರಂಗಕ್ಕೆ ಪ್ರತ್ಯೇಕವಾದ ಪ್ರಶಸ್ತಿ ನೀಡಲು ಮುಂದಾಗಿರುವುದು ಬಹಳ ಖುಷಿಯ ಕೆಲಸ. ಆಯ್ಕೆ ಪ್ರಕ್ರಿಯೆಯೇ ವಿಭಿನ್ನವಾಗಿದೆ. ಪ್ರಶಸ್ತಿ ಕೂಡ ಪತ್ರಿಕೆಯಷ್ಟೇ ವಿಶ್ವಾಸಾರ್ಹವಾಗಿರುತ್ತದೆ ಎಂಬ ನಂಬಿಕೆ ಇದೆ. ಪ್ರತಿವರ್ಷವೂ ಈ ಪ್ರಶಸ್ತಿ ನೀಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲಿ.

–ರಂಜನಿ ರಾಘವನ್‌, ನಟಿ

ರಂಜನಿ

ಪ್ರಶಸ್ತಿಗಾಗಿ ಎಲ್ಲರೂ ಕಾಯುವಂತಾಗಲಿ

ಚಿಕ್ಕದಿನಿಂದ ‘ಪ್ರಜಾವಾಣಿ’ ಓದಿಕೊಂಡಿದ್ದು ಬೆಳೆದಿದ್ದು. ಪತ್ರಿಕೆ 75 ವರ್ಷಗಳನ್ನು ಪೂರೈಸುತ್ತಿರುವುದಕ್ಕೆ ಅಭಿನಂದನೆಗಳು. ಪತ್ರಿಕೆಯಲ್ಲಿ ಬರುವ ಭಾನುವಾರದ ವಿಮರ್ಶೆಗಾಗಿ ಕಾಯುತ್ತಿದ್ದೆ. ಬಹುಶಃ ಶುಕ್ರವಾರದ ಸಿನಿಮಾ ಪುರವಣಿ ಪ್ರಿಂಟ್‌ ಗುಣಮಟ್ಟ ಕನ್ನಡದಲ್ಲೇ ಅತ್ಯುತ್ತಮ. ನಾವು ಚಿತ್ರೀಕರಿಸಿದ ಸಿನಿಮಾಗಳ ಛಾಯಾಚಿತ್ರಗಳನ್ನು ಆ ಗುಣಮಟ್ಟದ ಪ್ರಿಂಟ್‌ನಲ್ಲಿ ನೋಡುವುದೇ ಸಂಭ್ರಮವಾಗಿತ್ತು. ಈ ಪತ್ರಿಕೆಯಲ್ಲಿ ಏನೇ ಬಂದರೂ ಅದು ಸತ್ಯವಾಗಿರುತ್ತದೆ ಎಂಬುದು ಆ ಕಾಲದಿಂದಲೂ ಸಾಬೀತಾಗಿದೆ. ಹಾಗಾಗಿಯೇ ಇದೊಂದು ವಿಶ್ವಾಸಾರ್ಹ ಪತ್ರಿಕೆ. ಇಂತಹ ಪತ್ರಿಕೆಯ ಸಿನಿ ಸಮ್ಮಾನ ಕನ್ನಡದ ಚಿತ್ರರಂಗದ ಮಟ್ಟಿಗೆ ದೊಡ್ಡ ಪ್ರಶಸ್ತಿಯಾಗಲಿದೆ. ಸರ್ಕಾರ ಪ್ರಶಸ್ತಿ ಬಿಟ್ಟರೆ ಕನ್ನಡದಲ್ಲಿ ಗುರುತಿಸಿಕೊಳ್ಳುವಂತಹ ಪ್ರಶಸ್ತಿ ಕನ್ನಡದಲ್ಲಿ ಇಲ್ಲ. ಸಾಕಷ್ಟು ಪ್ರಶಸ್ತಿಗಳ ಗುಣಮಟ್ಟ ಜನರಿಗೇ ತಿಳಿಯುತ್ತದೆ. ಈ ಸಮ್ಮಾನ ಅತ್ಯಂತ ಪಾರದರ್ಶಕವಾಗಿದೆ. ಅರ್ಹ ತೀರ್ಪುಗಾರರ ಮಂಡಳಿ ಇದೆ. ಆಯ್ಕೆ ಪ್ರಕ್ರಿಯೆ ಉತ್ತಮವಾಗಿದೆ. ಚಿತ್ರರಂಗಕ್ಕೆ ಸಂಭ್ರಮದ ಕ್ಷಣ. ನಾವು ಮಾಡಿದ ಕೆಲಸಕ್ಕೆ ಗೌರವ ಸಿಗುವ ಹೊತ್ತು. 75 ವರ್ಷದಲ್ಲಿ ತನ್ನನ್ನು ತಾನು ಸಾಬೀತು ಮಾಡಿಕೊಂಡ ಪತ್ರಿಕೆ ನೀಡುವ ಪ್ರಶಸ್ತಿಗೆ ಅತ್ಯಂತ ಮೌಲ್ಯವಿದೆ. ಪ್ರತಿ ವರ್ಷ ಈ ಪ್ರಶಸ್ತಿಗಾಗಿ ಎಲ್ಲರೂ ಕಾಯುವಂತಾಗಲಿ. 

ADVERTISEMENT

ಸತ್ಯ ಹೆಗಡೆ, ಛಾಯಾಗ್ರಾಹಕ

ಉಪಭಾಷೆಗಳಿಗೂ ಪ್ರತ್ಯೇಕ ಪ್ರಶಸ್ತಿ ನೀಡಲಿ

ಪತ್ರಿಕೆಗೂ, ಚಿತ್ರರಂಗಕ್ಕೂ ನಿಕಟವಾದ ಸಂಬಂಧವಿದೆ. ಚಿತ್ರರಂಗದ ಸುದ್ದಿ ತಲುಪಿಸಲು ಪತ್ರಿಕೆ ಬೇಕು. ಅದೇ ರೀತಿ ಪತ್ರಿಕೆ ಸಿನಿಮಾ ಸುದ್ದಿಗಳು ಬೇಕು. ‘ಪ್ರಜಾವಾಣಿ’ ಬಹಳ ವರ್ಷದಿಂದ ನೋಡಿಕೊಂಡು ಬಂದ ಪತ್ರಿಕೆ. ಪತ್ರಿಕೆಯ ಫಾಂಟ್‌, ವಿನ್ಯಾಸ ನೋಡಿದ ತಕ್ಷಣ ಅದು ‘ಪ್ರಜಾವಾಣಿ’ ಎಂದು ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ಪತ್ರಿಕೆ ಮನಸ್ಸಿನಲ್ಲಿ ಉಳಿದಿದೆ. ಪ್ರಾರಂಭದ ದಿನದಿಂದ ಸಿನಿಮಾ ಸುದ್ದಿಗಳನ್ನು ಪತ್ರಿಕೆ ಚೆನ್ನಾಗಿ ವರದಿ ಮಾಡುತ್ತ ಬಂದಿದೆ. ನಮ್ಮನ್ನು ಬೆಳೆಸಿದ ಪತ್ರಿಕೆ. ಇಂತಹ ಪತ್ರಿಕೆ ಪ್ರಶಸ್ತಿ ನೀಡುತ್ತಿದೆ ಎಂಬುದು ಹೆಮ್ಮೆಯ ಸಂಗತಿ. ಇದೊಂದು ಪ್ರೋತ್ಸಾಹ ನೀಡಿದಂತೆ. ಗಿರೀಶ್‌ ಕಾಸರವಳ್ಳಿಯಂತಹ ಮೇರು ನಿರ್ದೇಶಕರ ತೀರ್ಪುಗಾರರ ತಂಡ ಅತ್ಯಂತ ಅರ್ಹರನ್ನು ಆಯ್ಕೆ ಮಾಡಲಿದೆ. ಯಾವುದೇ ಚಿತ್ರಕ್ಕೆ ಪ್ರಶಸ್ತಿ ಬಂದರೂ ಇಡೀ ಚಿತ್ರರಂಗಕ್ಕೆ ಒಳ್ಳೊಳ್ಳೆ ವಿಷಯಗಳನ್ನು ಹೇಳುವ ಹುಮ್ಮಸ್ಸು ಬರುತ್ತದೆ. ಯುವ ನಿರ್ದೇಶಕರಿಗೆ ಒಂದು ರೀತಿಯ ಉತ್ತೇಜನ ಸಿಗುತ್ತದೆ. ತುಳು,ಕೊಂಕಣಿ,ಬ್ಯಾರಿ ಈ ರೀತಿಯ ರಾಜ್ಯದ ಉಪಭಾಷೆಗಳಿಗೂ ಪ್ರತ್ಯೇಕ ಪ್ರಶಸ್ತಿ ನೀಡುವ ಅವಕಾಶ ಈ ವೇದಿಕೆಯಲ್ಲಿ ಆಗಲಿ ಎಂಬ ಮನವಿ ಮಾಡುತ್ತೇನೆ. ಇಂತಹ ಚಿತ್ರಗಳಿಗೆ ವೇದಿಕೆ ಸಿಗುವುದು ವಿರಳ. ಪ್ರಜಾವಾಣಿಯಂತಹ ರಾಜ್ಯದ ಹಿತಾಸಕ್ತಿ ಹೊಂದಿರುವ ಪತ್ರಿಕೆಯಿಂದ ಈ ಕೆಲಸ ಆಗಲಿ. ಈ ಸಮ್ಮಾನ ದೊಡ್ಡ ಮಟ್ಟದಲ್ಲಿ ಬೆಳೆಯಲಿ.

ಶಿವಧ್ವಜ್‌, ನಟ, ನಿರ್ದೇಶಕ

shivadwaj

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.