ADVERTISEMENT

ಈಗ ಡಾಲಿ ಜಮಾನ

ಪ್ರಜಾವಾಣಿ ವಿಶೇಷ
Published 25 ಅಕ್ಟೋಬರ್ 2019, 4:54 IST
Last Updated 25 ಅಕ್ಟೋಬರ್ 2019, 4:54 IST
‘ಬಡವ ರಾಸ್ಕಲ್’ ಚಿತ್ರದಲ್ಲಿ ಡಾಲಿ ಧನಂಜಯ್
‘ಬಡವ ರಾಸ್ಕಲ್’ ಚಿತ್ರದಲ್ಲಿ ಡಾಲಿ ಧನಂಜಯ್   

ಧನಂಜಯ್‌ ಸೂಕ್ಷ್ಮ ಸಂವೇದನೆಯ ನಟ. ಜೀವನದ ಅನುಭವವೇ ಕಥೆಯಾಗಿ ಜೀವ ತಳೆದಾಗ ತೆರೆಯ ಮೇಲೆ ಹಾಗೂ ಜನರ ಮನದಲ್ಲಿ ಸಿನಿಮಾ ಗಟ್ಟಿಯಾಗಿ ನೆಲೆಯೂರುತ್ತದೆ. ಅಂತಹ ಸಿನಿಮಾಗಳಿಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಅವರು.

‘ನಾನು ರಿಯಲಿಸ್ಟಿಕ್‌ ಆ್ಯಕ್ಟರ್‌. ರಿಯಲಿಸ್ಟಿಕ್‌ ನಿರ್ದೇಶಕ ಸಿಕ್ಕಿದಾಗ ಖುಷಿಯಾಗುತ್ತದೆ. ಎಲ್ಲಾ ಪಾತ್ರಗಳನ್ನೂ ದಕ್ಕಿಸಿಕೊಳ್ಳಲು ಸಾಧ್ಯವೇ ಎಂಬುದು ನನಗೆ ಗೊತ್ತಿಲ್ಲ. ನನಗೆ ದಕ್ಕಿದ್ದನ್ನಷ್ಟೇ ಚೊಕ್ಕಟವಾಗಿ ಮಾಡುತ್ತೇನೆ’ –ಹೀಗೆಂದು ಸ್ಪಷ್ಟವಾಗಿ ಹೇಳಿದರು ‘ಡಾಲಿ’ ಖ್ಯಾತಿಯ ಧನಂಜಯ್.

ನಿಮ್ಮಲ್ಲಿರುವ ನಟನನ್ನು ಪಾತ್ರಗಳಿಗೆ ಹೇಗೆ ಅಣಿಗೊಳಿಸಿಕೊಳ್ಳುತ್ತೀರಿ ಎನ್ನುವ‍ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.ಅದು ಎದುರಿಗೆ ಕುಳಿತವರಿಗೆ ಹೇಳಿದಷ್ಟೇ, ತಮಗೆ ತಾವೇ ಹೇಳಿಕೊಂಡ ಹಾಗೆಯೂ ಇತ್ತು.

ADVERTISEMENT

‘ಪಾತ್ರಧಾರಿಗಳು ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಕೆಲವು ಪಾತ್ರಗಳು ಪಾತ್ರಧಾರಿಗಳ ಹುಡುಕಾಟದಲ್ಲಿರುತ್ತವೆ. ಹಾಗೆ ಹುಡುಕಿಕೊಂಡು ಬಂದ ಪಾತ್ರವೇ ‘ಅಲ್ಲಮ’. ಚಿಕ್ಕಂದಿನಲ್ಲಿ ಒಂದಿಷ್ಟು ವಚನಗಳನ್ನು ಓದಿದ್ದೆ. ಅಲ್ಲಮನ ‘ಎತ್ತಣ ಮಾಮರ ಎತ್ತಣ ಕೋಗಿಲೆ...’ ಎಂಬ ವಚನವಷ್ಟೇ ನನಗೆ ಗೊತ್ತಿತ್ತು. ಟಿ.ಎಸ್. ನಾಗಾಭರಣ ಅವರು ಸಿನಿಮಾ ಮಾಡುವುದಕ್ಕೂ ಮೊದಲು ನನಗೆ ಒಂದಿಷ್ಟು ಪುಸ್ತಕಗಳನ್ನು ಕೊಟ್ಟರು. ಆಗ ಅಲ್ಲಮನನ್ನು ಅರಿಯಲು ಶುರು ಮಾಡಿದೆ’ ಎಂದು ವಿವರಿಸಿದರು.

‘ಅಲ್ಲಮ ಎಲ್ಲರಿಗೂ ದಕ್ಕುವುದಿಲ್ಲ ಎಂದು ಬಹಳಷ್ಟು ಜನರು ನನಗೆ ಹೇಳಿದರು. ನನಗೆ ದಕ್ಕಿದ್ದನ್ನಷ್ಟೇ ನಾನು ಮಾಡಿದ್ದೇನೆ ಎಂದು ಉತ್ತರಿಸಿದೆ. ತುಂಬಾ ಖುಷಿ ಕೊಟ್ಟ ಮತ್ತು ರಿಯಲೈಜೇಷನ್‌ ಆದ ಪಾತ್ರವದು. ನನ್ನ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಿತು. ನನ್ನ ವೃತ್ತಿಬದುಕಿನ ಅಪರೂಪದ ಜರ್ನಿ ಅದು’ ಎಂದರು.

‘ರೈಟಿಂಗ್‌ ಎಗ್ಸೈಟ್‌ ಮಾಡದಿದ್ದರೆ, ಪಾತ್ರದ ಡಿಸೈನ್‌ ಸರಿಯಾಗಿರದಿದ್ದರೆ ನಟನಾದವನು ಏನನ್ನೂ ಮಾಡಲು ಆಗುವುದಿಲ್ಲ’ ಎನ್ನುವುದು ಅವರ ಖಚಿತ ನುಡಿ.

* ‘ಡಾಲಿ’ ಪಾತ್ರದ ಯಶಸ್ಸಿನ ಬಗ್ಗೆ ಹೇಳಿ.

‘ಅಲ್ಲಮ’ನ ಬಳಿಕ ನನಗೆ ಹೆಚ್ಚು ಖುಷಿ ಕೊಟ್ಟ ಪಾತ್ರ ‘ಡಾಲಿ’. ಸಿನಿಮಾ ಪಯಣದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಜನರನ್ನು ತಲುಪಲು ಆಗುತ್ತಿಲ್ಲ; ಚೆನ್ನಾಗಿ ಕೆಲಸ ಮಾಡಲು ಸಾಗುತ್ತಿಲ್ಲ ಎಂಬ ಕೋಪ ಕಾಡುತ್ತಿತ್ತು. ಆ ಕೋಪ, ನಟನೆಯ ಹಸಿವನ್ನು ಹಿಂಗಿಸಿದ್ದೇ ‘ಡಾಲಿ’. ಆ ಪಾತ್ರದಿಂದ ಕೋಪ ಆಚೆ ಬಂತು. ನನ್ನೊಳಗಿನ ಡಾಲಿಯೂ ಆಚೆ ಬಂದು ಧನಂಜಯ್‌ ಮಾತ್ರ ಉಳಿದುಕೊಂಡ. ರೈಟರ್‌ ಬರೆದರಷ್ಟೇ ಅದನ್ನು ಒಗ್ಗಿಸಿಕೊಂಡು ನಾನು ನಟಿಸಲು ಸಾಧ್ಯ. ಅಲ್ಲಮ, ಡಾಲಿಯ ಪಾತ್ರ ಪೋಷಣೆ ಸೊಗಸಾಗಿತ್ತು. ನಿರ್ದೇಶಕರು, ಬರಹಗಾರರು ಈ ಹಾದಿಯಲ್ಲಿ ಸಾಗಿದಾಗ ಕಲಾವಿದನಿಗೆ ನಟನೆ ಸುಲಭ.

* ‘ಡಾಲಿ’ ಬ್ರಾಂಡ್‌ ಸೃಷ್ಟಿಯಾಗಿರುವುದಕ್ಕೆ ಏನನಿಸುತ್ತದೆ?

ಆಟೊ, ಕ್ಯಾಬ್‌, ಬೈಕ್‌, ಕಾರುಗಳು ಜನರ ಸ್ವತ್ತು. ಅವುಗಳ ಖರೀದಿಯ ಹಿಂದೆ ಖುಷಿ, ನೆನಪುಗಳು ಗಾಢವಾಗಿರುತ್ತವೆ. ಅವುಗಳ ಮೇಲೆಯೇ ಸ್ಟಾರ್‌ಗಳ ಫೋಟೊ ನೋಡಿದಾಗ ನನಗೆ ಅಚ್ಚರಿಯಾಗುತ್ತದೆ. ಪಾತ್ರವೊಂದರ ಮೇಲೆ ಜನರಿಗೆ ಬೆಸೆದುಕೊಂಡಿರುವ ಎಮೋಷನ್‌ ಕಂಡು ಬೆರಗಾಗಿದ್ದೇನೆ. ನಾನು ತಿರುಗಿಸುವ ಊರುಗಳಲ್ಲಿ ‘ಡಾಲಿ’ಯ ಫೋಟೊ ನೋಡಿ ಖುಷಿಯಾಗಿದೆ. ‘ಯಜಮಾನ’ ಚಿತ್ರದ ಮಿಠಾಯಿ ಸೂರಿ ಪಾತ್ರವನ್ನೂ ಹಾಕಿಕೊಂಡಿದ್ದಾರೆ. ‘ಸಲಗ’ ಚಿತ್ರದ ಫೋಟೊ ಕೂಡ ಹಾಕಿಕೊಂಡಿದ್ದಾರೆ.

ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಕೃತಿ ನಮಗೆ ಸಹಕಾರ ನೀಡುತ್ತದೆ. ಗೆಲುವಿನತ್ತ ಕರೆದೊಯ್ಯುತ್ತದೆ. ಅದಕ್ಕಾಗಿ ಅಗಾಧವಾದ ತಾಳ್ಮೆ, ದೂರದೃಷ್ಟಿಯೂ ಇರಬೇಕು. ಕೆಲಸ ಮಾಡುತ್ತಿರಬೇಕು. ಚಿತ್ರರಂಗಕ್ಕೆ ಕಾಲಿಟ್ಟಾಗ ನಾವು ಊಹಿಸಲು ಸಾಧ್ಯವಾಗದಂತಹ ಘಟನೆಗಳು ಜರುಗುತ್ತವೆ. ಅದರಿಂದ ಹತಾಶರಾಗುವುದು ಸಹಜ. ಇನ್ನೊಂದೆಡೆ ನಾವು ನಾವಾಗಿರಲೂ ಕಷ್ಟ. ಅದನ್ನೆಲ್ಲಾ ಉಳಿಸಿಕೊಂಡು ಕೆಲಸ ಮಾಡುತ್ತಿರಬೇಕು.

* ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಚಿತ್ರದ ವಿಶೇಷ ಏನು?

‘ಟಗರು’ ಚಿತ್ರದಂತೆಯೇ ಇದು ಕೂಡ ಪ್ರಯೋಗಾತ್ಮಕ ಕಮರ್ಷಿಯಲ್‌ ಚಿತ್ರ. ಸಿನಿಮಾ ಎಂದಾಕ್ಷಣ ಮಾಸ್‌ ಮತ್ತು ಕ್ಲಾಸ್‌ ಎಂದು ವರ್ಗೀಕರಿಸಿ ಬಿಡುತ್ತೇವೆ. ಆದರೆ ಹೀರೊನ ಎಂಟ್ರಿ, ಲುಕ್‌, ಬಿಲ್ಡಪ್‌ ಸಾಂಗ್‌ಗಳು ಇಲ್ಲದೆಯೇ ಹೀರೊಯಿಸಂ ತೋರಿಸಬಹುದು. ರೌಡಿಸಂ ಕಥೆ ಇದು. ಭೂಗತಲೋಕದಲ್ಲಿಯೂ ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ.ಚಿತ್ರದಲ್ಲಿ ನನ್ನದು ಮಂಕಿ ಸೀನ ಎನ್ನುವ ಪಾತ್ರ. ಸಿನಿಮಾದಲ್ಲಿ ಜೀವನದ ಮುಖಗಳಿವೆ. ಆತನ ಬದುಕಿನಲ್ಲಿ ನಡೆಯುವ ಒಂದಿಷ್ಟು ಒಳ್ಳೆಯ ಘಟನೆಗಳನ್ನು ರೆಕಾರ್ಡ್‌ ಮಾಡಲಾಗಿದೆ. ಚಿತ್ರದ ಶೂಟಿಂಗ್‌ ಮುಗಿದಿದೆ. ಡಬ್ಬಿಂಗ್‌ ನಡೆಯುತ್ತಿದ್ದು, ಡಿಸೆಂಬರ್‌ಗೆ ಥಿಯೇಟರ್‌ಗೆ ಬರುವ ಯೋಚನೆಯಿದೆ.

* ನಿರ್ದೇಶಕ ಸೂರಿ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅವರು ನನ್ನ ಮೆಚ್ಚಿನ ನಿರ್ದೇಶಕ. ಕಣ್ಣಿನ ಮುಂದೆ ದೃಶ್ಯಾವಳಿಗಳು ನಡೆಯುತ್ತಿರುವ ಹಾಗೆ ಸಿನಿಮಾ ಕಟ್ಟುವುದರಲ್ಲಿ ಅವರು ಸಿದ್ಧಹಸ್ತರು. ಪಾತ್ರದ ಬಗ್ಗೆ ಅವರು ಅದ್ಭುತವಾಗಿ ಮಾತನಾಡುತ್ತಾರೆ. ಅಷ್ಟೇ ಸ್ವಾತಂತ್ರ್ಯವನ್ನೂ ನೀಡುತ್ತಾರೆ. ಸಿಕ್ಕಿದಾಗದೆಲ್ಲಾ ಪಾತ್ರದ ಬಗ್ಗೆಯೇ ಮಾತನಾಡುತ್ತಾರೆ. ಆಗ ನಮಗೆ ಗೊತ್ತಿಲ್ಲದೆಯೇ ನನ್ನೊಳಗೆ ಆ ಪಾತ್ರ ಡಿಸೈನ್‌ ಆಗಿಬಿಡುತ್ತದೆ.

* ‘ಬಡವ ರಾಸ್ಕಲ್’ ಚಿತ್ರದ ಕಥೆ ಏನು?

ಇದೊಂದು ಮಿಡಲ್‌ಕ್ಲಾಸ್‌ ಎಂಟರ್‌ಟೈನರ್‌ ಸಿನಿಮಾ. ಎಲ್ಲರ ಬದುಕಿನಲ್ಲೂ ಒಂದು ಮುಖವಿರುತ್ತದೆ. ನಾವು ಶಿಕ್ಷಣ ಮುಗಿಸಿ ಕೆಲಸಕ್ಕೆ ಹೋಗುವ ಮಧ್ಯದಲ್ಲಿ ಒಂದೆರಡು ವರ್ಷಗಳಿರುತ್ತವೆ. ಆ ಅವಧಿಯಲ್ಲಿ ನಡೆಯುವ ಅಪರೂ‍ಪದ ಕ್ಷಣಗಳೇ ಈ ಚಿತ್ರದ ಹೂರಣ. ಮಧ್ಯಮ ವರ್ಗಕ್ಕೆ ಬಹುಬೇಗ ಕನೆಕ್ಟ್‌ ಆಗುವ ಚಿತ್ರ.

* ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ಈ ಮನುಷ್ಯನೊಟ್ಟಿಗೆ ಕೆಲಸ ಮಾಡಲು ಸಾಧ್ಯವೇ ಎಂದು ನೋಡುತ್ತೇನೆ. ಇನ್ನೊಬ್ಬರ ಸಮಯಕ್ಕೆ ಬೆಲೆ ಕೊಡದವರು, ವೃತ್ತಿಯ ಬಗ್ಗೆ ಅರಿವು ಇಲ್ಲದವರೊಟ್ಟಿಗೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಈಗಾಗಲೇ, ವೃತ್ತಿಬದುಕಿನಲ್ಲಿ ಒಂದಿಷ್ಟು ಕಹಿ ಘಟನೆಗಳ ಅನುಭವವಾಗಿದೆ. ಅವರ ಚಟಕ್ಕೆ ನಮ್ಮ ಜೀವನ ತಗಲಾಕಿಕೊಂಡು ಅಲ್ಲಾಡುತ್ತಿರುತ್ತದೆ. ಅದನ್ನು ಅನುಭವಿಸಲು ನನಗಿಷ್ಟವಿಲ್ಲ. ಮನುಷ್ಯ ಸರಿ ಇರಬೇಕು. ಅವನ ಆಲೋಚನೆಗಳೂ ಉತ್ತಮವಾಗಿರಬೇಕು. ಅದಾದ ಮೇಲೆ ಕಥೆ, ಪಾತ್ರದ ಬಗ್ಗೆ ಗಮನಹರಿಸುತ್ತೇನೆ.

* ನಿಮಗೆ ಮಹಿಳಾ ಅಭಿಮಾನಿಗಳು ಹೆಚ್ಚಿದ್ದಾರಂತಲ್ಲಾ?

ಕಲಾವಿದನ ನಟನೆಯನ್ನು ಹೆಣ್ಣುಮಕ್ಕಳು ಮೆಚ್ಚಬೇಕು. ಒಂದು ಹೆಣ್ಣು ಸಿನಿಮಾ ಇಷ್ಟಪಟ್ಟರೆ ನಾಲ್ಕು ಟಿಕೆಟ್‌ ಮಾರಾಟವಾಗುತ್ತವೆ. ಇಡೀ ಕುಟುಂಬವೇ ಚಿತ್ರಮಂದಿರಕ್ಕೆ ಬರುತ್ತದೆ. ಹಲವು ಹೆಣ್ಣುಮಕ್ಕಳು ‘ಡಾಲಿ’ ಎಂದು ಕೈಮೇಲೆ ಟ್ಯಾಟೊ ಹಾಕಿಕೊಂಡಿದ್ದಾರೆ. ಅದನ್ನು ನೋಡಿದಾಗ ಎಗ್ಸೈಟ್‌ ಆಗುತ್ತದೆ. ಮತ್ತೊಂದೆಡೆ ಹೀಗೇಕೆ ಮಾಡಿಕೊಳ್ಳುತ್ತಾರೆ ಎಂಬ ಬೇಸರವೂ ಉಂಟು.

* ನಿಮಗೆ ಸಿನಿಮಾ ನಿರ್ದೇಶನದ ಆಸೆ ಇಲ್ಲವೇ?

ನಿರ್ದೇಶನ ಎಂಬುದು ದೊಡ್ಡ ಜವಾಬ್ದಾರಿ. ಸದ್ಯಕ್ಕೆ ಸಿನಿಮಾಕ್ಕೆ ಹಾಡುಗಳನ್ನು ಬರೆಯುತ್ತಿದ್ದೇನೆ. ಈಗ ಡಾಲಿ ಪಿಕ್ಚರ್‌ ಮೂಲಕ ನಿರ್ಮಾಣಕ್ಕೆ ಇಳಿದಿರುವೆ. ನಾನೇ ಕೆಲವು ಕಥೆಗಳನ್ನೂ ಬರೆದಿರುವೆ. ನಿರ್ದೇಶನದ ನೊಗವನ್ನೂ ಹೊರಬಹುದು ಎಂದು ಅನಿಸಿದರೆ ಖಂಡಿತ ನಿರ್ದೇಶಕನ ಕ್ಯಾಪ್‌ ಧರಿಸುತ್ತೇನೆ.

* ಸಾಹಿತ್ಯ ಮತ್ತು ಸಿನಿಮಾ ನಡುವೆ ಇದ್ದ ಬಲವಾದ ನಂಟು ತೀರಾ ತೆಳುವಾಗುತ್ತಿದೆ ಎಂದು ಅನಿಸುತ್ತಿದೆಯೇ?

ಕನ್ನಡ ಚಿತ್ರರಂಗದಲ್ಲಿ ಉತ್ತಮ ಬರಹಗಾರರು ಇದ್ದಾರೆ. ನಾನು ಇಲ್ಲಾ ಎಂದು ಹೇಳಿದರೆ ತಪ್ಪಾಗುತ್ತದೆ. ಮತ್ತೊಂದೆಡೆ ನಾವು ಬರಹಗಾರರು, ನಿರ್ದೇಶಕರು ಎಂದು ಅಂದುಕೊಂಡವರು ಇದ್ದಾರೆ. ಆದರೆ, ಚಿತ್ರರಂಗಕ್ಕೆ ಮತ್ತಷ್ಟು ಒಳ್ಳೆಯ ಬರಹಗಾರರು, ನಿರ್ದೇಶಕರ ಅವಶ್ಯಕತೆ ಇದೆ.

ಕೆಲವು ಮಲಯಾಳ ಸಿನಿಮಾಗಳನ್ನು ನೋಡಿದರೆ ಕಾದಂಬರಿ ಓದಿದಂತೆ ಅನಿಸುತ್ತದೆ. ಕಾದಂಬರಿ ಆಧರಿಸಿದ ಚಿತ್ರ ಅಂದಾಕ್ಷಣ ಅವಾರ್ಡ್‌ ಸಿನಿಮಾವಲ್ಲ. ಕೆಲವು ಸಿನಿಮಾಗಳು ಪುಸ್ತಕ ಓದಿದ ಅನುಭವ ಕೊಡುತ್ತವೆ. ಕನ್ನಡದಲ್ಲೂ ಅಂತಹ ಅನುಭವ ಕಟ್ಟಿಕೊಡುವ ಬರಹಗಾರರು, ನಿರ್ದೇಶಕರು ಬೇಕು. ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳು ನಮಗೆ ಮಾದರಿಯಾಗಬೇಕು.

ಇತ್ತೀಚೆಗೆ ಹಾಲಿವುಡ್‌ನಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಒಬ್ಬ ರೈಟರ್‌ ಚೆನ್ನಾಗಿ ಕಥೆ ಬರೆದಿರುತ್ತಾನೆ. ಅದನ್ನು ನಿರ್ದೇಶಕ ದೃಶ್ಯರೂಪಕ್ಕಿಳಿಸುತ್ತಾನೆ. ಆದರೆ, ನಾಲ್ಕೈದು ಜನರು ಕುಳಿತುಕೊಂಡು ಕಥೆ ಹೊಸೆದು ಸಿನಿಮಾ ಮಾಡಿದರೆ ಅದು ಯಾವತ್ತಿಗೂ ಒಳ್ಳೆಯ ಕಥೆಯಾಗುವುದಿಲ್ಲ. ಒಬ್ಬರು ಕಥೆ ಬರೆಯಬೇಕು. ಅದನ್ನು ನಿರ್ದೇಶಕ ಸಿನಿಮಾ ಮಾಡಬೇಕು. ಅದರ ಚರ್ಚೆಗೆ ಹಲವು ಜನರು ಸೇರಿಕೊಂಡರೆ ತೊಂದರೆಯಿಲ್ಲ. ಅವರ ಆಲೋಚನೆಯೂ ಭಿನ್ನವಾಗಿರಬೇಕು.

* ಚಿತ್ರರಂಗ ಪ್ರವೇಶಿಸುತ್ತಿರುವ ಹೊಸಬರಿಗೆ ನಿಮ್ಮ ಸಲಹೆ ಏನು?

ಒಂದು ಮಟ್ಟದ ತಯಾರಿ ಇರಬೇಕು. ಹಾಗೆಂದು ಡಾನ್ಸ್‌, ಪೈಟ್‌ ಕಲಿಯುವುದು ಎಂದರ್ಥವಲ್ಲ. ಎಲ್ಲವನ್ನೂ ಕಲಿಯಬೇಕು. ಸಿನಿಮಾ ನೋಡಿ ಸಿನಿಮಾ ಮಾಡುವುದು ಬೇರೆ; ಬದುಕನ್ನು ನೋಡಿ ಕಥೆ ಕಟ್ಟಿ, ಸಿನಿಮಾ ಮಾಡುವುದೇ ಬೇರೆ. ನಟನೆ ಎಂದಾಗ ಬದುಕನ್ನು ನೋಡಿರಬೇಕು. ಇಲ್ಲವಾದರೆ ಯಾರೋ ಹೇಳಿರುವುದನ್ನು, ಕೇಳಿರುವುದನ್ನು ನೋಡಿಕೊಂಡು ನಟನೆ ಮಾಡುತ್ತಿರುತ್ತೇವೆ.

ಸ್ವಂತ ಅನುಭವ ಇದ್ದರೆ ನಟನೆಯೂ ಭಿನ್ನವಾಗಿರುತ್ತದೆ. ಸಂಪೂರ್ಣವಾಗಿ ಸಿನಿಮಾದಲ್ಲಿಯೇ ಮುಳುಗಿ ಹೋಗುವುದಿದ್ದರೆ ಮಾತ್ರ ಈ ಕ್ಷೇತ್ರಕ್ಕೆ ಬರಬೇಕು. ದೀರ್ಘಕಾಲೀನ ಗುರಿ, ತಾಳ್ಮೆ ಇರಬೇಕು. ಪ್ರಸ್ತುತ ಬಹುಬೇಗ ಖ್ಯಾತಿ ಗಳಿಸಬೇಕೆಂದು ಚಿತ್ರರಂಗಕ್ಕೆ ಬರುವವರೇ ಹೆಚ್ಚು. ಟಿ.ವಿ.ಯಲ್ಲಿ ಬಂದರೆ ಫೇಮಸ್‌ ಆಗುತ್ತೇವೆ ಎಂಬ ಭ್ರಮೆ ಬೇಡ. ಅದಕ್ಕೆ ವ್ಯಾಲಿಡಿಟಿ ಕಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.