ಬೆಂಗಳೂರು: ಲಹರಿ ಸಂಸ್ಥೆ ಹಾಗೂ ನಟ ರಕ್ಷಿತ್ ಶೆಟ್ಟಿ ಅವರ ನಡುವಿನ ‘ಕಾಪಿರೈಟ್’ ವಿವಾದ ಮಾತುಕತೆ ಮೂಲಕವೇ ಬಗೆಹರಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ, ಲಹರಿ ವೇಲು ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗಿರುವ ಸೆಲ್ಫಿಯೊಂದನ್ನು ರಕ್ಷಿತ್ ಶೆಟ್ಟಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
‘ಒಂದು ಘಟನೆ..ಹಲವು ದೃಷ್ಟಿಕೋನ. ಈ ದೃಷ್ಟಿಕೋನಗಳನ್ನು ಪರಸ್ಪರ ಹಂಚಿಕೊಂಡಾಗ ಹಾಗೂ ಅರ್ಥೈಸಿಕೊಂಡಾಗ ಮನುಷ್ಯರಾಗಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲವೂ ಪರಸ್ಪರ ಗೌರವ ಮತ್ತು ಪ್ರೀತಿಯ ನಿರ್ದಿಷ್ಟ ಸಂಧಿಯಲ್ಲಿ ಕೂಡಬೇಕು. ಇದುವೇ ನಮ್ಮೊಳಗಿನ ಹಾಗೂ ಹೊರಗಿನ ಬೆಳವಣಿಗೆಯ ನೈಜ ಗುಣ. ನಾವು ಏನನ್ನೂ ನೀಡಿಲ್ಲ ಏನನ್ನೂ ಪಡೆದುಕೊಂಡಿಲ್ಲ. ನಮ್ಮ ನಮ್ಮ ಅಭಿಪ್ರಾಯಗಳನ್ನಷ್ಟೇ ಹಂಚಿಕೊಂಡಿದ್ದೇವೆ’ ಎಂದು ರಕ್ಷಿತ್ ಟ್ವೀಟ್ ಜೊತೆಗೆ ಉಲ್ಲೇಖಿಸಿದ್ದಾರೆ.
ಸ್ನೇಹಪೂರ್ವ ಷರತ್ತುಗಳೊಂದಿಗೆ ಎರಡನೇ ಪ್ರಕರಣವನ್ನು ಹಿಂಪಡೆಯಲು ಲಹರಿ ಸಂಸ್ಥೆಯ ಒಪ್ಪಿದೆ ಎಂದು ನಟ ರಕ್ಷಿತ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
2016ರ ಡಿಸೆಂಬರ್‌ನಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದ ಬಿಡುಗಡೆ ವೇಳೆ ಲಹರಿ ಸಂಸ್ಥೆಯು ಸಿನಿಮಾ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಸಂಸ್ಥೆಯು ಆರೋಪಿಸಿತ್ತು. ಲಹರಿ ಸಂಸ್ಥೆಯು ದಾಖಲಿಸಿದ್ದ ಎರಡನೇ ಪ್ರಕರಣದ ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ರಕ್ಷಿತ್ ಶೆಟ್ಟಿ ಹಾಗೂ ಅಜನೀಶ್ ಲೋಕನಾಥ್ ಅವರ ವಿರುದ್ಧ ಇತ್ತೀಚೆಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
‘ಮಕ್ಕಳಾಟ’ ಎಂದಿದ್ದ ರಕ್ಷಿತ್: ‘ಸಿನಿಮಾದ ಬಿಡುಗಡೆ ಮುನ್ನ ಕೇಸ್ ಹಾಕಿದ್ದ ಸಂದರ್ಭದಲ್ಲಿ ನಾವು ಚೆನ್ನೈಗೆ ಹೋಗಿ, ಹಾಡನ್ನು ತೆಗೆದು ಮೂರು ದಿನ ಹಾಡು ಹಾಕಿರಲಿಲ್ಲ. ನ್ಯಾಯಾಲಯದ ಆದೇಶ ಬಂದ ನಂತರವಷ್ಟೇ ಬಿಡುಗಡೆ ಮಾಡೋಣ ಎನ್ನುವ ಕಾರಣಕ್ಕೆ ನಾವು ಹಾಡು ನಿಲ್ಲಿಸಿದ್ದೆವು. ನ್ಯಾಯಾಲಯದಿಂದ ಆದೇಶ ಬಂದ ನಂತರ ಸಿನಿಮಾದಲ್ಲಿ ಹಾಡು ಸೇರಿಸಿದೆವು. ಆ ಕೇಸ್ ನಾವು ಗೆದ್ದಿದ್ದೆವು. ಸಿನಿಮಾ ಬಿಡುಗಡೆಯಾಗಿ ಮೂರು ವರ್ಷದ ಬಳಿಕ ಎಂದರೆ 2019ರಲ್ಲಿ ಇನ್ನೊಂದು ಕೇಸ್ ಹಾಕಿದ್ದರು. ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ವಾರೆಂಟ್ ನೀಡಿದ್ದರು. ನಾವು ಈ ಕೇಸ್ ಅನ್ನು ಎದುರಿಸುತ್ತೇವೆ. ಏಕೆಂದರೆ ಆ ಹಾಡಿನ ಯಾವುದೇ ‘ನೋಟ್ಸ್’ ನಾವು ನಕಲು ಮಾಡಿರಲಿಲ್ಲ. ಹಂಸಲೇಖ ಅವರು 80ರ ದಶಕದಲ್ಲಿ ಬಳಸಿದ್ದ ರಿದಮ್ ಬಳಸಿದ್ದೆವು. ಮೆಲೊಡಿ, ಸಾಹಿತ್ಯವನ್ನು ನಕಲು ಮಾಡಿದರಷ್ಟೇ ಪ್ರಕರಣ ದಾಖಲಿಸುವ ಹಕ್ಕು ಇರುತ್ತದೆ. ಈ ರೀತಿ ಕೇಸ್ ಹಾಕುವುದು ಮಕ್ಕಳಾಟ’ ಎಂದು ಕಳೆದ ಏಪ್ರಿಲ್‌ನಲ್ಲಿ 9ನೇ ಎಸಿಎಂಎಂ ನ್ಯಾಯಾಲಯ ಎದುರು ಹಾಜರಾದ ಬಳಿಕ ರಕ್ಷಿತ್ ಶೆಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.