ಕೊರೊನಾ ವೈರಾಣು ತಂದಿಟ್ಟ ಲಾಕ್‌ಡೌನ್ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಭಾರತದ ಸಿನಿಮಾ ಉದ್ಯಮಕ್ಕೆ ಕನಿಷ್ಠ ಎರಡು ವರ್ಷಗಳು ಬೇಕಾಗಲಿವೆ. ಕೋವಿಡ್–19 ಸಾಂಕ್ರಾಮಿಕವು ದೊಡ್ಡ ಬಜೆಟ್ಟಿನ ಹಲವು ಯೋಜನೆಗಳ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಸಹಸ್ರಾರು ಉದ್ಯೋಗಗಳಿಗೆ ಕುತ್ತು ತಂದಿದೆ.
ಈ ಅಂದಾಜು ಮಾಡಿರುವವರು ಬಾಲಿವುಡ್‌ನ ಅಂದಾಜು ಒಂದು ಡಜನ್ ನಿರ್ಮಾಪಕರು, ಸಿನಿಮಾ ವಿತರಕರು ಮತ್ತು ಕಲಾವಿದರು. ಈ ವಾರ ನಡೆದ ವಿಡಿಯೊ ಕಾನ್ಫರೆನ್ಸ್ ಒಂದರಲ್ಲಿ ಈ ಅಂದಾಜಿನ ಬಗ್ಗೆ ಚರ್ಚೆಯಾಗಿದೆ ಎಂದು ಅದರಲ್ಲಿ ಭಾಗಿಯಾಗಿದ್ದ ಒಬ್ಬರು ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಸಿನಿಮಾ ಮಾಡುವುದು ಯಾವತ್ತಿದ್ದರೂ ಒಂದು ಜೂಜಿಗೆ ಸಮ. ಈಗಿನ ಪರಿಸ್ಥಿತಿಯಲ್ಲಿ ನಾವು ಮುಂದಿನ ವರ್ಷವೂ ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ’ ಎಂದು ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕರೊಬ್ಬರು ತಮ್ಮ ಹೆಸರು ಬಹಿರಂಗ ಮಾಡಬಾರದು ಎಂಬ ಷರತ್ತಿನೊಂದಿಗೆ ಹೇಳಿದರು. ‘ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದು ನಾವು ಜನರಲ್ಲಿ ಬೇಡಿಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.
ಸ್ಥಿತಿ ಈ ರೀತಿ ಇರುವಾಗ, ಗಲ್ಲಾಪೆಟ್ಟಿಗೆ ಮೂಲಕ ಸಿಗುವ ಆದಾಯದಲ್ಲಿ ಕುಸಿತ ಲಾಕ್‌ಡೌನ್ ತೆರವಾದ ನಂತರವೂ ಮುಂದುವರೆಯಬಹುದು ಎಂಬ ನಿರೀಕ್ಷೆ ಇದೆ. ಗಲ್ಲಾಪೆಟ್ಟಿಗೆ ಮೂಲಕ ಸಿಗುವ ಆದಾಯವು ಸಿನಿಮಾ ಉದ್ಯಮದ ಶೇಕಡ 60ರಷ್ಟು ಆದಾಯಕ್ಕೆ ಸಮ. ಅಲ್ಲಿನ ಆದಾಯದಲ್ಲಿ ಖೋತಾ ಆಗಲಿರುವ ಕಾರಣ ಸಿನಿಮಾ ನಿರ್ಮಾಪಕರು ‘ದೊಡ್ಡ ಬಜೆಟ್ಟಿನ ಸಿನಿಮಾಗಳು ಹಾಗೂ ವಿದೇಶಿ ಲೊಕೇಷನ್‌ಗಳಲ್ಲಿ ಅದ್ದೂರಿ ಚಿತ್ರೀಕರಣದ ಯೋಜನೆಗಳನ್ನು ಸದ್ಯಕ್ಕೆ ಕೈಬಿಡಲಾಗುವುದು’ ಎಂದು ಹೇಳುತ್ತಿದ್ದಾರೆ.
‘ಸಿನಿಮಾಗಳ ಪಾಲಿಗೆ ಸಂಕಷ್ಟದ ಕಾಲ ಇದು’ ಎನ್ನುತ್ತಾರೆ ಜೆಹಿಲ್ ಥಕ್ಕರ್. ಇವರು ಡೆಲಾಯ್ಟ್ ಇಂಡಿಯಾ ಜೊತೆ ಕೆಲಸ ಮಾಡುತ್ತಾರೆ. ‘ಲಾಕ್‌ಡೌನ್ ತೆರವಾದ ನಂತರ ಕೂಡ, ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ಬರಲು ಹೆಚ್ಚಿನವರು ಮನಸ್ಸು ಮಾಡುವುದಿಲ್ಲ ಎಂಬುದು ನನ್ನ ಲೆಕ್ಕಾಚಾರ’ ಎಂದು ಥಕ್ಕರ್ ಹೇಳುತ್ತಾರೆ.
ಬಾಲಿವುಡ್‌ನಲ್ಲಿ ಚಟುವಟಿಕೆಗಳು ಸ್ಥಗಿತದ ಹಂತ ತಲುಪಿವೆ. ಸಿನಿಮಾ ಮಂದಿರಗಳು ಹಾಗೂ ಸಿನಿಮಾ ಚಿತ್ರೀಕರಣ ಕೆಲಸವು ದೇಶದಾದ್ಯಂತ ನಿಂತುಹೋಗಿದೆ. ಅಂದಾಜು 9,500 ಸಿನಿಮಾ ಮಂದಿರಗಳ ಬಾಗಿಲು ಮುಚ್ಚಿದೆ. ಲಾಕ್‌ಡೌನ್ ತೆರವಾದ ನಂತರ ಕೆಲವು ವಾರಗಳು ಅಥವಾ ಕೆಲವು ತಿಂಗಳುಗಳವರೆಗೆ ಚಿತ್ರಪ್ರದರ್ಶನವು ಮೊದಲಿನ ಸ್ಥಿತಿಗೆ ಬರಲಾರದು ಎಂಬ ಅಂದಾಜು ಇದೆ.
‘ಜೂನ್ ಮಧ್ಯಭಾಗಕ್ಕೂ ಮೊದಲು ದೇಶದ ಎಲ್ಲ ಕಡೆ ಸಿನಿಮಾ ಮಂದಿರಗಳ ಬಾಗಿಲು ತೆರೆಯಲಿಕ್ಕಿಲ್ಲ. ಆಗಸ್ಟ್‌ವರೆಗೆ ಪರಿಸ್ಥಿತಿ ಮೊದಲಿನಂತೆ ಆಗಲಿಕ್ಕಿಲ್ಲ’ ಎಂದು ಇಲಾರಾ ಕ್ಯಾಪಿಟಲ್ ಹೂಡಿಕೆ ಸಂಸ್ಥೆಯ ವಿಶ್ಲೇಷಕ ಕರಣ್ ಹೇಳುತ್ತಾರೆ. ವೀಕ್ಷಕರನ್ನು ಚಿತ್ರಮಂದಿರಗಳ ಕಡೆ ಸೆಳೆಯಲು ಟಿಕೆಟ್ ಬೆಲೆ ತಗ್ಗಿಸಬೇಕಾಗಬಹುದು ಎಂದೂ ಅವರು ಹೇಳುತ್ತಾರೆ.
ಭಾರತದಲ್ಲಿ ಪ್ರತಿ ವರ್ಷ ಸರಾಸರಿ 1,200 ಸಿನಿಮಾಗಳು ಸಿದ್ಧವಾಗುತ್ತವೆ. ‘ಆದರೆ, ಭಾರಿ ಬಜೆಟ್ಟಿನ ಸಿನಿಮಾಗಳು ಮುಂದಿನ ವರ್ಷಕ್ಕೆ ಮುಂದೂಡಿಕೆ ಆಗುತ್ತವೆ. ಗಲ್ಲಾಪೆಟ್ಟಿಗೆಯಲ್ಲಿ ಹಣ ಸಂಗ್ರಹ ಕಡಿಮೆ ಇರಲಿರುವ ಕಾರಣ ಸಿನಿಮಾ ಉದ್ಯಮದಲ್ಲಿ ಹಣದ ಕೊರತೆ ಎದುರಾಗಬಹುದು’ ಎಂದು ಕರಣ್ ಹೇಳುತ್ತಾರೆ.
ಉದಾಹರಣೆಗೆ, ಬಹುತಾರಾಗಣದ ಆ್ಯಕ್ಷನ್ ಫ್ರ್ಯಾಂಚೈಸ್ ಸಿನಿಮಾ, ರೋಹಿತ್ ಶೆಟ್ಟಿ ಅವರ ‘ಸೂರ್ಯವಂಶಿ’ ಬಿಡುಗಡೆಯು ಅನಿರ್ದಿಷ್ಟ ಅವಧಿಗೆ ಮುಂದಕ್ಕೆ ಹೋಗಿದೆ. ಇದು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ‘ಸಿನಿಮಾ ಮಂದಿರಗಳ ಬಾಗಿಲು ತೆರೆದ ನಂತರ, ಸಣ್ಣ ಬಜೆಟ್ಟಿನ ಸಿನಿಮಾಗಳು ಮೊದಲು ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ. ಅಂತಹ ಸಿನಿಮಾಗಳನ್ನು ಬಿಡುಗಡೆ ಮಾಡಿ ನಿರ್ಮಾಪಕರು, ಎಷ್ಟು ಜನ ಸಿನಿಮಾ ನೋಡಲು ಬರುತ್ತಾರೆ ಎಂಬುದನ್ನು ಅಂದಾಜಿಸುತ್ತಾರೆ’ ಎಂದು ಹೇಳುತ್ತಾರೆ ಬಾಲಿವುಡ್ ಸಿನಿಮಾಗಳ ಬಗ್ಗೆ ಅಧ್ಯಯನ ನಡೆಸುವ ಆರ್ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ಶೈಲೇಶ್ ಕಪೂರ್.
ಮೇ ಮಧ್ಯಭಾಗದವರೆಗಂತೂ ಸಿನಿಮಾ ಮಂದಿರಗಳ ಬಾಗಿಲು ತೆರೆಯುವ ಸಾಧ್ಯತೆ ಇಲ್ಲವಾಗಿರುವ ಕಾರಣ, ಕಳೆದ ಒಂದು ತಿಂಗಳಿನಲ್ಲಿ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾಗಿದ್ದ ಕಾರಣ, ಗಲ್ಲಾಪೆಟ್ಟಿಗೆಯ ಮೂಲಕ ಸಿಗಬಹುದಾಗಿದ್ದ ಆದಾಯದಲ್ಲಿ ಅಂದಾಜು ₹ 985 ಕೋಟಿ ನಷ್ಟವಾಗಿದೆ ಎಂದು ವ್ಯಾಪಾರ ವಿಶ್ಲೇಷಕ ಗಿರೀಶ್ ಜೋಹರ್ ಹೇಳುತ್ತಾರೆ.
ಷೇರು ಬೆಲೆ ಕುಸಿತ
ಭಾರತದಲ್ಲಿ ಮಲ್ಟಿಪ್ಲೆಕ್ಸ್‌ಗಳನ್ನು ನಡೆಸುವ ಎರಡು ದೊಡ್ಡ ಕಂಪನಿಗಳು ಪಿವಿಆರ್ ಮತ್ತು ಐನಾಕ್ಸ್. ಇವುಗಳ ಷೇರುಗಳ ಬೆಲೆಯು ಫೆಬ್ರುವರಿ ಕೊನೆಯ ವಾರದಲ್ಲಿ ಇದ್ದ ಬೆಲೆಗೆ ಹೋಲಿಸಿದರೆ ಶೇಕಡ 40ರಷ್ಟಕ್ಕಿಂತ ಹೆಚ್ಚು ಕುಸಿದಿವೆ.
‘ತಮ್ಮಲ್ಲಿಗೆ ಸಿನಿಮಾ ನೋಡಲು ಬರುವವರ ಹೆಸರುಗಳನ್ನು ದಾಖಲಿಸಿಕೊಳ್ಳಬೇಕಾಗಬಹುದು, ಅವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕಾಗಬಹುದು, ಅವರು ಮಾಸ್ಕ್ ಧರಿಸುವುದರ ಮೇಲೆ, ಅವರು ಅಂತರ ಕಾಯ್ದುಕೊಳ್ಳುವುದರ ಬಗ್ಗೆ ತಾವೇ ನಿಗಾ ಇಡಬೇಕಾಗಬಹುದು. ಇವೆಲ್ಲವುಗಳಿಂದಾಗಿ ತಮ್ಮ ನಿರ್ವಹಣಾ ವೆಚ್ಚ ಹೆಚ್ಚಬಹುದು’ ಎಂಬ ಭೀತಿ ಸಿನಿಮಾ ಮಂದಿರಗಳ ಮಾಲೀಕರಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.