ADVERTISEMENT

ತಮಿಳು ಸಿನಿಮಾ ನಿರ್ಮಿಸಲಿರುವ ಕ್ರಿಕೆಟಿಗ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2022, 10:13 IST
Last Updated 25 ಅಕ್ಟೋಬರ್ 2022, 10:13 IST
   

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ತಮ್ಮ ನಿರ್ಮಾಣ ಸಂಸ್ಥೆಯಿಂದ ಮೊದಲು ತಮಿಳಿನಲ್ಲಿ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದ ಧೋನಿಗೆ ತಮಿಳುನಾಡಿನೊಂದಿಗಿರುವ ವಿಶೇಷ ಒಡನಾಟವೇ ಈ ಹೆಜ್ಜೆಗೆ ಕಾರಣ.

ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್‌ ಒಟ್ಟಾಗಿ 2019ರಲ್ಲಿ ಧೋನಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಗೆ ಚಾಲನೆ ನೀಡಿದ್ದರು. ಮುಖ್ಯವಾಹಿನಿಯ ಭಾಷೆಗಳಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದ್ದು, ನಿರ್ಮಾಣ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಚೆನ್ನೈ ಸೂಪರ್‌ಕಿಂಗ್ಸ್‌ನ ಮಾಜಿ ನಾಯಕ ಧೋನಿಗೆ ತಮಿಳುನಾಡಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ‘ಕೊರೊನಾ ನಂತರ ಭಾರತದಲ್ಲಿ ಸಿನಿಮಾ ಉದ್ಯಮ ಏಕೀಕರಣಗೊಂಡಿದೆ. ಹಿಂದಿ ಸಿನಿಮಾ, ಇತರ ಭಾಷೆ ಸಿನಿಮಾ ಎಂಬ ಪ್ರತ್ಯೇಕತೆ ಇಲ್ಲ. ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡ ಸಿನಿಮಾಗಳನ್ನು ದೇಶದಾದ್ಯಂತ ಸಂಭ್ರಮಿಸಲಾಗುತ್ತಿದೆ. ಹೀಗಾಗಿ ಧೋನಿ ಎಂಟರ್‌ಟೈನ್‌ಮೆಂಟ್‌ ಬಹುಭಾಷೆಯ ಯೋಜನೆಗಳನ್ನು ಹುಡುಕುತ್ತಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ವಿಕಾಸ್‌ ಹಸಿಜ ಹೇಳಿದ್ದಾರೆ.

ಸಿನಿಮಾ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಧೋನಿಯನ್ನು ಸೂಪರ್‌ ಹೀರೋ ಆಗಿ ಹೊಂದಿರುವ ‘ಅಥರ್ವ–ದಿ ಒರಿಜಿನ್‌’ ಗ್ರಾಫಿಕ್‌ ಕಾದಂಬರಿಯ ಲೇಖಕ ರಮೇಶ್‌ ತಮಿಳ್‌ಮಣಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ತಮಿಳು ಹೊರತಾಗಿ ಇತರ ಸ್ಥಳೀಯ ಭಾಷೆಗಳ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.