ಮುಂಬೈ: ಅನಿಮಲ್ ಚಿತ್ರದ ಸಕ್ಸಸ್ ಬಳಿಕ ನಟ ರಣಬೀರ್ ಕಪೂರ್ ವಿವಾದಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.
ಬಾಂಬೆ ಹೈಕೋರ್ಟ್ ವಕೀಲರಾದ ಪಂಕಜ್ ಮಿಶ್ರಾ ಹಾಗೂ ಆಶಿಷ್ ರಾಜ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರಣಬೀರ್ ಕಪೂರ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಘಾಟ್ಕೊಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಣಬೀರ್ ಕಪೂರ್ ಹಾಗೂ ಅವರ ಕುಟುಂಬಸ್ಥರು ಕ್ರಿಸ್‌ಮಸ್ ಸಂಭ್ರಮಾಚರಣೆಯ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ವ್ಯಕ್ತಿಯೊಬ್ಬರು ಕೇಕ್ ಮೇಲೆ ಮದ್ಯ ಸುರಿದಿದ್ದರು, ರಣಬೀರ್ ಅದಕ್ಕೆ ಬೆಂಕಿ ಹಚ್ಚಿದ ಬಳಿಕ ಜೈ ಮಾತಾ ದಿ ಎಂದು ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು ಟೀಕೆಗೆ ಗುರಿಯಾಗಿದೆ.
ಅಗ್ನಿಯು ಹಿಂದುತ್ವದ ಸಂಕೇತವಾಗಿದ್ದು, ರಣಬೀರ್ ಕಪೂರ್ ಅವರು ಸಂಭ್ರಮಾಚರಣೆ ಹೆಸರಿನಲ್ಲಿ ಹಿಂದುಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಒಂದು ಧರ್ಮದ ಆಚರಣೆ ವೇಳೆ ಇನ್ನೊಂದು ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕ್ರಿಸ್‌ಮಸ್ ಸಂಭ್ರಮಾಚರಣೆಯಲ್ಲಿ ಪತ್ನಿ ಆಲಿಯಾ ಭಟ್ ಸೇರಿ ಅವರ ಕುಟುಂಬಸ್ಥರು ಭಾಗಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಣಬೀರ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.