ಬೆಂಗಳೂರು: ಕೆಜಿಎಫ್–1 ಚಿತ್ರದಲ್ಲಿ ಯಶ್ ತೋರಿರುವ ಪ್ರದರ್ಶನಕ್ಕೆಇತ್ತೀಚೆಗಷ್ಟೇ ‘ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2019’ನೀಡಿ ಪ್ರಶಂಸಿಸಲಾಗಿದೆ. ದಕ್ಷಿಣ ಭಾರತ ಸಿನಿಮಾ ರಂಗದ ಹಲವು ಜನಪ್ರಿಯರಿಗೆ ಈ ಸಾಲಿನ ಪ್ರಶಸ್ತಿ ನೀಡಲಾಗಿದೆ. ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಗೆಗಿನ ಚರ್ಚೆಯೂ ಜೋರಾಗಿದೆ.
ಸೆಪ್ಟೆಂಬರ್ 20ರಂದು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2019’ಪ್ರದಾನ ಮಾಡಲಾಗಿದೆ. ಆದರೆ, ಭಾರತ ಸರ್ಕಾರ ಪ್ರತಿವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಸಿನಿಮಾರಂಗದಲ್ಲಿ ಜೀವಮಾನ ಸಾಧನೆಗಾಗಿ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ‘ ಘೋಷಿಸುತ್ತದೆ. ಆ ಪ್ರಶಸ್ತಿಗೂ ಈಗ ನೀಡಲಾಗಿರುವ ಅವಾರ್ಡ್ಸ್‌ಗೂ ಸಂಬಂಧವಿಲ್ಲ.
ಭಾರತದ ಮೊದಲ ಪೂರ್ಣಪ್ರಮಾಣದ ಸಿನಿಮಾ ನಿರ್ಮಿಸಿದವರು ದಾದಾಸಾಹೇಬ್ ಫಾಲ್ಕೆ. 1913ರಲ್ಲಿ ರಾಜಾ ಹರಿಶ್ವಂದ್ರ ಸಿನಿಮಾ ನಿರ್ಮಿಸುವ ಮೂಲಕ ದೇಶದಲ್ಲಿ ಚಿತ್ರಜಗತ್ತು ತೆರೆದುಕೊಳ್ಳಲು ಪ್ರೇರಣೆಯಾದರು. ಅವರ ಹೆಸರಿನಲ್ಲಿ ಕೇಂದ್ರ ಸರ್ಕಾರವೂ ಸೇರಿದಂತೆ ಹಲವು ಸಂಸ್ಥೆಗಳು, ಅಕಾಡೆಮಿಗಳು ಪ್ರಶಸ್ತಿಗಳನ್ನು ನೀಡುತ್ತಿವೆ.
ಫಾಲ್ಕೆ ಹೆಸರಿನ ಮೊದಲ ಸೌತ್ ಅವಾರ್ಡ್
ಕೆಜಿಎಫ್ ಖ್ಯಾತಿಯ ಯಶ್, ಮಹಾನಟಿ ಚಿತ್ರ ಖ್ಯಾತಿಯ ಕೀರ್ತಿ ಸುರೇಶ್, ಮಹೇಶ್ ಬಾಬು ಹಾಗೂ ಅನುಷ್ಕಾ ಶೆಟ್ಟಿ ಸೇರಿದಂತೆ ಹಲವು ನಟ–ನಟಿಯರು, ತಂತ್ರಜ್ಞರಿಗೆ’ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2019‘ ನೀಡಲಾಗಿದೆ. ‘ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‘ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿನ ಪ್ರದರ್ಶನಗಳಿಗಾಗಿ ಈ ಪ್ರಶಸ್ತಿ ನೀಡಿದೆ.
ಫಾಲ್ಕೆ ಅಕಾಡೆಮಿ
‘ದಾದಾಸಾಹೇಬ್ ಫಾಲ್ಕೆ ಅಕಾಡೆಮಿ’ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಸಿನಿಮಾಗಳಿಗೆ 2000ನೇ ಇಸವಿಯಿಂದ ಪ್ರಶಸ್ತಿಗಳನ್ನು ನೀಡುತ್ತಿದೆ. ಸಿನಿಮಾದ 22 ವಿಭಾಗಗಳಲ್ಲಿ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸುತ್ತದೆ. ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಇನ್‌ಸ್ಟಿಟ್ಯೂಟ್, ದಾದಾಸಾಹೇಬ್‌ಫಾಲ್ಕೆ ಎಕ್ಸೆಲೆಕ್ಸಿ ಪ್ರಶಸ್ತಿ,..ಹೀಗೆ ಫಾಲ್ಕೆ ಅವರ ಹೆಸರಿನಲ್ಲಿ ಹಲವು ಸಂಸ್ಥೆಗಳು ಪ್ರಶಸ್ತಿ ಘೋಷಿಸುತ್ತಿರುತ್ತವೆ.
ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ
ಸಿನಿಮಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರ 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ ₹10 ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1995ರಲ್ಲಿ ವರನಟ ಡಾ.ರಾಜಕುಮಾರ್ ಅವರಿಗೆ ಫಾಲ್ಕೆ ಪ್ರಶಸ್ತಿ ಪ್ರದಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.