ಬೆಂಗಳೂರು: ಎರಡು ಹಾಡುಗಳ ಹಕ್ಕು ಉಲ್ಲಂಘನೆ ಕುರಿತಂತೆ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಮಾಡಿರುವ ಆರೋಪಗಳ ಬಗ್ಗೆ ಪರಂವಃ ಸ್ಟುಡಿಯೊಸ್ ಪ್ರತಿಕ್ರಿಯೆ ನೀಡಿದೆ.
‘ಬ್ಯಾಚುಲರ್ ಪಾರ್ಟಿ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ನಾವು ಎಂಆರ್‌ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಜೆಟ್ ಅನ್ನು ಮೀರಿತ್ತು. ಎಂಆರ್‌ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರುಮಾತುಕತೆಗೆ ತಯಾರಿರಲಿಲ್ಲ’ ಎಂದು ಹೇಳಿದೆ.
‘ಈಗ ನಮ್ಮ ಮೇಲೆ ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಬಂದಿದ್ದು, ಎಫ್‌ಐಆರ್ ದಾಖಲಾಗಿದೆ. ಇದು ನಿಜವಾಗಿಯೂ ಹಾಡಿನ ಹಕ್ಕು ಉಲ್ಲಂಘನೆಯೇ? ಹೌದಾಗಿದ್ದೇ ಆದಲ್ಲಿ ನಾವು ತೆರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂಆರ್‌ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ ಈತರಹದ ಆರೋಪವನ್ನು ಈಗಾಗಲೀ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು. ಇದೊಂದು ಯಕ್ಷ ಪ್ರಶ್ನೆ. ಇದಕ್ಕೆ ನಾವು ಉತ್ತರ ಹುಡುಕಬಯಸುತ್ತೇವೆ. ಹಾಗಾಗಿ ನ್ಯಾಯ ಮತ್ತು ಪ್ರಬುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ಇದರಿಂದ ಇನ್ನು ಮುಂಬರುವ ದಿನಗಳಲ್ಲಿ ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿನಿಮಾಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು ನಮ್ಮ ಈ ಪ್ರಾಮಾಣಿಕ ಪ್ರಯತ್ನ’ ಎಂದು ಪರಂವಃ ಸ್ಟುಡಿಯೊಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರಕಟಣೆಯ ಜೊತೆಗೆ ಹಾಡಗಳನ್ನು ಬಳಸಿಕೊಳ್ಳಲಾದ ಸಿನಿಮಾದ ದೃಶ್ಯಗಳ ತುಣುಕುಗಳನ್ನೂ ಪರಂವಃ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.