ADVERTISEMENT

ಸಿನಿಮಾ & ಅಪರಾಧದ ಅಧ್ಯಾಯಗಳು

ಜಗತ್ತಿನ ಸಿನಿಮಾ ಲೋಕ ಅಪರಾಧ, ಕ್ರೌರ್ಯಗಳಿಂದ ಹೊರತಾಗಿಲ್ಲ. ಹಾಲಿವುಡ್‌ ಮತ್ತು ಭಾರತೀಯ ಚಿತ್ರರಂಗದ ಜನಪ್ರಿಯ ಹೀರೊಗಳು ಅಪರಾಧದ ಸುಳಿಯಲ್ಲಿ ಸಿಲುಕಿದ ಕೆಲವು ನಿದರ್ಶನಗಳು...

ಕೆ.ಪುಟ್ಟಸ್ವಾಮಿ
Published 23 ಜೂನ್ 2024, 0:37 IST
Last Updated 23 ಜೂನ್ 2024, 0:37 IST
<div class="paragraphs"><p>ಎಐ ಚಿತ್ರ: ಕಣಕಾಲಮಠ</p></div>

ಎಐ ಚಿತ್ರ: ಕಣಕಾಲಮಠ

   

ಜನಪ್ರಿಯ ನಟ ದರ್ಶನ್ ಕನ್ನಡ ಚಲನಚಿತ್ರರಂಗ ಹಿಂದೆಂದೂ ಕಂಡರಿಯದ ಅಪರಾಧ ಕೃತ್ಯವೊಂದರ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಅವರು ಭಾಗಿಯಾದರೆಂದು ಹೇಳಲಾದ ಅಪಹರಣ, ಚಿತ್ರಹಿಂಸೆ ನೀಡಿದ ಮತ್ತು ಕೊಲೆಯ ಪ್ರಕರಣ ದೊಡ್ಡ ಸಂಚಲನವನ್ನು ಮೂಡಿಸಿದೆ. ಪ್ರಕರಣವು ದಿನೇ ದಿನೇ ಕುರ್ಚಿಯ ತುದಿಗೆ ಕೂಡಿಸುವ ಥ್ರಿಲ್ಲರ್ ಚಿತ್ರವೊಂದನ್ನು ಮೀರಿಸುವಷ್ಟು ರೋಚಕ ತಿರುವು ಪಡೆಯುತ್ತಾ ಕುತೂಹಲವನ್ನು ಹುಟ್ಟಿಸುತ್ತಲೇ ಇದೆ.

ಸಮಾಜದ ಇತರೆ ಕ್ಷೇತ್ರಗಳಲ್ಲಿ ನಡೆಯುವ ಅಪರಾಧಗಳ ರೀತಿಯಲ್ಲಿಯೇ ಕೊಲೆ, ಸುಲಿಗೆಯಿಂದ ಹಿಡಿದು, ಅಪರಾಧ ಕೃತ್ಯಗಳ ಸಂಚು, ಮಹಿಳಾ ಶೋಷಣೆ, ಕಳ್ಳಬೇಟೆ, ಮಾದಕ ದ್ರವ್ಯ ಸೇವನೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ, ಕಾನೂನಿನ ದಿವ್ಯ ನಿರ್ಲಕ್ಷ್ಯ, ಅತಿವೇಗದ ಚಾಲನೆ, ಅಪಘಾತ ಪ್ರಕರಣಗಳು-ಹೀಗೆ ಜಗತ್ತಿನ ಎಲ್ಲ ಅಪರಾಧಗಳೂ ಚಿತ್ರರಂಗಕ್ಕೆ ಹೊಸದಲ್ಲ. ಅವುಗಳಿಗೆ ಅಂಟಿಕೊಂಡಿರುವ ಗ್ಲಾಮರ್ ಅಂತಹ ಪ್ರಕರಣಗಳಿಗೆ ವ್ಯಾಪಕ ಕುತೂಹಲ ಹುಟ್ಟಿಸಿ ಅಗಾಧ ಪ್ರಚಾರಕ್ಕೆ ದಾರಿ ಮಾಡಿಕೊಡುತ್ತದೆ. ಜಗತ್ತನ್ನು ತಲ್ಲಣಗೊಳಿಸಿದ ಅಂಥ ಹಗರಣಗಳ ಸಮೀಕ್ಷೆಯೊಂದು ಇಲ್ಲಿದೆ.

ADVERTISEMENT

ಹಾಲಿವುಡ್‌ನ ಪ್ರಕರಣಗಳು

ಹಾಲಿವುಡ್ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ ಮೊದಲ ಅಪರಾಧ ಕೃತ್ಯವೆಂದರೆ ಹೆಸರಾಂತ ನಟ ಚಾರ್ಲಿ ಚಾಪ್ಲಿನ್‌ನಂಥ ದೈತ್ಯರನ್ನು ರೂಪಿಸಿದ ನಿರ್ದೇಶಕ ರೋಸ್ಕೋ ಆರ್ಬುಕಲ್ ಅವರು ಕೊಲೆಯ ಪ್ರಕರಣದಲ್ಲಿ ಬಂಧನವಾದದ್ದು. ಸಹನಟಿ ವರ್ಜೀನಿಯಾ ರಾಪೆಯನ್ನು ಅತ್ಯಾಚಾರ ಮಾಡಿ ಕೊಂದ ಆಪಾದನೆಯಲ್ಲಿ ಬಂಧನವಾದ. ಅಮೆರಿಕದ ಸಾಂಪ್ರದಾಯಕ ಮೌಲ್ಯಗಳ ಕುಸಿತಕ್ಕೆ ಹಾಲಿವುಡ್ ಕಾರಣವಾಗಿದೆ ಎಂದು ನಂಬಿದ್ದ ಜನತೆ ಈ ಪ್ರಕರಣದಿಂದ ಕುಪಿತಗೊಂಡು, ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಸಾಕ್ಷ್ಯಾಧಾರ ಕೊರತೆಯಿಂದ ಆರ್ಬುಕಲ್ ಬಚಾವಾದರೂ ಸಾಮಾಜಿಕ ಬಹಿಷ್ಕಾರದಿಂದ ಬದುಕು ನರಕವಾಯಿತು. ವೃತ್ತಿ ಬದುಕು ಅವನತಿ ಕಂಡಿತು. 1933ರಲ್ಲಿ 46 ವರ್ಷದ ಆರ್ಬುಕಲ್ ಹೃದಯಾಘಾತದಿಂದ ಮೃತಪಟ್ಟರು.

ಆರ್ಬುಕಲ್ ಪ್ರಕರಣದ ಬೆನ್ನ ಹಿಂದೆಯೇ ಮತ್ತೊಬ್ಬ ನಿರ್ದೇಶಕ ವಿಲಿಯಂ ಡೆಸ್ಮಂಡ್ ಟೇಲರ್ 1923ರಲ್ಲಿ ತನ್ನ ಮನೆಯಲ್ಲಿ ಬೆನ್ನಿಗೆ ಗುಂಡು ತಗುಲಿ ಶವವಾಗಿ ಬಿದ್ದಿದ್ದ. ‘ಶತಮಾನದ ಹಗರಣ’ ಎಂದೇ ಖ್ಯಾತಿ ಪಡೆದ ಅಪಹರಣದ ಸಂಚಿನಲ್ಲಿ ಭಾಗಿಯಾದ ಆಪಾದನೆ ಮೇಲೆ ಆತನ ಸಹನಟಿ ಮೇಬಲ್ ನರ‍್ಮಾಂಡ್‌ಳನ್ನು ಬಂಧಿಸಿ ವಿಚಾರಣೆ ನಡೆಸಿದರೂ ಈ ಪ್ರಕರಣವೂ ಸಾಕ್ಷ್ಯಾಧಾರ  ಕೊರತೆಯಿಂದ ಬಿದ್ದುಹೋಯಿತು. ನಟಿಯ ವೃತ್ತಿ ಬದುಕೂ ಅಂತ್ಯವಾಯಿತು.

ಚಿತ್ರರಂಗ ಮಹಿಳಾ ಶೋಷಣೆಯಿಂದ ಮುಕ್ತವಲ್ಲ. ಬಲತ್ಕಾರ, ವ್ಯಭಿಚಾರ, ವಿವಾಹೇತರ ಸಂಬಂಧದ ಹಗರಣಗಳು, ನಟಿಯ ಆಯ್ಕೆಯಲ್ಲಿ ನಡೆವ ಲೈಂಗಿಕ ಶೋಷಣೆ, ಕೌಟುಂಬಿಕ ದೌರ್ಜನ್ಯ-ಇವೆಲ್ಲವೂ ಸಹಜ ಎನ್ನುವಷ್ಟರ ಮಟ್ಟಿಗೆ ನಡೆಯುತ್ತಿವೆ. ಪ್ರಸಿದ್ಧರ ಹೆಸರು ಅಂಟಿಕೊಂಡಾಗ ಮಾತ್ರ ಅಂಥ ಪ್ರಕರಣಗಳು ವಿವಾದದಲೆ ಎಬ್ಬಿಸುತ್ತವೆ. ಇಂಥ ಮಹಿಳಾ ಶೋಷಣೆ ಮೊದಲ ಬಾರಿಗೆ ಸಾರ್ವಜನಿಕ ಚರ್ಚೆಗೆ ಒಳಪಟ್ಟು ದೊಡ್ಡ ಸಂಚಲನ ಸೃಷ್ಟಿಸಿದ್ದು, ಹಗರಣಕ್ಕೆ ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್‌ನ ಹೆಸರು ತಗುಲಿಕೊಂಡಾಗ.

1943ರಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ ಅವಿವಾಹಿತೆ ಜಾಆನ್ ಬ್ಯಾರಿ, ಮಗುವಿನ ತಂದೆ ಚಾಪ್ಲಿನ್ ಎಂದು ಹೇಳಿಕೆ ನೀಡಿ ನ್ಯಾಯ ಬೇಡಿ ಕೋರ್ಟ್ ಮೆಟ್ಟಲೇರಿದಾಗ ಹಾಲಿವುಡ್ ಮಾತ್ರವಲ್ಲ, ಇಡೀ ಜಗತ್ತೇ ಬೆಚ್ಚಿತು. ಹೆಣ್ಣುಬಾಕ ಎಂದೇ ಕುಖ್ಯಾತನಾಗಿದ್ದ ಚಾಪ್ಲಿನ್, ಪರಿಚಿತ ಜಾಆನ್ ಬ್ಯಾರಿಯನ್ನು ತನ್ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆರಿಸಿದ ಕೆಲವೇ ದಿನಗಳಲ್ಲಿ ಪ್ರಿಯಕರನೂ ಆದ. ಇಬ್ಬರೂ ಅನೇಕ ಪ್ರವಾಸ, ಪ್ರಸಿದ್ಧ ಭೋಜನಕೂಟಗಳಲ್ಲಿ ಕಾಣಿಸಿಕೊಂಡರು. (ಆ ವೇಳೆಗೆ ಚಾಪ್ಲಿನ್ ಸಹನಟಿ ಪಾಲೆಟ್ ಗೊಡ್ಡಾರ್ಡ್‌ಳನ್ನು ಮೂರನೆಯ ಹೆಂಡತಿಯಾಗಿ ಸ್ವೀಕರಿಸಿದ್ದ) ಆದರೆ ಆಕೆ ವೃತ್ತಿಬದುಕನ್ನು ಗಂಭೀರವಾಗಿ ಸ್ವೀಕರಿಸಿಲ್ಲವೆಂದು ಆಪಾದಿಸಿ ತ್ಯಜಿಸಿದ. ಮಾನಸಿಕ ಸ್ಥಿಮಿತ ಕಳೆದುಕೊಂಡ ಆಕೆ 1942ರ ಡಿಸೆಂಬರ್‌ನಲ್ಲಿ ಚಾಪ್ಲಿನ್ ಮನೆಗೆ ನುಗ್ಗಿ(ಆ ವೇಳೆಗೆ ಗೊಡ್ಡಾರ್ಡ್ ವಿಚ್ಛೇದನವಾಗಿತ್ತು) ಗನ್ ತೆಗೆದು ಬೆದರಿಸಿದಳು. ಆ ದಿನ ತನ್ನನ್ನು ರಮಿಸಿದ ಚಾಪ್ಲಿನ್‌ನಿಂದ ತಾನು ಗರ್ಭಿಣಿಯಾದೆ ಎಂದು ಬ್ಯಾರಿ ಹೇಳಿಕೆ ನೀಡಿದಳು. ಅಮೆರಿಕದ ಪ್ರಜೆಯಾಗದೆ ಉಳಿದ ಚಾಪ್ಲಿನ್ ವಿರುದ್ಧ ಕಣ್ಣಿಟ್ಟಿದ್ದ ಪ್ರಭುತ್ವ ಆತನ ಬಂಧನ ಮಾಡಿ ವಿಚಾರಣೆಗೊಳಪಡಿಸಿತು. ಪಿತೃತ್ವ ಪರೀಕ್ಷೆಗೆ ಆಗ ಇದ್ದ ರಕ್ತದ ಪರೀಕ್ಷೆಯ ಫಲಿತಾಂಶ ಚಾಪ್ಲಿನ್ ಪರವಿದ್ದರೂ ಅದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ತಾಂತ್ರಿಕವಾಗಿ ನಿರ್ದೋಷಿಯಾದರೂ ಹುಟ್ಟಿದ ಮಗುವಿನ ಜೀವನನಿರ್ವಹಣೆ ಹೊಣೆ ಹೊತ್ತು ಚಾಪ್ಲಿನ್ 1944ರಲ್ಲಿ ಖುಲಾಸೆಯಾದ. ಆ ವೇಳೆಗೆ ನಾಲ್ಕನೇ ಮದುವೆಯೂ ಆಗಿದ್ದ.

ಪೊಲಾನ್ಸ್ಕಿ ವಿಚಾರಣೆ

ಜಗತ್ ಪ್ರಸಿದ್ಧಿ ಪಡೆದ ನಿರ್ದೇಶಕ ರೋಮನ್ ಪೊಲಾನ್ಸ್ಕಿ ತನ್ನ ಹೀನ ಅಪರಾಧ ಕೃತ್ಯಗಳಿಂದ 1977ರಿಂದ ಈವರೆವಿಗೂ ದೇಶಭ್ರಷ್ಟನಾಗಿ ಉಳಿದಿದ್ದಾನೆ. ಪ್ಯಾರಿಸ್‌ನಲ್ಲಿ ಜನಿಸಿದ ಪೊಲೆಂಡ್ ಮೂಲದ ಈತ ಪೊಲಿಷ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘ರಿಪಲ್ಷನ್’, ‘ರೋಸ್ ಮೇರಿ ಬೇಬಿ’, ‘ಚೈನಾಟೌನ್’, ‘ಮ್ಯಾಕ್‌ಬೆತ್’ ಮುಂತಾದ ಅನನ್ಯ ಸಿನಿಮಾ ರೂಪಿಸಿದ. 1968ರಲ್ಲಿ ಅಮೆರಿಕಗೆ ಬಂದ ಆತ ಮದುವೆಯಾದ 18 ವರ್ಷದ ಸಹನಟಿ ಶರೋನ್ ಟೇಟ್‌ಳನ್ನು ಅವನಿಲ್ಲದ ಸಮಯದಲ್ಲಿ ಆತನಿಗೆ ಪರಿಚಯವಿದ್ದ ಧಾರ್ಮಿಕ ಪಂಥದ ಮುಖಂಡ ಚಾರ್ಲ್ಸ ಮ್ಯಾನ್ಸನ್‌ನ ಗುಂಪು ಬರ್ಬರವಾಗಿ ಕೊಂದುಹಾಕಿತು. ಹೇಗೋ ಬಚಾವಾದ ಆತ 1977ರಲ್ಲಿ ಸಮಂತಾ ಗೈಲಿ ಎಂಬ 13 ವರ್ಷದ ಎಳೆಯ ನಟಿಯನ್ನು ಗೆಳೆಯ ಜಾಕ್ ನಿಕೋಲ್‌ಸನ್‌ನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಬೆತ್ತಲೆ ಚಿತ್ರ ತೆಗೆದು ನಂತರ ವಿರೋಧದ ನಡುವೆಯೂ ಅತ್ಯಾಚಾರವೆಸಗಿದ. ಈ ಹೀನ ಕೃತ್ಯ ಬಹಿರಂಗವಾದ ಕೂಡಲೇ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ನ್ಯಾಯಾಲಯ ಶಿಕ್ಷೆ ವಿಧಿಸುವ ಮುನ್ನವೇ ಪ್ಯಾರಿಸ್ಸಿಗೆ ಓಡಿಹೋಗಿ ಆಶ್ರಯ ಪಡೆದ. ಈಗಲೂ ಅಮೆರಿಕಾ ಆತನ ವಾಪಸ್ಸಿಗೆ ಒತ್ತಾಯಿಸುತ್ತಲೇ ಇದೆ.

ಭಾಗವತರ್-ಎಂಜಿಆರ್‌

ಭಾರತದಲ್ಲಿ ಅಪಾರ ಕುತೂಹಲ ಮೂಡಿಸಿದ ಮತ್ತು ನ್ಯಾಯಾಲಯ ಶಿಕ್ಷೆ ವಿಧಿಸಿದ ಎರಡೂ ಪ್ರಕರಣಗಳು ವರದಿಯಾಗಿದ್ದು ಅಂದಿನ ಮದ್ರಾಸ್ ನಗರದಲ್ಲಿ. ತಮಿಳುನಾಡಿನ ಮೊದಲ ಸೂಪರ್‌ಸ್ಟಾರ್ ಎಂ.ಕೆ.ತ್ಯಾಗರಾಜ ಭಾಗವತರ್ ಅವರು ಅಂಥ ಶಿಕ್ಷೆಗೆ ಒಳಗಾದ ಮೊದಲಿಗರು. ಪ್ರಸಿದ್ಧ ವ್ಯಕ್ತಿಗಳ ಕಲ್ಪಿತ ಲೈಂಗಿಕ ಹಗರಣಗಳನ್ನು ಪ್ರಕಟಿಸಿ ಹಣ ವಸೂಲಿಗೆ ಹೆಸರಾಗಿದ್ದ ಪೀತ ಪತ್ರಕರ್ತ ಸಿ.ಎನ್.ಲಕ್ಷ್ಮಿನಾರಾಯಣ 1944ರಲ್ಲಿ ‘ಭಾಗವತರ್ ಲೀಲೈಗಳ್’ ಎಂಬ ಸರಣಿ ಲೇಖನ ಪ್ರಕಟಿಸಿ ಭಾಗವತರ ಚಾರಿತ್ರ್ಯಕ್ಕೆ ಮಸಿಬಳೆದ. 1944 ನವೆಂಬರ್ 8ರಂದು ಸೈಕಲ್ ರಿಕ್ಷಾದಲ್ಲಿ ಹೋಗುತ್ತಿದ್ದ ಆತನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಚಾಕುವಿನಿಂದ ತಿವಿಯಿತು. ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ಹಲವರ ವಿರುದ್ಧ ದೂರು ನೀಡಿ ಆತ ಸತ್ತ.

ಸ್ಯಾಂಡಲ್‌ವುಡ್‌

1997ರಲ್ಲಿ ನಿರ್ಮಾಪಕ ಚಿದಂಬರ ಶೆಟ್ಟಿ ಅವರ ಹತ್ಯೆಯಾಗುವವರೆಗೆ ಇಂಥ ಅಪರಾಧ ಕೃತ್ಯಗಳು ಕರ್ನಾಟಕದಲ್ಲಿ ವರದಿಯಾಗಿರಲಿಲ್ಲ. ಭೂಗತಲೋಕದ ಕೆಲವರಿಂದ ಚಿತ್ರ ನಿರ್ಮಾಣಕ್ಕೆ ದುಬಾರಿ ಬಡ್ಡಿಗೆ ಸಾಲ ಪಡೆದು ತೀರಿಸಲು ವಿಳಂಬಿಸಿದ ಕಾರಣ ಅಪಹರಿಸಿ, ನೀಡಿದ ಚಿತ್ರಹಿಂಸೆಗೆ ಶೆಟ್ಟಿ ಅಸುನೀಗಿದರು. ಭೂಗತಲೋಕದ ಮೂಲದಿಂದ ಹಣ ಎತ್ತುವುದು ಈಗಲೂ ನಿಂತಿಲ್ಲವೆಂದು ಹೇಳುತ್ತಾರೆ. 2021ರಲ್ಲಿ ಸಾಲ ತೀರಿಸದ ನಿರ್ಮಾಪಕರೊಬ್ಬರನ್ನು ರೌಡಿಗಳು ಅಪಹರಿಸಲು ನಡೆಸಿದ ಪ್ರಯತ್ನವನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ವಿಫಲಗೊಳಿಸಿದರು. ಆನಂತರ ಅಹಿತಕರ ಪ್ರಕರಣಗಳು ವರದಿಯಾಗಿಲ್ಲ.

ಕೌಟುಂಬಿಕ ದೌರ್ಜನ್ಯ (ಕಮಲ್ ಆಮ್ರೋಹಿ- ಮೀನಾಕುಮಾರಿ, ಮಝರ್ ಖಾನ್- ಜೀನತ್ ಅಮಾನ್) ಪತ್ರಕರ್ತರ ಮೇಲಿನ ಹಲ್ಲೆ (ಧರ್ಮೇಂದ್ರ ಪತ್ರಕರ್ತೆ ದೇವಯಾನಿ ಮತ್ತು ಎಸ್.ಕೃಷ್ಣ ಮೇಲೆ ನಡೆಸಿದ) ಇಂಥ ಕೃತ್ಯಗಳನ್ನು ಹೊರತುಪಡಿಸಿದರೆ ಶಾಂತವಾಗಿದ್ದ ಮುಂಬೈ ಚಿತ್ರರಂಗಕ್ಕೆ ಮೊದಲು ಅಪ್ಪಳಿಸಿದ್ದು ಅಕ್ರಮ ಶಸ್ತಾಸ್ತ್ರ ಹೊಂದಿದ ಆರೋಪ ಸಾಬೀತಾಗಿ ಶಿಕ್ಷೆ ಅನುಭವಿಸಿದ ಸಂಜಯ್ ದತ್ ಪ್ರಕರಣ. ಇನ್ನು ನಿಷೇಧಿತ ಸ್ಥಳದಲ್ಲಿ ಅಳಿವಿನಂಚಿನಲ್ಲಿರುವ ಕೃಷ್ಣಮೃಗ ಬೇಟೆಯಾಡಿದ ಮತ್ತು ಕುಡಿದ ಮತ್ತಿನಲ್ಲಿ ವಾಹನ ಓಡಿಸಿ ಸಾವಿಗೆ ಕಾರಣವಾದ ಅಪರಾಧಗಳಲ್ಲಿ ಭಾಗಿಯಾದ ನಟ ಸಲ್ಮಾನ್ ಖಾನ್ ಅವರ ಪ್ರಕರಣಗಳು ತಾರ್ಕಿಕ ಅಂತ್ಯಕಾಣದೇ ಮುಂದುವರೆದಿವೆ.

ಅದೇ ರೀತಿ ವೈಯಕ್ತಿಕ ಸೇಡಿಗಾಗಿ ನಟಿಯೊಬ್ಬಳ ಅಪಹರಣ, ಬಲಾತ್ಕಾರ ಮತ್ತು ಅದರ ಚಿತ್ರೀಕರಣಕ್ಕೆ ಸಂಚುಹೂಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಮಲಯಾಳಂ ನಟ ದಿಲೀಪ್ ಸಹ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ನಟಿಯರು ಸಂಘಟಿತರಾಗಿ ಹೋರಾಡದಿದ್ದರೇ ಆ ನಟನ ಬಂಧನವಾಗುವ ಬಗ್ಗೆ ಸಂಶಯಗಳಿದ್ದವು.
ಮೀ ಟೂ ಪ್ರಕರಣಗಳ ಗಾಂಭಿರ್ಯವನ್ನೇ ನಮ್ಮ ಪುರುಷ ಪ್ರಧಾನ ಮನೋಭಾವ ಮತ್ತು ಪುರುಷಾಂಕಾರ ಕೊಚ್ಚಿ ಹಾಕಿದೆ. ನೊಂದ ನಟಿಯರನ್ನೇ ವ್ಯವಸ್ಥಿತವಾಗಿ ಅಪರಾಧಿಗಳನ್ನು ಮಾಡುವ ವಿಧಾನ ಬೆಚ್ಚಿ ಬೀಳಿಸುತ್ತದೆ.

ಇಂಥ ಅಪರಾಧಗಳ ಪಟ್ಟಿ ಬೆಳೆಯುತ್ತಲೇ ಇದೆ. ಚಲನಚಿತ್ರರಂಗದ ಅಪರಾಧಗಳಲ್ಲಿ ಅತಿಹೆಚ್ಚು ಬಾಗೀದಾರರು ಪುರುಷರೇ. (ಅನ್ಯಾಯ ಎದುರಿಸಲಾಗದ ಮಹಿಳೆಯರು ಮೌನವಾಗುತ್ತಾರೆ ಇಲ್ಲವೇ ಆತ್ಮಹತ್ಯೆಗೆ ಶರಣಾಗುತ್ತಾರೆ) ಅದರಲ್ಲೂ ಸೆಲೆಬ್ರಿಟಿ ಆದವರು ತಮಗಿರುವ ಧನಬಲ, ರಾಜಕೀಯ ಸಂಪರ್ಕ, ಅಭಿಮಾನಿ ಬಳಗದ ನೆರವಿನಿಂದ ಕಾನೂನಿನ ಬಲೆಯನ್ನು ಹರಿದು ಬರಲು ಯತ್ನಿಸುತ್ತಾರೆ. ಅವರು ಮಾಡುವ ದಾನ ಧರ್ಮದ ಬಗ್ಗೆ ಪ್ರಚಾರ ಸಿಕ್ಕು ಹೀನಕೃತ್ಯಗಳು ಮಂಕಾಗುತ್ತವೆ, ಒಂದು ವೇಳೆ ಶಿಕ್ಷೆಯಾದರೂ ಹೊರಬಂದ ನಂತರ ಅವರ ಅಂತಸ್ತು, ಯಶಸ್ಸು ಇನ್ನಷ್ಟು ಹೆಚ್ಚಿದ ಪ್ರಕರಣಗಳನ್ನೂ ನೋಡಿದ್ದೇವೆ. ಹಾಗಾಗಿ ಪ್ರಕರಣದ ಆರಂಭದಲ್ಲಿ ಹುಟ್ಟುವ ಕುತೂಹಲದ ಕಾವು ಕೆಲವೇ ದಿನಗಳಲ್ಲಿ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಆಕ್ರೋಶವು ಜನಮಾನಸದಿಂದ ಕಾಲ್ತೆಗೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.