ADVERTISEMENT

ಇಜ್ಜೋಡಾದ ಅಣ್ತಮ್ಮ ಜೋಡಿಗಳು!

ಗವಿ ಬ್ಯಾಳಿ
Published 8 ಜೂನ್ 2020, 8:04 IST
Last Updated 8 ಜೂನ್ 2020, 8:04 IST
ಚಿರಂಜೀವಿ ಸರ್ಜಾ ಮತ್ತು ದ್ರುವ ಸರ್ಜಾ
ಚಿರಂಜೀವಿ ಸರ್ಜಾ ಮತ್ತು ದ್ರುವ ಸರ್ಜಾ    

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಅಣ್ಣ–ತಮ್ಮ, ಅಕ್ಕ–ತಂಗಿ, ತಂದೆ–ಮಕ್ಕಳು, ಅಳಿಯ–ಮಾವ, ಗಂಡ–ಹೆಂಡತಿ... ಹೀಗೆ ಒಂದೇ ಮನೆತನಕ್ಕೆ ಸೇರಿದ ಜೋಡಿಗಳು ಸಾಕಷ್ಟಿವೆ. ಜನರನ್ನು ರಂಜಿಸಿದ ಇಂತಹ ಚೆಂದದ ಜೋಡಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಬರವಿಲ್ಲ.

ವಿಪರ್ಯಾಸವೆಂದರೆ ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದ ಅಣ್ಣ–ತಮ್ಮಂದಿರ ಜೋಡಿಯಲ್ಲಿಒಬ್ಬರುಅಕಾಲಿಕವಾಗಿ ನಿರ್ಗಮಿಸಿದ್ದಾರೆ. ಅದು ಉತ್ತುಂಗದ ಹಾದಿಯಲ್ಲಿದ್ದಾಗ. ಪ್ರತಿಬಾರಿಯೂ ಇಂಥ ಅಕಾಲಿಕ ಸಾವುಗಳು ಚಿತ್ರರಂಗದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿವೆ.ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎಷ್ಟೋ ಸಹೋದರರ ಜೋಡಿಗಳು ಇಜ್ಜೋಡುಗಳಾಗಿವೆ.ಆ ಪಟ್ಟಿಗೆ ಹೊಸ ಸೇರ್ಪಡೆ ಚಿರಂಜೀವಿ ಸರ್ಜಾ.

ಅನಂತ್‌ ನಾಗ್‌‌ ಮತ್ತು ಶಂಕರ್‌ ನಾಗ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಸಹೋದರರ ಜೋಡಿ. ಸದಾ ಪುಟಿಯುವ ಬುಗ್ಗೆಯಂತಿದ್ದ ಶಂಕರ್ ಅವರನ್ನು‌ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ದಾವಣಗೆರೆಯ ಆನಗೋಡು ಬಳಿ ಸಂಭವಿಸಿದ ‘ಆ್ಯಕ್ಸಿಡೆಂಟ್‌’ಗೆ ಬಲಿ ತೆಗೆದುಕೊಂಡಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ಕನ್ನಡ ಚಿತ್ರೋದ್ಯಮಕ್ಕೆ ಬಹಳ ದಿನಗಳೇ ಬೇಕಾಯಿತು.

ADVERTISEMENT

ಸಂಭಾಷಣೆಗಳಿಂದ ಮನೆಮಾತಾಗಿದ್ದ ಚಿತ್ರ ಸಾಹಿತಿ ಚಿ. ಉದಯಶಂಕರ್ ಅವರ ಪುತ್ರರಾದ ಚಿ.ಗುರುದತ್‌ ಮತ್ತು ಚಿ. ರವಿಶಂಕರ್‌ ಅವರದ್ದು ಗಮನ ಸೆಳೆದ ಮತ್ತೊಂದು ಸಹೋದರರ ಜೋಡಿ. ಹಾಸ್ಯ ನಟರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ರವಿಶಂಕರ್ ‘ನಂಜುಂಡಿ ಕಲ್ಯಾಣ’ ಚಿತ್ರದ ಸಮಾರಂಭದಲ್ಲಿ ಭಾಗವಹಿಸಲು‌ ಚೆನ್ನೈನಿಂದ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ರಸ್ತೆ ಅಪಘಾತಕ್ಕೆ ಬಲಿಯಾದರು.

ಶಿವರಾಜ್‌ ಕುಮಾರ್‌ ಅವರ ಮೊದಲ ಚಿತ್ರ ಆನಂದ್‌, ನಂಜುಂಡಿ ಕಲ್ಯಾಣ, ಡಾನ್ಸ್‌ ರಾಜಾ ಡಾನ್ಸ್‌ ಸೇರಿದಂತೆ ಅನೇಕ ಚಿತ್ರಗಳಲ್ಲಿ ರವಿಶಂಕರ್‌ ಗಮನ ಸೆಳೆದಿದ್ದರು.

ನಟ ಶಕ್ತಿ ಪ್ರಸಾದ್ ಅವರ ಇಬ್ಬರು ಪುತ್ರರಲ್ಲಿ ಅರ್ಜುನ್‌ ಸರ್ಜಾ ನಟರಾಗಿ, ಅವರ ಅಣ್ಣ ಕಿಶೋರ್‌ ಸರ್ಜಾ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಅನೇಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ಕಿಶೋರ್‌ 52ನೇ ವಯಸ್ಸಿನಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದರು. ‌

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸಹೋದರರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹೆಜ್ಜೆ ಮೂಡಿಸಿದ್ದರು. ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಚಿರು ಸಹೋದರನನ್ನು ಒಂಟಿ ಮಾಡಿದ್ದಾರೆ.

ಬಾಲಿವುಡ್‌ನ ಖ್ಯಾತ ಕಪೂರ್ ಮನೆತನದ ರಣಧೀರ್‌ ಕಪೂರ್, ರಿಷಿ ಕಪೂರ್‌ ಮತ್ತು ರಾಜೀವ್ ಕಪೂರ್‌ ಸಹೋದರರಲ್ಲಿ ರಿಷಿ ಕಪೂರ್‌ ಅವರನ್ನು ಈಚೆಗೆ ಕ್ಯಾನ್ಸರ್‌ ಬಲಿ ತೆಗೆದುಕೊಂಡಿತು. ಬಾಲಿವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಸಹೋದರರಾದ ಸಾಜಿದ್-ವಾಜಿದ್ ಖ್ಯಾತಿಯ ವಾಜಿದ್ ಖಾನ್ ಕೊರೊನಾ ಸೋಂಕಿಗೆ ಶರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.