ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ

ಪಿಟಿಐ
Published 19 ಸೆಪ್ಟೆಂಬರ್ 2024, 7:51 IST
Last Updated 19 ಸೆಪ್ಟೆಂಬರ್ 2024, 7:51 IST
<div class="paragraphs"><p>ಜಾನಿ ಮಾಸ್ಟರ್</p></div>

ಜಾನಿ ಮಾಸ್ಟರ್

   

ಹೈದರಾಬಾದ್‌: ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಅವರನ್ನು ಬಂಧಿಸಲಾಗಿದೆ.

ಜಾನಿ ಮಾಸ್ಟರ್‌ ಅವರ ನಿಜವಾದ ಹೆಸರು ಶೇಕ್‌ ಜಾನಿ. ಅವರನ್ನು ಸೈಬರಾಬಾದ್‌ ಪೊಲೀಸರು ಗೋವಾದಲ್ಲಿ ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಗೋವಾ ನ್ಯಾಯಾಲಯದಿಂದ ‘ಟ್ರಾನ್ಸಿಟ್‌ ವಾರಂಟ್‌’ ಪಡೆದು ಜಾನಿ ಅವರನ್ನು ಹೈದರಾಬಾದ್‌ಗೆ ಕರೆತರಲಾಗುವುದು ಎಂದು ಪೊಲೀಸರು ವಿವರಿಸಿದ್ದಾರೆ.

ಹೊರಾಂಗಣ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ಬಳಿಕ ಸೈಬರಾಬಾದ್‌ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ರಾಯದುರ್ಗ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ನಂತರ, ಭಾನುವಾರ ಅದನ್ನು ನರಸಿಂಗಿ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಜಾನಿ ವಿರುದ್ಧ ‘ಪೋಕ್ಸೊ’ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮಿತಿ ರಚನೆ: ಇದರ ಬೆನ್ನಲ್ಲೇ ತೆಲುಗು ಸಿನಿಮಾ ಮತ್ತು ವಾಣಿಜ್ಯ ಮಂಡಳಿ ಸಹ ಜಾನಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದು, 90 ದಿನಗಳೊಳಗೆ ವರದಿ ನೀಡುವಂತೆ ತಿಳಿಸಿದೆ.

ಸಂತ್ರಸ್ತೆಗೆ ಅಗತ್ಯ ನೆರವು ನೀಡುವುದಾಗಿ ತೆಲಂಗಾಣ ರಾಜ್ಯ ಮಹಿಳಾ ಆಯೋಗ ತಿಳಿಸಿದೆ.

‘ಲವ್‌ ಜಿಹಾದ್‌’ ಆರೋಪ: ಈ ಪ್ರಕರಣ ಕುರಿತು ರಾಜಕೀಯ ಪಕ್ಷಗಳೂ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ. ತೆಲಂಗಾಣ ಬಿಜೆಪಿ ಮಹಿಳಾ ಮೋರ್ಚಾವು ಇದನ್ನು ‘ಲವ್‌ ಜಿಹಾದ್‌’ ಎಂದು ದೂರಿದೆ.

ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷವು ತನ್ನ ಕಾರ್ಯಕ್ರಮಗಳಿಂದ ದೂರ ಉಳಿಯುವಂತೆ ಜಾನಿ ಮಾಸ್ಟರ್‌ಗೆ ಸೂಚಿಸಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಾನಿ ಅವರು ಜನಸೇನಾ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.