ADVERTISEMENT

ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ: ಚಿತ್ರ ನಟ ರಮೇಶ್ ಅರವಿಂದ್

ಗೌರವ ಡಾಕ್ಟರೇಟ್ ಅನ್ನು ಚಿತ್ರ, ಕುಟುಂಬ, ಜನರಿಗೆ ಅರ್ಪಿಸಿದ ನಟ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 16:13 IST
Last Updated 15 ಸೆಪ್ಟೆಂಬರ್ 2022, 16:13 IST
ನಟ ರಮೇಶ್‌ ಅರವಿಂದ್‌ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ‘ಶಿವಾಜಿ ಸುರತ್ಕಲ್–2’ ಚಿತ್ರ ತಂಡದವರು ಗುರುವಾರ ಸಂಭ್ರಮ ಆಚರಿಸಿದರು. ನಟ ನಾಸರ್, ರಾಧಿಕಾ ನಾರಾಯಣ್, ಅನೂಪ್ ಇದ್ದಾರೆ/ ಪ್ರಜಾವಾಣಿ ಚಿತ್ರ
ನಟ ರಮೇಶ್‌ ಅರವಿಂದ್‌ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ‘ಶಿವಾಜಿ ಸುರತ್ಕಲ್–2’ ಚಿತ್ರ ತಂಡದವರು ಗುರುವಾರ ಸಂಭ್ರಮ ಆಚರಿಸಿದರು. ನಟ ನಾಸರ್, ರಾಧಿಕಾ ನಾರಾಯಣ್, ಅನೂಪ್ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ. ಕುಟುಂಬದ ಸಹಕಾರ ಮತ್ತು ಜನರ ಪ್ರೋತ್ಸಾಹದಿಂದಾಗಿ ಚಲನಚಿತ್ರ ರಂಗದಲ್ಲಿ ಮೂವತ್ತು ವರ್ಷಗಳವರೆಗೆ ಸಾಗಿ ಬಂದಿದ್ದೇನೆ’ ಎಂದು ಚಿತ್ರ ನಟ ರಮೇಶ್ ಅರವಿಂದ್ ಹೇಳಿದರು.

ಗೌರವ ಡಾಕ್ಟರೇಟ್‌ ದೊರೆತ ಹಿನ್ನೆಲೆಯಲ್ಲಿ, ನಗರದಲ್ಲಿ ‘ಶಿವಾಜಿ ಸುರತ್ಕಲ್‌–2’ ಚಿತ್ರ ತಂಡದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಜನರು ಒಪ್ಪಿದ್ದರಿಂದಲೇ ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಮಾಡುತ್ತಾ ಬಂದಿದೆ. ಎಲ್ಲ ಹಂತದಲ್ಲೂ ಜೊತೆಗಿದ್ದಿದ್ದರಿಂದ ಮೂರು ವರ್ಷ ಮೂವತ್ತು ವರ್ಷವಾಯಿತು. ಗೌರವ ಡಾಕ್ಟರೇಟ್‌ವರೆಗೂ ತಂದು ನಿಲ್ಲಿಸಿದ್ದೀರಿ. ನೀವೆಲ್ಲರೂ ನನ್ನ ಜೊತೆಗೆ ಇಷ್ಟು ವರ್ಷ ಇದ್ದಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಶಿವಾಜಿ ಸುರತ್ಕಲ್‌–1’ ರೆಸಾರ್ಟ್‌ನಲ್ಲಿ ನಡೆದಿತ್ತು. ಆದರೆ, ‘ಶಿವಾಜಿ ಸುರತ್ಕಲ್‌–2’ ಸುರತ್ಕಲ್, ಉಡುಪಿ, ಶಿವಮೊಗ್ಗ, ಮಂಗಳೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಬಾರಿ ಕೇಸ್ ನಂ.131 ಪರಿಹರಿಸುವ ಕಥೆ ಇರಲಿದೆ’ ಎಂದು ತಿಳಿಸಿದರು.

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, ‘ಶಿವಾಜಿ ಸುರತ್ಕಲ್‌–1ರಲ್ಲಿ ಮೈಸೂರನ್ನು ಚೆನ್ನಾಗಿ ತೋರಿಸಿದ್ದೀರಿ ಎಂದು ಪ್ರೇಕ್ಷಕರು ಹೇಳಿದ್ದರು. ಹೀಗಾಗಿ, ‘ಶಿವಾಜಿ ಸುರತ್ಕಲ್‌–2’ ಚಿತ್ರೀಕರಣವನ್ನೂ ಇಲ್ಲಿ ನಡೆಸುತ್ತಿದ್ದೇವೆ. ಚೆನ್ನಾಗಿ ಮೂಡಿ ಬರುತ್ತಿದೆ. ಜ.23ರಂದು ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

ನಟಿ ರಾಧಿಕಾ ಮಾತನಾಡಿ, ‘ಈ ಚಿತ್ರದಲ್ಲಿ ಮೈಸೂರು ಕೂಡ ಒಂದು ಪಾತ್ರವಾಗಿರಲಿದೆ. ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.

‘ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ದೊರೆತಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ನಟ ನಾಸರ್ ಮಾತನಾಡಿ, ‘ರಮೇಶ್‌ ಅವರೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅನುಭವ ನೀಡುತ್ತದೆ. ಕಲಾವಿದರಲ್ಲಿರುವ ಪ್ರತಿಭೆಯನ್ನೆಲ್ಲಾ ಬಳಸಿಕೊಳ್ಳುವಲ್ಲಿ ಸಿದ್ಧಹಸ್ತರು. ಗೌರವ ಡಾಕ್ಟರೇಟ್‌ಗೆ ಅವರು ಸಂಪೂರ್ಣ ಅರ್ಹತೆ ಗಳಿಸಿದ್ದಾರೆ’ ಎಂದು ಹೇಳಿದರು.

‘ನಾನು ‘ರಾವಣ ರಾಜ್ಯ’ ಸಿನಿಮಾದ ಮೂಲಕ ಕರ್ನಾಟಕದಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.