ಬೆಂಗಳೂರು: ನಟ ದರ್ಶನ್ ಬಂಧನದ ಕುರಿತಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಪ್ರತಿಕ್ರಿಯಿಸಿದ್ದು, ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯದ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂದು ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ ಇತರೆ 13 ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಠಾಣೆಯ ಸೆಲ್‌ನಲ್ಲಿ ದರ್ಶನ್ ಸೇರಿ ಇತರೆ 12 ಆರೋಪಿಗಳನ್ನು ಇಡಲಾಗಿದೆ. ಎಲ್ಲ ಆರೋಪಿಗಳೂ ಅಲ್ಲೇ ರಾತ್ರಿ ಕಳೆದರು. ಮಂಗಳವಾರ ರಾತ್ರಿ ತನಿಖಾಧಿಕಾರಿಗಳು ಕೆಲವು ಪ್ರಶ್ನೆ ಕೇಳಿ ವಿಚಾರಣೆ ನಡೆಸಿದ್ದರು. ಇಂದು ಮತ್ತೆ ಠಾಣೆಯಲ್ಲೇ ವಿಚಾರಣೆ ನಡೆಯಲಿದೆ.
ಪವಿತ್ರಾಗೌಡ ಅವರನ್ನು ನಿಮ್ಹಾನ್ಸ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಬುಧವಾರ ಬೆಳಿಗ್ಗೆಯೇ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆ ತರಲಾಗಿದೆ.
ರೇಣುಕಾಸ್ವಾಮಿ ಹತ್ಯೆೆ ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾಗೌಡ ಹಾಗೂ ಇತರರ ವಿರುದ್ಧ ಸದ್ಯ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಾವುದೇ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಲ್ಲ.
ಆದರೆ, ಈಗಾಗಲೇ ಸತ್ವ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಕೇವಲ್ ರಾಮ್ ದೋರೋಜಿ ನೀಡಿರುವ ದೂರು ಆಧರಿಸಿ ದಾಖಲಿಸಿಕೊಂಡು ಅಪರಿಚಿತ ಶವ ಪತ್ತೆೆ ಪ್ರಕರಣದಲ್ಲೇ ಹೆಚ್ಚುವರಿಯಾಗಿ ಬಂಧಿತರ ವಿರುದ್ಧ ಕೊಲೆ, ಅಪಹರಣ, ಹಲ್ಲೆೆ ಆರೋಪಡಿ ಐಪಿಸಿ ಸೆಕ್ಷನ್‌ಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ದರ್ಶನ್ ಬಂಧನದ ಹಿನ್ನೆೆಲೆಯಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಯ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆೆ ಕಲ್ಪಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸರು ಸೇರಿ 80ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
'ಇಂದು ಒಂದು ಹಂತದ ವಿಚಾರಣೆ ಮುಂದುವರಿದ ಬಳಿಕ ಎಲ್ಲ ಆರೋಪಿಗಳನ್ನು ಸ್ಥಳ ಮಹಜರು ನಡೆಸಲು ಕರೆದೊಯ್ಯುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಅವರಿಗೆ ಥಳಿಸಿ ಕೊಲೆ ಮಾಡಿದ್ದ ಶೆಡ್, ಮೃತದೇಹ ಎಸೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ಯಲಾಗುವುದು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.