ಜರ್ಮನಿಯಿಂದ ಕರ್ನಾಟಕಕ್ಕೆಬಂದು ಕನ್ನಡ ಕಲಿತು, ಕನ್ನಡದ ವ್ಯಾಕರಣ ನಿಘಂಟು ಬರೆದ ಯಶೋಗಾಥೆಪಾದ್ರಿ ಫರ್ಡಿನೆಂಡ್‌ಕಿಟೆಲ್ ಅವರದು. ಇವತ್ತಿಗೂ ಕನ್ನಡ ಪದಗಳ ಶಬ್ದಾರ್ಥ ಹುಡುಕುವುದು ಕಿಟೆಲ್ ಡಿಕ್ಷನರಿ ಮೂಲಕವೇ ಹೆಚ್ಚು. ಇಂತಹ ಮಹಾನ್ ಸಾಧಕನಕೊಡುಗೆ ಪರಿಚಯಿಸುವ ಉದ್ದೇಶದಿಂದ ಕನ್ನಡದ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಕಿಟೆಲ್ ಬಯೋಪಿಕ್ ಮಾಡುವ ಯೋಜನೆಗೆ ಪಿ.ಶೇಷಾದ್ರಿ ಕೈಹಾಕಿರುವುದು ಹಳೇ ಸುದ್ದಿ. ಹೊಸ ಸುದ್ದಿ ಏನಪ್ಪಾ ಅಂದರೆ, ಈ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸುವಂತಹ ಸಮಾನ ಆಸಕ್ತರಿಗೆ ಅವರು ಮುಕ್ತ ಅವಕಾಶ ತೆರೆದಿಟ್ಟಿದ್ದಾರೆ.
‘ಕಿಟೆಲ್ ಬಯೋಪಿಕ್ ಕಥೆ– ಚಿತ್ರಕಥೆಯ ತಯಾರಿಯ ಹಂತದಲ್ಲಿದೆ. ಇದು ಸಣ್ಣ ಬಜೆಟ್‌ನಲ್ಲಿ ಮಾಡುವ ಚಿತ್ರವಲ್ಲ. ದೊಡ್ಡಮಟ್ಟದ ಬಜೆಟ್ ಬಯಸುವ ಚಿತ್ರ. ಇದು ಒಬ್ಬರಿಂದ ಮಾಡಬಹುದಾದ ಕೆಲಸವಲ್ಲ.ಸಮಾನ ಆಸಕ್ತರು ಕ್ರೌಡ್ ಫಂಡಿಂಗ್ ಮೂಲಕ ಚಿತ್ರ ನಿರ್ಮಾಣ ಯೋಜನೆಗೆ ಕೈಜೋಡಿಸಬಹುದು’ ಎನ್ನುತ್ತಾರೆ ಶೇಷಾದ್ರಿ ಅವರು.
‘ಕನ್ನಡಿಗರು ಕನ್ನಡಾಂಬೆಯ ತೇರು ಎಳೆಯುವುದು ವಿಶೇಷವಲ್ಲ. ಹೊರಗಿನಿಂದ ಬಂದು ಕನ್ನಡ ಕಲಿತು ಕನ್ನಡಾಂಬೆಯ ನುಡಿ ಸೇವೆ ಮಾಡುವುದು ನಿಜವಾದ ಕನ್ನಡದ ಸೇವೆ. ಅಂತಹ ಮಹನೀಯ ಸಾಧಕರ ಬದುಕು–ಸಾಧನೆಯನ್ನು ನಾವು ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಸಂದರ್ಶನ, ಸಂವಾದಗಳಲ್ಲಿ ಕಿಟೆಲ್ ಸಿನಿಮಾ ಬಗ್ಗೆ ಪ್ರಸ್ತಾಪವಾದಾಗಹಲವು ಮಂದಿ ಕ್ರೌಡ್ ಫಂಡಿಂಗ್ ಮೂಲಕವಾದರೂ ಸಿನಿಮಾ ಮಾಡಿ ಎನ್ನುವ ಸಲಹೆ ಕೊಟ್ಟಿದ್ದರು. ಪ್ರತಿ ಕನ್ನಡಿಗರು ಒಂದೊಂದು ರೂಪಾಯಿ ದೇಣಿಗೆ ನೀಡಿದರೂ ಸಾಕು ಕಿಟೆಲ್ ಸಿನಿಮಾ ಮಾಡಬಹುದು ಎಂದಿದ್ದರು. ಸಮಾನ ಆಸಕ್ತರು ಕ್ರೌಡ್ ಫಂಡ್ ಒದಗಿಸಲು ಮುಂದೆ ಬಂದರೂ ನಾನುಸಿನಿಮಾ ಮಾಡಲು ರೆಡಿ’ ಎನ್ನುತ್ತಾರೆ ಅವರು.
‘ಕಿಟೆಲ್ ಮಾತ್ರ ನನ್ನನ್ನು ಕನಸಿನಲ್ಲೂ ಕಾಡುತ್ತಾರೆ. ನಾನು ಈ ಸಿನಿಮಾವನ್ನು ನನ್ನ ಜೀವಿತ ಕಾಲದೊಳಗೆ ಮಾಡಲೇಬೇಕೆಂದು ಸಂಕಲ್ಪ ತೊಟ್ಟಿರುವೆ.ಈ ಯೋಜನೆ ಯಾವಾಗ ಕೈಗೂಡಲಿದೆಯೋ ಗೊತ್ತಿಲ್ಲ’ ಎನ್ನಲು ಅವರು ಮರೆಯಲಿಲ್ಲ.
ಕಿಟೆಲ್ ಪಾತ್ರಕ್ಕೆ ರವಿಚಂದ್ರನ್ ಆಗದು
‘ಫೇಸ್‌ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಕೆಲವು ವೀಕ್ಷಕರು, ಕಿಟೆಲ್ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಲಿದ್ದು, ಕಿಟೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಹೌದಾ ಎಂದು ನನ್ನನ್ನುಕೇಳಿದ್ದರು. ‘ಅದು ಶುದ್ಧ ಸುಳ್ಳು’ ಎಂದಿದ್ದೇನೆ. ಏಕೆಂದರೆ ರವಿಚಂದ್ರನ್ ಅವರು ಕಿಟೆಲ್ ಪಾತ್ರಕ್ಕೆ ಹೋಲಿಕೆಯಾಗುವುದೇ ಇಲ್ಲ. ನಾನು ಸಿನಿಮಾ ಮಾಡುವುದೇ ಆದರೆ, ಜರ್ಮನ್ ಪ್ರಜೆಯಾದ ಕಿಟೆಲ್ ಹೋಲುವಂತಹವರನ್ನೇ ಹುಡುಕುತ್ತೇನೆ. ಜರ್ಮನಿಯಿಂದಲೇ ಕಲಾವಿದನನ್ನು ಆಯ್ಕೆ ಮಾಡಿಕೊಳ್ಳವೆ ಅಥವಾ ಕರ್ನಾಟಕದಲ್ಲಿ ನೆಲೆನಿಂತಿರುವ ಜರ್ಮನ್ ಪ್ರಜೆಯನ್ನಾದರೂ ಆರಿಸಿಕೊಳ್ಳುವೆ’ ಎಂದಿದ್ದಾರೆ ಶೇಷಾದ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.