ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಅದ್ದೂರಿ ಯಶಸ್ಸು ಕಂಡ ‘ಅಧ್ಯಕ್ಷ’ ಚಿತ್ರದಲ್ಲಿ ಉಪಾಧ್ಯಕ್ಷನ ಪಾತ್ರದಲ್ಲಿ ಗುರುತಿಸಿಕೊಂಡವರು ಚಿಕ್ಕಣ್ಣ. ಈಗ ಅವರು ಹೊಸ ಚಿತ್ರದಲ್ಲಿ ‘ಉಪಾಧ್ಯಕ್ಷ’ರೇ ಆಗುತ್ತಿದ್ದಾರೆ. ಇಲ್ಲಿ ಅವರೇ ನಾಯಕ.
ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅನಿಲ್ ಕುಮಾರ್ ಚಿತ್ರದ ನಿರ್ದೇಶಕರು.
ಚಿತ್ರದ ಮುಹೂರ್ತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.
‘ಈ ‘ಉಪಾಧ್ಯಕ್ಷ’, ‘ಅಧ್ಯಕ್ಷ’ ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಮೊದಲ ಸನ್ನಿವೇಶದಿಂದ ಕ್ಲೈಮ್ಯಾಕ್ಸ್ ತನಕ ಜನರನ್ನು ನಕ್ಕುನಲಿಸುವ ಸಿನಿಮಾ ಇದು. ಜೊತೆಗೆ ಭಾವನಾತ್ಮಕ ಸನ್ನಿವೇಶಗಳೂ ಇವೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ಚಿಕ್ಕಣ್ಣ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಮಲೈಕ ಈ ಚಿತ್ರದ ನಾಯಕಿ. ಮೈಸೂರಿನಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್‌ನಲ್ಲಿ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆನಂತರ ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಗಿಯಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ‘ಅಧ್ಯಕ್ಷ’ ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಸಾಧುಕೋಕಿಲ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು ನಿರ್ದೇಶಕ ಅನಿಲ್ ಕುಮಾರ್.
ನಾನು ‘ಹೆಬ್ಬುಲಿ’, ‘ರಾಬರ್ಟ್’ ಹಾಗೂ ‘ಮದಗಜ’ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಆದರೆ ನನ್ನ ಹೆಂಡತಿ ಹೆಸರಿನಲ್ಲಿ ‘ಒಂದಲ್ಲಾ ಎರಡಲ್ಲಾ’ ಚಿತ್ರ ನಿರ್ಮಾಣ ಮಾಡಿದೆ. ಆ ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂದವು. ‘ಉಪಾಧ್ಯಕ್ಷ’ ಚಿತ್ರಕ್ಕೂ ನನ್ನ ಹೆಂಡತಿ ಸ್ಮಿತಾ ಅವರೇ ನಿರ್ಮಾಪಕರು. ‘ಉಪಾಧ್ಯಕ್ಷ’ ಚಿತ್ರದ ಕಥೆ ಚೆನ್ನಾಗಿದೆ. ಗೆಲ್ಲುವ ವಿಶ್ವಾಸವಿದೆ ಎಂದರು ನಿರ್ಮಾಪಕ ಉಮಾಪತಿ ಶ್ರೀನಿವಾಸ್.
‘ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್‌ನಲ್ಲಿ ಮುಗಿಸುತ್ತಾರೆ. ಆದರೆ ನಮ್ಮ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರಿಗೆ ಧನ್ಯವಾದ. ಅನಿಲ್ ಕುಮಾರ್ ಬಹಳ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ಚಿಕ್ಕಣ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.