ದಾದಾಪೀರ್ ಜೈಮನ್
ಕಲಾ ಮಾಧ್ಯಮ ಅದರಲ್ಲೂ ಸಿನಿಮಾ ಕ್ವಿಯರ್ ಸಮುದಾಯವ ಒಳಗೊಳ್ಳುವ ವಸ್ತುವನ್ನು ಇತ್ತೀಚೆಗೆ ವ್ಯಾಪಕವಾಗಿ ಕೈಗೆತ್ತಿಕೊಳ್ಳುತ್ತಿವೆ. ನಿಜಕ್ಕೂ ಅಲ್ಲಿ ತೋರಲಾಗುತ್ತಿರುವ ಸಂಗತಿಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ ಎನ್ನುವ ಜಿಜ್ಞಾಸೆಗೆ ಉತ್ತರವಾಗುವ ಬರಹವಿದು.
ಅದೊಂದು ಕಾಲವಿತ್ತು. ‘ಲಿಂಗತ್ವ ಮತ್ತು ಲೈಂಗಿಕತೆ’, ‘ಕ್ವಿಯರ್ ಸಮುದಾಯದ ಅಸ್ಮಿತೆ’ ಮುಂತಾದ ವಿಷಯಗಳನ್ನು ಜನ ಮಾತನಾಡುತ್ತಿರಲಿಲ್ಲ. ಹಾಗೆಂದು ಅವ್ಯಾವುವೂ ಅಸ್ತಿತ್ವದಲ್ಲಿಯೆ ಇರಲಿಲ್ಲವೆಂದಲ್ಲ. ಅದಕ್ಕೆ ತಕ್ಕ ಭಾಷೆ ಅಭಿವ್ಯಕ್ತಿ ಸಾಧ್ಯವಾಗಿರಲಿಲ್ಲ. ಕ್ವಿಯರ್ ವಿಷಯಕ್ಕೆ ಒಂದು ಕಳಂಕ ಅಥವಾ ‘ಸ್ಟಿಗ್ಮಾ’ ಅಂಟಿಕೊಂಡಿತ್ತು. ಈ ಕಳಂಕದ ಮೂಲಧಾತು ಭಯ. ನಮ್ಮೊಳಗಿನ ಭಯಗಳೆ ಒಂದು ಸಮುದಾಯವನ್ನು ಅಂಚಿಗೆ ತಳ್ಳಿಬಿಡುತ್ತವೆ. ಸಾಹಿತ್ಯದ ವಿಷಯಕ್ಕೆ ಬಂದರೆ, ಮೊದಮೊದಲಿಗೆ ಶಿವರಾಮ ಕಾರಂತ, ಭೈರಪ್ಪರಂತಹ ಹಿರಿಯ ಕಾದಂಬರಿಕಾರರೆ ಈ ವಿಷಯಗಳ ಬಗೆಗೆ ಫೋಬಿಕ್ ಆಗಿದ್ದರೆನ್ನುವುದು ಅವರ ಕೆಲವು ಕೃತಿಗಳಲ್ಲಿಯೇ ಕಾಣಿಸಿಕೊಂಡಿದೆ. ಅಬ್ದುಲ್ ರಶೀದರ ಕತೆಗಳಲ್ಲಿ ಕ್ವಿಯರ್ ವಿಷಯದ ಮಿಂಚೊಂದು ಕಾಣಿಸಿಕೊಂಡರೂ ಅವು ಅಲ್ಲಲ್ಲಿಗೆ ನಿಂತುಬಿಡುತ್ತವೆ. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಕಾದಂಬರಿಯಲ್ಲಿ ಕಾಣುವ ಕ್ವಿಯರ್ ವಿಷಯ ‘ಅಡಲ್ಟ್ ಸೆಕ್ಷುಯಲ್ ಎಕ್ಸ್‌ಪ್ಲೋರೇಷನ್’ಗೆ ಸೀಮಿತವಾಗುತ್ತದೆ. ಇವೆಲ್ಲವನ್ನೂ ಕಾಲನ ಮಹಿಮೆ ಎಂದುಕೊಳ್ಳಬಹುದಾದರೂ ಕನ್ನಡದ ಮಟ್ಟಿಗೆ ವಸುಧೇಂದ್ರರ ‘ಮೋಹನಸ್ವಾಮಿ’ ಕೃತಿ ಈ ವಿಷಯಗಳ ಬಗೆಗೆ ಮೈ ಚಳಿ ಬಿಟ್ಟು ಮಾತನಾಡಿದ ಮೊದಲ ಕೃತಿ. ಸಾಮಾಜಿಕವಾಗಿ, ಆರ್ಥಿಕವಾಗಿ ಉನ್ನತ ಸ್ತರದಲ್ಲಿದ್ದ ವಸುಧೇಂದ್ರರ ಕೃತಿಯನ್ನೆ ಕನ್ನಡಲೋಕ ಅಷ್ಟು ತೆರೆದ ಹೃದಯದಿಂದ ಸ್ವೀಕರಿಸಿರಲಿಲ್ಲ ಎಂದು ಅವರೆ ತಮ್ಮ ಒಂದು ಲೇಖನದಲ್ಲಿ ಹೇಳಿಕೊಂಡಿದ್ದಾರೆ. ನಂತರದಲ್ಲಿ ಹಲವು ಕತೆಗಾರರು, ಕವಿಗಳು ತಮ್ಮ ಬರಹಗಳಲ್ಲಿ ಕ್ವಿಯರ್ ವಿಷಯಗಳನ್ನು ಒಳಗೊಳ್ಳುವುದರ ಮೂಲಕ ಭಾಷೆಯನ್ನು ರೂಪಿಸುತ್ತಾ ಬಂದರು. ‘ನೀಲಕುರಿಂಜಿ’, ‘ಹರಾಂನ ಕಥೆಗಳು’, ‘ದೀಪವಿರದ ದಾರಿಯಲ್ಲಿ’ ಮುಂತಾದ ಕೃತಿಗಳು ಅದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ಸಮುದಾಯದವರಲ್ಲದ ಆದರೆ ಕ್ವಿಯರ್ ವಿಚಾರದ ಪರವಾಗಿ ನಿಲ್ಲುವ ಬರಹಗಾರರೂ ಕೃತಿಗಳನ್ನು ಬರೆಯುತ್ತಿದ್ದಾರೆ. ಕಾವ್ಯ ಕಡಮೆ ಅವರ ಕಾದಂಬರಿ ‘ಪುನರಪಿ’, ‘ಶರಣಬಸವ ಗುಡದಿನ್ನಿ’, ಮಿತ್ರಾ ವೆಂಕಟರಾಜ ಅವರ ಕೆಲವು ಕತೆಗಳು ಈ ಸಾಲಿಗೆ ಸೇರಿಸುವಂತಹವು.
ಅತಿ ಹೆಚ್ಚು ಮುಕ್ತವಾಗಿರುವ ಕಲಾಮಾಧ್ಯಮವೆಂದರೆ ರಂಗಭೂಮಿ. ಅಲ್ಲಿ ‘ಕ್ವೀನ್ ಸೈಝ್’, ‘ಅಮ್ಮ ಮತ್ತು ಸುಹೇಲ್’, ‘ಅಕ್ಷಯಾಂಬರ’, ‘ಫ್ರೀಡಂ ಬೇಗಂ’, ‘ಶಹರ್ ಇನ್ ದ ಖಾಕಿ ರೂಮ್’, ‘ಶಿವ’ ಮುಂತಾದ ನಾಟಕಗಳು ಪ್ರಯೋಗದ ದೃಷ್ಟಿಯಿಂದ ಮತ್ತು ರಂಗಭೂಮಿಯ ಚಲನಶೀಲತೆಯ ದೃ಼ಷ್ಟಿಯಿಂದ ಮಹತ್ವ ಪಡೆಯುತ್ತವೆ. ಉಳಿದಂತೆ ಶಿಲ್ಪಕಲೆ ಮತ್ತು ಚಿತ್ರಕಲೆ ಮುಂತಾದ ಪ್ರಕಾರಗಳೂ ಕ್ವಿಯರ್ ವಿಷಯಗಳ ಮುಕ್ತ ಅಭಿವ್ಯಕ್ತಿಗೆ ಹೆಚ್ಚು ಸ್ವಾತಂತ್ರ್ಯ ನೀಡಿವೆ. ಬೆಂಗಳೂರಿನ ವನ್ ಶಾಂತಿ ರೋಡ್ ಆರ್ಟ್ ಗ್ಯಾಲರಿ, ಸುಮುಖ ಆರ್ಟ್ ಗ್ಯಾಲರಿ ಕಲಾವಿದರಿಗೆ ರೆಸಿಡೆನ್ಸಿಯನ್ನು ಒದಗಿಸುವುದರ ಮೂಲಕ ಅವರ ಕಲೆಗೆ ಪ್ರೋತ್ಸಾಹ ನೀಡುತ್ತಿವೆ. ‘ಜೆಂಡರ್ ಬೆಂಡರ್’, ಮುಂಬೈ ಮೂಲದ ‘ರಿಫ್ರೇಮ್’ ಗ್ರಾಂಟ್‌ಗಳೂ ಕ್ವಿಯರ್ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡುತ್ತಿವೆ.
ಹೀಗಿದ್ದೂ ಜನರನ್ನು ಹೆಚ್ಚು ಸೆಳೆಯುವುದು ಸಿನಿಮಾ ಮಾಧ್ಯಮ. ಅದರಲ್ಲೂ ಮುಖ್ಯಧಾರೆಯ ಸಿನಿಮಾಗಳು. ಅದರಲ್ಲಿ ಕ್ವಿಯರ್ ಸಂವೇದನೆ ಬೆಳೆದುಬಂದ ದಾರಿಯನ್ನು ಮುಖ್ಯವಾಗಿ ಗಮನಿಸಬೇಕು.
ನಾನು ಚಿಕ್ಕವನಿರುವಾಗ ಹೆಚ್ಚಾಗಿ ಕನ್ನಡ ಸಿನಿಮಾಗಳನ್ನೆ ನೋಡುತ್ತಿದ್ದೆ. ನನಗೆ ಬೇರೆ ಭಾಷೆಯ ಸಿನಿಮಾಗಳು ಇರುತ್ತವೆ ಎನ್ನುವ ಕಲ್ಪನೆಯೂ ಇರಲಿಲ್ಲ. ನನಗೆ ನೆನಪಿರುವ ಹಾಗೆ ಬಹುತಾರಾಗಣವಿದ್ದ ಕನ್ನಡದ ‘ಹಬ್ಬ’ ಸಿನಿಮಾದಲ್ಲಿ ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ಶಶಿಕುಮಾರ್ ಎಲ್ಲರೂ ಖಳನಾಯಕರಿಗೆ ಬುದ್ಧಿ ಕಲಿಸುವ ಸಲುವಾಗಿ ‘ಮಾಮ ಮಾಮ ಮಸ್ತಿ, ಮಾಡು ಜಂಗಿ ಕುಸ್ತಿ’ ಎನ್ನುವ ಹಾಡಿಗೆ ಸೀರೆ ಉಟ್ಟುಕೊಂಡು ಕುಣಿಯುತ್ತಾರೆ. ಹಾಡು ತಮಾಷೆಯಾಗಿದ್ದರೂ ಆ ಹಾಡಿನಲ್ಲಿ ಕನ್ನಡದ ಆ ಕಾಲದ ಮುಖ್ಯನಟರೆಲ್ಲರೂ ಸೀರೆ ಉಟ್ಟು ಕುಣಿಯುವ ದೃಶ್ಯ ಕಚಗುಳಿ ಇಡುತ್ತಿತ್ತು. ಸಿನಿಮಾದವರೂ ಇದರ ಆಚೆಗೆ ಯೋಚನೆಯನ್ನು ಕೂಡ ಮಾಡಿರುವುದಿಲ್ಲ. ಆದರೆ ಹೀಗೆ ಚಿಕ್ಕಪುಟ್ಟ ದೃಶ್ಯಗಳು ಆ ಕಾಲದಲ್ಲಿ ಹೆಣ್ಣುಭಾವನೆಯಿದ್ದು, ‘ಜೆಂಡರ್ ಡಿಸ್ಫೊರಿಯ’ ಇರುವ ಗಂಡುಮಕ್ಕಳಲ್ಲಿ ವಿಶ್ವಾಸ ಹಾಗೂ ಖುಷಿಯನ್ನು ಉಂಟುಮಾಡಿರಬಲ್ಲದು ಎನಿಸುತ್ತಿತ್ತು. ಆದರೂ ಇದೆಲ್ಲ ನನ್ನ ಅತಿ ಯೋಚನೆ ಎಂದು ತಳ್ಳಿ ಹಾಕುತ್ತಿದ್ದೆ. ಆದರೆ ಇತ್ತೀಚೆಗೆ ‘ಜೋನ್ಪುರಿ ಖಯಾಲ್’ ಎಂಬ ಟ್ರಾನ್ಸ್‌ಮ್ಯಾನ್ ಆತ್ಮಕಥೆಯನ್ನು ನಿರೂಪಿಸುವ ಸಂದರ್ಭದಲ್ಲಿ ಕವಿ ಮತ್ತು ಹೋರಾಟಗಾರ ರೂಮಿ ಹರೀಶ್ ಒಂದು ಘಟನೆಯನ್ನು ನೆನಪಿಸಿಕೊಂಡರು. ಮಾಲಾಶ್ರೀ, ವಿಜಯಶಾಂತಿ, ವಾಣಿ ವಿಶ್ವನಾಥ್, ಕಾಜಲ್ ಮತ್ತು ರಾಣಿ ಮುಖರ್ಜಿ ಒಂದಷ್ಟು ಸಿನಿಮಾಗಳಲ್ಲಿ ಪುರುಷ ಉಡುಪುಗಳನ್ನು ಧರಿಸಿದ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಉದಾಹರಣೆಗೆ ಮಾಲಾಶ್ರೀ ಅಭಿನಯಿಸಿದ ‘ಚಾಮುಂಡಿ’, ‘ದುರ್ಗಿ’ ಮುಂತಾದ ಸಿನಿಮಾಗಳು. ಅಲ್ಲಿ ಆ ಪಾತ್ರಗಳಿಗೆ ಪುರುಷ ಉಡುಪುಗಳನ್ನು ತೊಡಿಸುವ ಆಯ್ಕೆಯಲ್ಲಿ ‘ಜೆಂಡರ್ ಡಿಸ್ಫೊರಿಯ’ ಆಗಲಿ ಅಥವಾ ಅದನ್ನು ಒಂದು ಟ್ರಾನ್ಸ್ ಕಣ್ನೋಟದಿಂದ ನೋಡುವ ಗೋಜಿಗೆ ಸಿನಿಮಾ ತಂಡವೂ ಹೋಗಿರುವ ಸಾಧ್ಯತೆ ಇಲ್ಲವಾದರೂ ಹೆಣ್ಣಾಗಿ ಹುಟ್ಟಿ ಗಂಡಾಗಬೇಕೆನ್ನುವ ಅಭಿಲಾಷೆ ಉಳ್ಳವರಿಗೆ ಅದು ತಂದು ಕೊಡುತ್ತಿದ್ದ ವಿಶ್ವಾಸ ಮತ್ತು ಸಂತೋಷ ಅಪರಿಮಿತವಾದುದು. ಮನೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಗಟ್ಟಿ ಮಹಿಳೆಯರು ಗಂಡಸಿನ ಬಟ್ಟೆ ಹಾಕುತ್ತಾರೆ ಎನ್ನುವುದನ್ನು ಸೂಚ್ಯವಾಗಿ ತೋರಿಸಿ ಗಂಡು ಪೋಷಾಕಿನ ಸ್ವಭಾವದ ಛಾಯೆಯಿಲ್ಲದೆ ಆ ಅಚ್ಚಿಗೆ ಕೂರದೆ ಹೆಣ್ಣಿಗೆ ಶಕ್ತಿಯಿಲ್ಲ ಎನ್ನುವುದನ್ನು ತೋರಿಸುವ ಹಂಬಲದ ಯೋಚನೆಯೆ ಅಲ್ಲಿ ಢಾಳಾಗಿ ಕಾಣುತ್ತದೆ.
‘ಜೆಂಡರ್ ಟ್ರಾನ್ಸಿಷನ್ನು’ಗಳನ್ನು ನಾವು ಹಾರರ್ ಸಿನಿಮಾಗಳಲ್ಲಿ ಕಾಣಬಹುದಾಗಿತ್ತು. ಒಂದು ಹೆಂಗಸಿನ ಪಾತ್ರಕ್ಕೆ ಗಂಡು ದೆವ್ವ ಮೆಟ್ಟಿಕೊಳ್ಳುವುದು, ಗಂಡು ಪಾತ್ರಕ್ಕೆ ಹೆಣ್ಣು ದೆವ್ವ ಮೆಟ್ಟಿಕೊಳ್ಳುವುದು ಇತ್ಯಾದಿ. ಹೀಗೆ ನಾವು ಇರುವುದರಲ್ಲಿ ನಮ್ಮೊಳಗಿದನ್ನು ಆರೋಪಿಸಿ ಖುಷಿಪಟ್ಟುಕೊಳ್ಳಬೇಕಾಗಿತ್ತು. ಮುಖ್ಯವಾಗಿ ಹಾಸ್ಯ, ತಮಾಷೆ, ಅಪರಾಧ, ಖಳಪಾತ್ರಗಳಿಗಾಗಿ ಮಾತ್ರ ಕ್ವಿಯರ್ ಪಾತ್ರ ಹಾಗೂ ವಿಷಯಗಳು ಬಳಕೆಯಾಗುತ್ತಿದ್ದವು. ಕ್ವಿಯರ್ ಪಾತ್ರಗಳ ಉಡುಪು, ಅವುಗಳ ಕುರಿತಾದ ಭಾಷೆ, ಆ ಪಾತ್ರಗಳನ್ನು ಚಿತ್ರಗಳಲ್ಲಿ ಇರಿಸಿಕೊಳ್ಳುವುದರ ಹಿಂದೆ ಇರುತ್ತಿದ್ದ ಉದ್ದೇಶಗಳೆ ಕ್ವೀರ್ ಸಮುದಾಯದವರ ಕುರಿತಾದ ಸಮಾಜದ ಧೋರಣೆಗೆ ಕನ್ನಡಿ ಹಿಡಿಯುತ್ತಿತ್ತು.
ಅಲ್ಲಲ್ಲಿ ಒಂದಷ್ಟು ಜೋಗಪ್ಪಗಳ ಪಾತ್ರಗಳು, ಟ್ರಾನ್ಸ್ ಮಹಿಳೆಯರ ಪಾತ್ರಗಳು ಮುನ್ನೆಲೆಗೆ ಬಂದರೂ ಅತಿಯಾದ ಸಿಂಪಥಿ, ಸಾಧನೆ ಮಾಡಿದರೆ ಮಾತ್ರ ಆ ಪಾತ್ರಗಳಿಗೆ ಮನ್ನಣೆ ಮುಂತಾದ ಅತಿಭಾರಗಳನ್ನು ಹೊರಿಸಿ ಕೂರಿಸುವ ಸಿನಿಮಾಗಳೆ ಹೆಚ್ಚು ಮುನ್ನಲೆಗೆ ಬರಲು ಶುರುಮಾಡಿದವು. ಟ್ರಾನ್ಸ್ ಮಹಿಳೆಯರ ಜೀವನದ ಕಥೆಗಳನ್ನು ಹೇಳುವ ಕಥೆಗಳಲ್ಲಿ ಕೂಡ ಸರ್ಜರಿ, ಗಂಡು ಹೆಣ್ಣಾಗುವ ಹಿಜ್ರಾ ಸಂಸ್ಕೃತಿ ಮತ್ತು ಆಚರಣೆಗಳೆ ಮುಖ್ಯ ಕೇಂದ್ರದಲ್ಲಿರುವ ವಸ್ತುಗಳೆ ಕೇಂದ್ರದಲ್ಲಿರುತ್ತಿದ್ದವು. ಆತ್ಮಕಥೆ ಮತ್ತು ಜೀವನಚರಿತ್ರೆಗಳನ್ನು ಆಧರಿಸಿ ಮಾಡುವ ಚಿತ್ರಗಳಲ್ಲಿ ಸಿನಿಮಾ ತಂಡದವರ ಅಧೈರ್ಯ ಮತ್ತು ಜಾಣತನಗಳು ಕೆಲಸ ಮಾಡುತ್ತಿದ್ದವು. ಸಂಚಾರಿ ವಿಜಯ್ ಅಭಿನಯದ ಕನ್ನಡದ ‘ನಾನು ಅವನಲ್ಲ ಅವಳು’, ಜಯಸೂರ್ಯ ಅಭಿನಯದ ಮಲಯಾಳಂ ಸಿನಿಮಾ ‘ನಾನ್ ಮೇರಿಕುಟ್ಟಿ’ ಮುಖ್ಯ ಸಿನಿಮಾಗಳೆ ಆಗಿದ್ದರೂ ಈ ಮೇಲೆ ಉಲ್ಲೇಖಿಸಲಾದ ಕೆಲವು ವಿಚಾರಗಳಿಂದ ಅವು ಸೊರಗಿರುವಂತೆ ಕಾಣುತ್ತವೆ.
ಅನನ್ಯ ಕಾಸರವಳ್ಳಿ ನಿರ್ದೇಶನದ ‘ಹರಿಕಥಾಪ್ರಸಂಗ’ ಸಿನಿಮಾ ಕಲಾತ್ಮಕತೆಯ ದೃಷ್ಟಿಯಿಂದ ಸೆಳೆದರೂ ಕಥಾ ಮುಖ್ಯಪಾತ್ರದ ಅನಗತ್ಯ ದುರಂತ ಅಂತ್ಯ ಮತ್ತೆ ಸಮುದಾಯದ ಜನರ ಮನಸ್ಸನ್ನು ಮುದುಡಿಸುತ್ತದೆ. ಸಾವೊಂದೆ ನಮಗುಳಿಯುವ ಉತ್ತರವೆ? ಗೋಪಾಲಕೃಷ್ಣ ಪೈ ಅವರ ಕಥೆಯನ್ನು ಸಿನಿಮಾ ಮಾಡುವಾಗ ಅನನ್ಯ ಒಂದು ಅಕ್ಷರ ಪಠ್ಯಕ್ಕೆ ನಿಷ್ಠವಾಗಿರುವ ಸವಾಲನ್ನು ಎದುರಿಸಿರಲೂಬಹುದು.
ಇತ್ತೀಚೆಗೆ ಬಿಡುಗಡೆಯಾದ ಸುಶ್ಮಿತಾ ಸೇನ್ ಅಭಿನಯದ ‘ತಾಳಿ’ ಎಂಬ ವೆಬ್ ಸೀರೀಸ್ ಕೂಡ ಮೇಲುಸ್ತರದಲ್ಲಿ, ಅತಿ ರಂಜಕತೆಯ, ಅತಿಭಾವುಕತೆಯ ನರೇಷನ್ ಆಗಿಯೆ ಉಳಿಯುತ್ತದೆಯೆ ಹೊರತು ಅದು ನಮಗೆ ಹತ್ತಿರ ಎನಿಸುವುದಿಲ್ಲ. ಜಯಸೂರ್ಯ ಅಭಿನಯದ ‘ನಾನ್ ಮೇರಿ ಕುಟ್ಟಿ’ ಕೂಡ ವಾಸ್ತವದಿಂದ ದೂರವಿರುವ ಸಿನಿಮಾ ಎಂದೆ ಹೋರಾಟಗಾರ ಮತ್ತು ಸಿನಿಮಾ ಮೋಹಿಯಾದ ಟ್ರಾನ್ಸ್‌ಮ್ಯಾನ್ ಸುನಿಲ್ ಮೋಹನ್ ಹೇಳುತ್ತಾರೆ. ಇವರು ಕೇರಳ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದವರು. ಅವರು ಹೆಚ್ಚಾಗಿ ಮಲಯಾಳಂ ಮುಖ್ಯಧಾರೆಯ ಸಿನಿಮಾಗಳನ್ನು ನೋಡುತ್ತಾರೆ. ಅವರನ್ನು ಸಿನಿಮಾಗಳಲ್ಲಿ ಕ್ವೀರ್ ಸಂವೇದನೆ ಕುರಿತು ಮಾತನಾಡಿಸಿದಾಗ ಅವರು ಹೀಗೆಂದರು:
‘‘1986 ರಲ್ಲಿ ಬಿಡುಗಡೆಯಾದ ‘ದೇಶಾಟನಕ್ಕಿಳಿ ಕರಯಾರಿಲ್ಲ’ ಎಂಬ ಮಲಯಾಳಂ ಸಿನಿಮಾವನ್ನು ಪಿ. ಪದ್ಮರಾಜ್ ಬರೆದು ನಿರ್ದೇಶಿಸಿದ್ದರು. ಮೋಹನ್ ಲಾಲ್, ಊರ್ವಶಿ ಎಲ್ಲರೂ ಅಭಿನಯಿಸಿದ್ದರು. ಲೆಸ್ಬಿಯನ್ ಆತ್ಮಹತ್ಯೆಯ ಕುರಿತು ಇರುವ ಆ ಸಿನಿಮಾವನ್ನು ಶೂಟಿಂಗ್‌ಗೂ ಮುಂಚೆ ಆ ನಿರ್ದೇಶಕ ಚಿತ್ರದ ಎಲ್ಲ ತಾರಾಗಣವನ್ನು ಕರೆದು ಚಿತ್ರಕಥೆಯನ್ನು ವಿವರಿಸಿ ನೀವು ಮನಸ್ಸುಪೂರ್ತಿಯಾಗಿ ಚಿತ್ರದ ವಸ್ತುವನ್ನು ಒಪ್ಪಿದರೆ ಮಾತ್ರ ಮಾಡಿ, ಇಲ್ಲವೆಂದರೆ ಬೇಡ ಎಂದು ಹೇಳಿ ಚಿತ್ರ ತೆಗೆದಿದ್ದರಂತೆ. ಪದ್ಮರಾಜ್ ಮತ್ತು ಭರತನ್ ಮುಂತಾದ ನಿರ್ದೇಶಕರು ಆ ಕಾಲದಲ್ಲಿ ಕೇರಳದಲ್ಲಿ ಲಿಂಗತ್ವ ಮತ್ತು ಲೈಂಗಿಕತೆ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದರು ಎಂದು ಕೂಡ ನೆನಪು ಮಾಡಿಕೊಳ್ಳುತ್ತಾರೆ. ಅಲ್ಲಿನ ಚಿತ್ರತಾರೆಯರು ಆ ಕಾಲಕ್ಕೆ ಈ ವಿಷಯಗಳಿಗೆ ತುಂಬ ಮುಕ್ತವಾಗಿರುತ್ತಿದ್ದರು. ಪೃಥ್ವಿರಾಜ್ ಮಲಯಾಳಂ ಸಿನಿಮಾದಲ್ಲಿ ತುಂಬಾ ಚಾಲ್ತಿಯಲ್ಲಿರುವಾಗಲೆ ರೊಶಾನ್ ನಿರ್ದೇಶನದ ‘ಮುಂಬೈ ಪೋಲೀಸ್’ ಸಿನಿಮಾದಲ್ಲಿ ಒಬ್ಬ ಸಲಿಂಗಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. ಆ ಚಿತ್ರ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಿಷಯವುಳ್ಳದ್ದಾಗಿದ್ದರೂ ಒಬ್ಬ ಖ್ಯಾತನಟ ಅದನ್ನು ಮಾಡುವ ಧೈರ್ಯ ತೋರಿದ್ದ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೆ ಸೇರುವ ಈ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಸಂಚಲನವನ್ನೆ ಉಂಟುಮಾಡಿತ್ತು. ಅಂತೆಯೆ ‘ಸಂಚಾರಂ’ ಸಿನಿಮಾವನ್ನು ಕೇರಳ ಚಿತ್ರರಂಗ ಬಿಡುಗಡೆಗೂ ತಡೆಯೊಡ್ಡಿತ್ತು. ಲಿಜಿ ಪುಲ್ಲಪ್ಪಲ್ಲಿ ಆ ಚಿತ್ರವನ್ನು ನಿರ್ದೇಶಿಸಿದ್ದರು. 2014ರ ನಂತರದಲ್ಲಿ ನಾಲ್ಸಾ ತೀರ್ಪು ಬಂದ ಮೇಲೆ ಬಂದ ಸಿನಿಮಾಗಳು ಸಮುದಾಯದವರನ್ನು ಒಪ್ಪಿಕೊಳ್ಳುವ, ಅವರನ್ನು ಒಳ್ಳೆಯ ಪಾತ್ರಗಳಾಗಿ ಚಿತ್ರಿಸುವ ಸಿನಿಮಾಗಳನ್ನು ಮಾಡತೊಡಗಿದರು. ಕೇರಳದಲ್ಲಿ ಸ್ಥಾಪನೆಗೊಂಡ ಜೆಂಡರ್ ಜಸ್ಟಿಸ್ ಬೋರ್ಡಿನಿಂದಾಗಿ ಟ್ರಾನ್ಸ್ ಜೆಂಡರ್ ವಿಷಯಗಳನ್ನು ಸಿನಿಮಾ ವಿಷಯಗಳಾಗಿ ಎತ್ತಿಕೊಳ್ಳುತ್ತಿದ್ದಾರಾದರೂ ಉಳಿದ ಜೆಂಡರ್ ಸ್ಪೆಕ್ಟ್ರಮ್ನಲ್ಲಿರುವ ವಿಷಯಗಳ ಕುರಿತು ಸಿನಿಮಾ ಮಾಡಲು ಯಾರೂ ಮುಂದೆ ಬರುತ್ತಿಲ್ಲ.’’
ಈಗ ಕಾಣಿಸುತ್ತಿರುವ ಎಷ್ಟೋ ಪಾತ್ರಗಳಿಗೆ ಕ್ವಿಯರ್ ಪಾತ್ರಗಳಿಗೆ ಅಸ್ತಿತ್ವವೆ ಇರುವುದಿಲ್ಲ. ಮುಖ್ಯವಾಹಿನಿಯಲ್ಲಿ ಬರುವ ಸಿನಿಮಾಗಳು ಮತ್ತು ಒಟಿಟಿಗಳಲ್ಲಿ ಬರುವ ಸಿನಿಮಾಗಳು ಜನರಿಗೆ ಮಾಹಿತಿಯನ್ನು ಕೊಡುವಲ್ಲಿ, ಸಮುದಾಯದವರ ಅಸ್ತಿತ್ವದ ಮೇಲೆ ಬೆಳಕು ಚೆಲ್ಲಿದರೂ, ಅವರನ್ನು ಪರಿಚಯ ಮಾಡಿಕೊಳ್ಳುವಲ್ಲಿಗೇ ಮುಕ್ತಾಯವಾಗುತ್ತವೆ. ಆ ಪರಿಚಯವೂ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತಿರುತ್ತವೆ.
ಇದಕ್ಕೆ ಅಪವಾದವೆಂಬಂತೆ ‘ಮೇಡಿನ್ ಹೆವೆನ್’ ಎರಡನೆ ಆವೃತ್ತಿ ಝೋಯಾ ಅಖ್ತರ್ ಮತ್ತು ರೀಮಾ ಕಾಗತಿ ಮುಂತಾದ ಪ್ರತಿಭಾವಂತರ ಕೈಯಲ್ಲಿ ಅರಳಿದ ಒಂದು ಉತ್ತಮ ವೆಬ್ ಸೀರೀಸ್. ಅಲ್ಲಿ ಒಂದು ಟ್ರಾನ್ಸ್ ಪಾತ್ರವಿದೆ. ಅದಕ್ಕೆ ಟ್ರಾನ್ಸ್ ಸಮುದಾಯದ ಜನರನ್ನೆ ಹಾಕಿಕೊಂಡಿದ್ದಾರೆ. ಅದೊಂದು ಗಟ್ಟಿ ನಿರ್ಧಾರವಾದರೂ ಇಡೀ ಸರಣಿ ಒಂದು ‘ಟೋಕನಿಸ್ಟಿಕ್’ ಹಂತದಲ್ಲಿ ನಿಂತುಬಿಡುತ್ತದೆ. ಹಿಂದಿ ಚಿತ್ರರಂಗದ ಒಳ್ಳೆಯ ಸಿನಿಮಾಗಳ ವಿಷಯಕ್ಕೆ ಬಂದಾಗ ದೀಪಾ ಮೆಹ್ತಾ ನಿರ್ದೇಶನದ ‘ಫೈರ್’, ಪ್ರೊಫೆಸರ್ ರಾಮಚಂದ್ರ ಸಿರಸ್ ಬದುಕಿನ ಚಿತ್ರಣವಾದ ಹನ್ಸಲ್ ಮೆಹತಾ ನಿರ್ದೇಶನದ ‘ಆಲಿಘರ್’, ನೀರಜ್ ಘಯ್ವಾನ್ ನಿರ್ದೇಶನದ ‘ಗೀಲಿ ಪುಚ್ಚಿ’ ಮುಂತಾದವುಗಳು ನೆನಪಾಗುತ್ತವೆ.
ಕ್ವಿಯರ್ ಸಮುದಾಯದ ಪಾತ್ರಗಳನ್ನು ಅಪರಾಧಿ ಪಾತ್ರಗಳಲ್ಲಿ ಚಿತ್ರಿಸುವ ಸಿನಿಮಾಗಳು ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತಳಸಮುದಾಯದವರೆ ಅಪರಾಧಿಗಳಾಗುತ್ತಾರೆ ಎನ್ನುವುದು ಕೂಡ ಒಂದು ಪೂರ್ವಗ್ರಹಗಳಿಂದ ಹುಟ್ಟುತ್ತದೆ. ನಮ್ಮ ಸುತ್ತಲ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ವ್ಯಕ್ತಿ ಕೆಟ್ಟವನಾಗುತ್ತಾನೆ ಎನ್ನುವ ಸಿನಿಮಾಗಳೂ ವಾಸ್ತವ ಚಿತ್ರಣಕ್ಕಷ್ಟೆ ಸೀಮಿತಗೊಳಿಸಿಕೊಂಡ ದಾರಿದ್ರ್ಯದಿಂದ ಸೊರಗುತ್ತವೆ.
ಈ ಹೊತ್ತಿನಲ್ಲಿ ನನಗೆ ಭಾರತದ ಒಬ್ಬ ಮಹತ್ವದ ನಿರ್ದೇಶಕ ನೆನಪಾಗುತ್ತಾನೆ. ಪಶ್ಚಿಮ ಬೆಂಗಾಳದ ರಿತುಪರ್ಣೋ ಘೋಷ್. ಇವರ ನಿರ್ದೇಶನದ ‘ಮೆಮೋರಿಸ್ ಇನ್ ಮಾರ್ಚ್’, ‘ಚಿತ್ರಾಂಗದಾ’ ಮುಂತಾದ ಕ್ವಿಯರ್ ವಿಷಯಗಳಿರುವ ಸಿನಿಮಾಗಳು ಕಲಾತ್ಮಕತೆಯ ದೃಷ್ಟಿಯಿಂದಲೂ, ಪಾತ್ರಗಳ ಒಳತೋಟಿಗಳನ್ನು, ಅವುಗಳ ನಾಡಿಮಿಡಿತಗಳನ್ನು ಸರಿಯಾಗಿ ಹಿಡಿದು ಆ ಚಿತ್ರಗಳನ್ನು ಮನುಷ್ಯರ ತೊಳಲಾಟದ ಕಥೆಗಳಾಗಿ ದಾಟಿಸುವ ಉತ್ತಮ ನಿರ್ದೇಶಕನಾಗಿ ನನಗೆ ಕಾಣುತ್ತಾನೆ. ಅದೇ ರೀತಿ ಸ್ಪ್ಯಾನಿಶ್ ಸಿನಿಮಾ ನಿರ್ದೇಶಕ ಪೆದ್ರೊ ಅಲ್ಮಡೋವರ್ ಕಟ್ಟುವ ಸಿನಿಮಾಗಳಲ್ಲಿ ಕ್ವೀರ್ ಪಾತ್ರಗಳಿದ್ದರೂ ಅವು ಕಲಾಪ್ರಜ್ಞೆ ಮತ್ತು ಪಾತ್ರ ಚಿತ್ರಣಗಳು ಇವು ನಮ್ಮವೆ ಎನ್ನುವ ಭಾವವನ್ನು ಕೊಡುತ್ತವೆ.
ಇದೇ ವಿಷಯದ ಕುರಿತು ಕನ್ನಡದ ಬರಹಗಾರರು, ಸಿನಿಮಾ ಪ್ರೇಮಿಯೂ ಆದ ವಸುದೇಂಧ್ರ ಅವರನ್ನು ಮಾತನಾಡಿಸಿದಾಗ, ‘ಭಾರತದಲ್ಲಿ ಮೊನ್ನೆ ತಾನೆ ಕ್ವಿಯರ್ ಸಮುದಾಯಕ್ಕೆ ಸುಪ್ರೀಂ ಕೋರ್ಟ್ ಸ್ವಾತಂತ್ರ್ಯ ಕೊಟ್ಟಿದೆ. ಆದ್ದರಿಂದ ಲಲಿತಕಲೆಗಳಲ್ಲಿ ತಕ್ಷಣವೇ ನಾವು ಕಲಾತ್ಮಕವಾಗಿ, ಆರೋಗ್ಯಕರವಾಗಿ, ಸಹಜ ರೀತಿಯಲ್ಲಿ ಕ್ವಿಯರ್ ಬದುಕಿನ ಚಿತ್ರಣ ನಿರೀಕ್ಷಿಸುವುದು ತಪ್ಪಾಗುತ್ತದೆ. ಸದ್ಯ ಅದಿನ್ನೂ ಅಂಬೆಗಾಲಿಡಲು ಪ್ರಾರಂಭಿಸಿದೆ. ಆದ್ದರಿಂದ ಬಾಲ್ಯದ ವಿನಾಯಿತಿ ಅದಕ್ಕೆ ಕೊಡಬೇಕು. ಒಮ್ಮೆ ಈ ವಿಷಯಗಳನ್ನು ನಿರ್ಭಿಡೆಯಿಂದ ಸಮಾಜ ಮಾತಾಡಲು ತೊಡಗಿದ ನಂತರ, ಕಾವ್ಯ ಹುಟ್ಟುತ್ತದೆ. ಸಿನಿಮಾಗಳಲ್ಲಿ ಈ ವಿಷಯಗಳ ಬಗ್ಗೆ ಚಳಿ ಬಿಟ್ಟು ಮಾತಾಡುತ್ತಿದ್ದಾರೆ ಎನ್ನುವುದೇ ನನಗೆ ಮುಖ್ಯ’ ಎಂದರು.
ಈವರೆಗೆ ಭಾರತೀಯ ಸಿನಿಮಾ, ಕ್ರೀಡೆ, ರಾಜಕೀಯ ಲೋಕದ ತಾರೆಗಳು ಯಾರೂ ತಾವು ಕ್ವಿಯರ್ ಎಂದು ದಿಟ್ಟತನದಿಂದ ಹೇಳಿಕೊಂಡಿಲ್ಲ. ಹಾಗೆ ನೋಡಿದರೆ ಅಕ್ಷರಲೋಕದ ನಾಯಕರು ಹೆಚ್ಚು ಧೈರ್ಯವಂತರು. ಇಂತಹ ಧೈರ್ಯ ಉಳಿದವರಲ್ಲೂ ವ್ಯಕ್ತವಾದರೆ ಈ ಚಳವಳಿಗೆ ಒಂದು ಶಕ್ತಿ ದಕ್ಕುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ, ಕ್ವಿಯರ್ ಸಮುದಾಯವನ್ನು ಗೇಲಿ ಮಾಡುವ ದುಶ್ಚಟ ಸಿನಿಮಾಗಳಲ್ಲಿ ಈಗ ಕಾಣುವುದಿಲ್ಲ. ಅದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅವರು ಮಾತು ಸೇರಿಸಿದರು.
ಮುಖ್ಯಧಾರೆಯ ಸಿನಿಮಾಗಳಲ್ಲಿ, ಎಲ್ಲರ ಕೈಗೆಟಕುತ್ತಿರುವ ಒಟಿಟಿ ವೆಬ್ ಸೀರೀಸ್‌ಗಳಲ್ಲಿ ಒಳ್ಳೆಯ ಅತ್ಯುತ್ತಮ ಚಿತ್ರಗಳು ಬಂದಾಗ ಅವು ಕೇವಲ ಸಂವೇದನೆಯನ್ನಷ್ಟೆ ಅಲ್ಲದೆ ನಮ್ಮ ಒಳಗನ್ನು ಆಮೂಲಾಗ್ರವಾಗಿ ಬೆಳಗುವ ಶಕ್ತಿ ಪಡೆಯಿತ್ತವೆ. ಕಲಾಸೌಂದರ್ಯಕ್ಕೆ ಆ ಶಕ್ತಿ ಇದೆ. ಇಲ್ಲವಾದರೆ ಅದು ಕೇವಲ ಮಾಹಿತಿಯಾಗಿ ಜನರ ಸಿಂಪಥಿ ಗಿಟ್ಟಿಸಿಕೊಳ್ಳುವುದಕ್ಕಷ್ಟೆ ಸೀಮಿತಗೊಳ್ಳುತ್ತವೆ. ಸಾಮಾನ್ಯ ಜನರನ್ನು ತಲುಪದ ಕಲೆಯಿಂದ ಯಾವುದೆ ಪ್ರಯೋಜನ ಇಲ್ಲವಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.