ADVERTISEMENT

ಕೋಸ್ಟಲ್‌ ವುಡ್‌ನಲ್ಲಿ ‘ಪೆಪ್ಪೆರೆರೆ ಪೆರೆರೆರೆ’

ಕರಾವಳಿಯ ಚಿರಪರಿಚಿತ ಸದ್ದಿಗೆಸಿನಿರೂಪ ನೀಡಿದ ಶೋಭರಾಜ್ ಪಾವೂರು

ಮಹಮ್ಮದ್ ಶರೀಫ್ ಕಾಡುಮಠ
Published 14 ಜೂನ್ 2019, 7:59 IST
Last Updated 14 ಜೂನ್ 2019, 7:59 IST
   

ತುಳು ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವೊಂದು ಯುವ ಪ್ರತಿಭೆಗಳು ನಿರ್ದೇಶನ ದತ್ತ ಚಿತ್ತಹರಿಸುತ್ತಿರುವುದು ಕಂಡು ಬರುತ್ತಿದೆ. ಹೀಗೆ ನಟನೆ, ನಿರ್ದೇಶನದಲ್ಲಿ ಪಕ್ವತೆಯನ್ನು ಗಳಿಸಿಕೊಂಡು, ಕೋಸ್ಟಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆ ಮೂಡಿಸಿದವರು ಶೋಭರಾಜ್ ಪಾವೂರು.

‘ಏಸ’ ಚಿತ್ರದಲ್ಲಿ ಹಾಸ್ಯಮಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಪ್ರೇಕ್ಷಕ ಎದ್ದು ಬಿದ್ದು ನಗುವಂತೆ ಮಾಡಿದ ಶೋಭರಾಜ್‌, ನಟನೆಯಷ್ಟೇ ತೆರೆಯ ಹಿಂದಿನ ಶ್ರಮದ ಕೆಲಸಗಳಲ್ಲೂ ಪರಿಣತರು. ನಟನೆ, ಸಂಭಾಷಣೆ, ಸ್ಕ್ರಿಪ್ಟ್‌ ಮೂಲಕ ಇತರ ಕೆಲವು ತುಳು ಚಿತ್ರಗಳಲ್ಲಿ ಕೈಯಾಡಿಸಿದ್ದ ಶೋಭರಾಜ್, ತನಗೆ ದಕ್ಕಿದ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಈ ಬಾರಿ ‘ಪೆಪ್ಪೆರೆರೆ ಪೆರೆರೆರೆ’ ಎಂಬ ಕುತೂಹಲಕಾರಿ ಶೀರ್ಷಿಕೆಯ ಹಾಸ್ಯ ಪ್ರಧಾನ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾಗಲು ಹೊರಟಿದ್ದಾರೆ.

‘ಚಿತ್ರದ ಶೀರ್ಷಿಕೆ ಸದ್ದು ಮಾಡಬೇಕು ಎಂಬ ಕನಸು ಎಲ್ಲ ಚಿತ್ರ ನಿರ್ದೇಶಕರಲ್ಲಿ ಇರುತ್ತದೆ. ಆದರೆ ನನಗೆ ಒಂದು ಸದ್ದನ್ನೇ ಶೀರ್ಷಿಕೆ ಮಾಡಿದರೆ ಹೇಗೆ ಎಂಬ ಯೋಚನೆ ಹೊಳೆಯಿತು. ಅಲ್ಲದೇ ಚಿತ್ರದ ಕಥೆಗೂ ಅದು ಪೂರಕವಾಗಿಯೇ ಇದೆ’ ಎಂದು ಟೈಟಲ್ ರಹಸ್ಯ ಬಿಚ್ಚಿಡುತ್ತಾರೆ ಶೋಭರಾಜ್.

ADVERTISEMENT

ಬೇರೆ ಬೇರೆ ಉದ್ದೇಶಗಳಿಗಾಗಿ ನಗರದ ನಾಲ್ಕು ಮಂದಿ ವಿದೇಶಕ್ಕೆ ಹೋಗುತ್ತಾರೆ. ಮರಳಿ ಬರಲಾಗದೆ, ಅಲ್ಲಿಯೇ ಬದುಕು ಕಟ್ಟಿಕೊಳ್ಳಲು ಆರಂಭಿಸುವ ಕತೆಯನ್ನು ಚಿತ್ರ ಹೊಂದಿದೆ. ನವೀನ್‌ ಡಿ. ಪಡೀಲ್, ಭೋಜರಾಜ್‌ ವಾಮಂಜೂರು, ಅರವಿಂದ್ ಬೋಳಾರ್, ಜೆ.ಪಿ. ತೂಮಿನಾಡ್, ಸತೀಶ್ ಬಂದಲೆ ಚಿತ್ರದಲ್ಲಿದ್ದು, ನಿರ್ದೇಶಕ ಶೋಭರಾಜ್‌ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಗೆಳೆತನದ ಕುರಿತ ಸಂದೇಶವನ್ನು ಒಳಗೊಂಡಿರುವ ಚಿತ್ರದಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳಿಗೆ ನಾವೇ ಕಾರಣ ಆಗಿರುತ್ತೇವೆ ಎಂಬ ಸಂದೇಶ ಮುಖ್ಯವಾಗುತ್ತದೆ. ‘ಚಿತ್ರದ ಕುರಿತು ಇನ್ನೂ ಹಲವು ವಿಶೇಷತೆಗಳಿದ್ದು, ಚಿತ್ರ ಬಿಡುಗಡೆಯ ದಿನ ನಿಗದಿಯಾದ ಬಳಿಕವಷ್ಟೇ ಅವುಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಕುತೂಹಲ ಕಾಯ್ದಿಟ್ಟಿದ್ದಾರೆ ಶೋಭರಾಜ್.

ಮಂಗಳೂರಿನ ನಗರದಲ್ಲಿಯೇಸಂಪೂರ್ಣ ಚಿತ್ರೀಕರಣ ನಡೆದಿದ್ದು, ನಿರ್ದೇಶನದ ಜತೆಗೆ ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನೂ ಶೋಭರಾಜ್ ವಹಿಸಿದ್ದಾರೆ. ಗುರು ಬಾಯಾರ್ ಸಂಗೀತ ಚಿತ್ರಕ್ಕಿದ್ದು, ನಿಶಾನ್ ಹಾಗೂ ವರುಣ್ ಬಂಡವಾಳ ಹೂಡಿದ್ದಾರೆ.

‘ಚಿತ್ರದಲ್ಲಿ 4 ಹಾಡುಗಳಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಶಶಿರಾಜ್ ಕಾವೂರು, ಚೋಟು ಮಿಜಾರ್ ಸಾಹಿತ್ಯ ಚಿತ್ರಕ್ಕಿದೆ. ಸಂಪೂರ್ಣ ಮನರಂಜನೆಯ ಚಿತ್ರ ಇದಾಗಿದ್ದು, ಯಾವುದೇ ರೀತಿಯ ಫೈಟ್, ಹೀರೋಯಿಸಂನ ದೃಶ್ಯಗಳಿಲ್ಲ. ಇಲ್ಲಿ ನಾಲ್ಕು ಮಂದಿಯೂ ನಾಯಕರು. ಚೈತ್ರಾ ಶೆಟ್ಟಿ ಮತ್ತು ಮೈತ್ರಿ ಕಶ್ಯಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ.

ಒಟ್ಟಿನಲ್ಲಿ ‘ಪೆಪ್ಪೆರೆರೆ ಪೆರೆರೆರೆ’ ಎಂಬ ಕರಾವಳಿಗರ ಪಾಲಿನ ಚಿರಪರಿಚಿತ ಸದ್ದಿನ ಮೂಲಕ ಕತೆ ಹೇಳಲು ಹೊರಟಿರುವಶೋಭರಾಜ್ ಪಾವೂರು, ಕೋಸ್ಟಲ್‌ವುಡ್‌ ಅಭಿಮಾನಿಗಳ ನಿರೀಕ್ಷೆಯ ವಲಯದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.