ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನರ ಸೇವೆ ಮಾಡುತ್ತಿಲ್ಲ. ಅವರ ಮಗನ ಸೇವೆ ಮಾಡುತ್ತಿದ್ದಾರೆ. 29 ಸಾವಿರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಯಡಿಯೂರಪ್ಪ ಅವರೇ ನಿಮಗೆ ತಪ್ಪಿತಸ್ಥ ಭಾವನೆ ಕಾಡುತ್ತಿಲ್ಲವೇ....?
ಇದು ನಿರ್ದೇಶಕ ಗುರುಪ್ರಸಾದ್ ಅವರು ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಹೊರ ಹಾಕಿದ ಆಕ್ರೋಶ.
ಮುಖ್ಯಮಂತ್ರಿಯವರನ್ನು ಏಕವಚನದಲ್ಲಿ ಸಂಬೋಧಿಸಿರುವ ಅವರು, ‘ಮತ ಹಾಕಿದ ನಮಗೆ ಬೆಲೆ ಇಲ್ವಾ? ನಾವು ಮೋದಿ ಮುಖ ನೋಡಿಕೊಂಡು ವೋಟ್ ಹಾಕಿದ್ವಿ. ನಿಮ್ಮ ಸ್ವಂತ ಆಸ್ತಿಗಳನ್ನು ಘೋಷಣೆ ಮಾಡಿ. 29 ಸಾವಿರ ಕನ್ನಡಿಗರು ಸತ್ತಿದ್ದಾರೆ. ಅವರೆಲ್ಲರಿಗೂ ಒಂದೊಂದು ಕೋಟಿ ರೂಪಾಯಿ ಕೊಡಿ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲವೇ, ನಿಮಗೆ ಪ್ರಾಯಶ್ಚಿತ್ತ ಇಲ್ಲವೇ? ನೀವು ಹೇಗೆ ಊಟ ಮಾಡುತ್ತೀರಿ? ನೀವೆಲ್ಲ ಭ್ರಷ್ಟಾಚಾರಿಗಳು. ಅದನ್ನು ನಾನು ನ್ಯಾಯಾಲಯದಲ್ಲಿ ಸಾಬೀತು ಮಾಡುತ್ತೇನೆ. ನನಗೆ ಅಷ್ಟು ತಲೆ ಇದೆ’ ಎಂದಿದ್ದಾರೆ.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಮಾಡಲು ಅವಕಾಶ ಕೊಡುವುದಿಲ್ಲ. ಆದರೆ, ಬಿಜೆಪಿ ಇವರಿಗೆ (ಯಡಿಯೂರಪ್ಪ) ಹೇಗೆ ರಾಜಿ ಮಾಡಿಕೊಂಡು ಅವಕಾಶ ಕೊಟ್ಟಿದೆ? ಯಾರಾದರೂ ಅಧಿಕಾರ ಮಾಡುತ್ತಿದ್ದರಲ್ಲವೇ?
ನನಗೆ ರಾಜಕೀಯದ ಒಬ್ಬರೂ ಇಷ್ಟವಿಲ್ಲ. ಯಡಿಯೂರಪ್ಪ ಅವರು ಹೈಕಮಾಂಡ್ ಅನ್ನುತ್ತಿದ್ದಾರೆ. ನಿಮಗೆ ಕನ್ನಡಿಗರೇ ಹೈಕಮಾಂಡ್. ಆದ್ದರಿಂದ ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ದುಡ್ಡು ಮಾಡಿದ್ದೀರಲ್ಲಾ. ಕೂತ್ಕೊಂಡು ನೆಕ್ಕಬೇಕು. ವಿಜಯೇಂದ್ರ... ಅಪ್ಪನನ್ನು ಚೆನ್ನಾಗಿ ನೋಡ್ಕೊಳಪ್ಪ. ನೂರು ವರ್ಷ ಬದುಕಿ ಬಾಳಲಿ ಎಂದು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.
ಎಲ್ಲ ಕೆಲಸಗಾರರನ್ನು ಒಂದು ಕಡೆ ಕೂಡಿ ಹಾಕಿಬಿಟ್ಟಿದ್ದೀರಿ. ಮುನ್ನೆಚ್ಚರಿಕೆ ವಹಿಸಬೇಕಾದ ರಾಜನೇ ಈ ರೀತಿ ಜನರನ್ನು ಕೂಡಿ ಹಾಕಿದ್ದೀರಲ್ಲಾ?
ಮೋದಿಯವರೇ ನೀವು ಪ್ರಾಮಾಣಿಕರು ನಿಜ. ಆದರೆ, ಸದ್ಯ ನಮ್ಮ ಜನರಿಗೆ ಬೇಕಾಗಿರುವುದು ಊಟ, ಬಟ್ಟೆ ಮತ್ತು ಆರೋಗ್ಯ. ಅದೆಲ್ಲಾ ಬಿಟ್ಟು ಚಂದ್ರನಿಂದ ಥೋರಿಯಂ ತರಿಸುತ್ತೇನೆ ಎಂದು ಹೇಳಿ, ಸಾವಿರಾರು ಕೋಟಿಯನ್ನು ಮಣ್ಣಿಗೆ ಹಾಕಿಬಿಟ್ಟಿರಲ್ಲಾ. ಇಸ್ರೋದವರಿಗೆಲ್ಲಾ ಸಂಬಳ ಕೊಟ್ಟಿದ್ದೀರಲ್ಲಾ ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯ ಪ್ರಜ್ಞೆ ಬೇಕಿತ್ತು. ಸದ್ಯದ ಆದ್ಯತೆ ಏನು ಎಂಬುದನ್ನು ನೋಡಬೇಕಿತ್ತು. ಒಂದೂವರೆ ವರ್ಷದಿಂದ ನಾವೆಲ್ಲಾ ಸುಮ್ಮನಿದ್ದೇವೆ. ದುಡಿಯೋಕೆ ಆಗ್ತಾ ಇಲ್ಲ. ಸಾಲ ತೆಗೆದುಕೊಂಡು ಬದುಕುತ್ತಿದ್ದೇವೆ. ಇವರೂ ಸರಿ ಇಲ್ಲ. ವಿರೋಧ ಪಕ್ಷದವರೂ ಸರಿ ಇಲ್ಲ ಎಂದು ಹೇಳಿದ್ದಾರೆ.
ಆರ್. ಅಶೋಕ್, ಸಿ.ಟಿ.ರವಿ ನೀವೆಲ್ಲಾ ಏನು ಮಾಡಿದ್ದೀರಿ. 29 ಸಾವಿರ ಕನ್ನಡಿಗರು ಸತ್ತಿದ್ದಾರಲ್ಲಾ ಅವರಿಗೆ ನಿಮ್ಮೆಲ್ಲಾ ಆಸ್ತಿ ಬರೆದುಕೊಡಿ. ನಿಮ್ಮಂಥ ಸಂಸ್ಕಾರಹೀನ ರಾಜಕಾರಣಿಗಳ ಯುಗ ಮುಗಿಯುತ್ತಿದೆ. ಅದಕ್ಕೆ ಇಂದು ಬೀಜ ಹಾಕುತ್ತಿದ್ದೇನೆ. ಅದು ಸರಿಯಾಗಲು ಇನ್ನು ನೂರು ವರ್ಷ ಬೇಕು ಎಂದಿದ್ದಾರೆ. ಇನ್ನು ರಾಜಕಾರಣಿಗಳು ಬಂದರೆ ಚಪ್ಪಲಿಯಲ್ಲಿ ಹೊಡೀರಿ. ನೀವು(ಶ್ರೀ ಸಾಮಾನ್ಯರು) ಸ್ಪರ್ಧಿಸಿ ಎಂದು ಕರೆ ನೀಡಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಗುರುಪ್ರಸಾದ್ ಅವರು ಇದೇ ರೀತಿ ವಿಡಿಯೋ ಮಾಡಿ, ‘ತಮಗೆ ಕೊವಿಡ್ ಬಂದಿದೆ. ಒಂದು ವೇಳೆ ಸತ್ತರೆ ಅದಕ್ಕೆ ರಾಜಕಾರಣಿಗಳು ಕಾರಣ’ ಎಂದು ಹೇಳಿದ್ದರು.
ವಿಡಿಯೋ ಲಿಂಕ್:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.