ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್’ ಚಿತ್ರ ಮೇ 24ಕ್ಕೆ ತೆರೆಗೆ ಬರುತ್ತಿದೆ. ಜಿ9 ಕಮ್ಯೂನಿಕೇಷನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಗುರುರಾಜ ಕುಲಕರ್ಣಿ ಈ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳಿದ್ದಾರೆ.
‘ನ್ಯಾಯವಾದಿಯೊಬ್ಬ ನ್ಯಾಯಕ್ಕೋಸ್ಕರ, ನ್ಯಾಯಾಲಯದ ಪರಿಧಿಯಲ್ಲೇ ಹೋರಾಡುತ್ತಾನೆ. ಇರುವ ವ್ಯವಸ್ಥೆಯನ್ನು ದೂರದೇ, ಇದ್ದ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಕಥೆ. ರವಿಚಂದ್ರನ್ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ಕುಲಕರ್ಣಿ.
‘ಆಕ್ಸಿಡೆಂಟ್’, ‘ಲಾಸ್ಟ್ ಬಸ್’ ಚಿತ್ರಗಳಿಗೆ ನಿರ್ಮಾಪರಾಗಿದ್ದ ಗುರುರಾಜ ಕುಲಕರ್ಣಿ ‘ಅಮೃತ ಅಪಾರ್ಟ್‌ಮೆಂಟ್ಸ್’ ಚಿತ್ರದ ಮೂಲಕ ನಿರ್ಮಾಣದ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದರು. ‘ನಾನು ಎರಡು ದಶಕಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಸಾಮಾನ್ಯವಾಗಿ ಯೌವ್ವನದಲ್ಲಿಯೇ ದೊಡ್ಡ ಕನಸಿನೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ನಾನು ನಿವೃತ್ತಿಯ ದಿನಗಳಲ್ಲಿ ಸಿನಿಮಾ ರಂಗಕ್ಕೆ ಬಂದೆ. ಬೇರೆ ಬೇರೆ ದೇಶಗಳಿಗೆ ಹೋಗಿ ಕ್ಯಾಮೆರಾ, ತಂತ್ರಜ್ಞಾನ ಕಲಿಯುತ್ತ ಬಂದೆ. ಇದು ನನ್ನ ನಾಲ್ಕನೆ ಸಿನಿಮಾ’ ಎನ್ನುತ್ತಾರೆ ನಿರ್ದೇಶಕ ಗುರುರಾಜ ಕುಲಕರ್ಣಿ.
ನಟಿ ಮೇಘನಾ ಗಾಂವ್ಕರ್, ರವಿಚಂದ್ರನ್‌ಗೆ ಜೋಡಿಯಾಗಿದ್ದಾರೆ. ದಿಗಂತ್ , ಧನ್ಯಾ ರಾಮ್‌ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಚಿತ್ರಗ್ರಹಣ, ಕೆಂಪರಾಜ್ ಸಂಕಲನ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.