ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟ ರಮೇಶ್ ಅರವಿಂದ್, ‘ತಿದ್ದಿಕೊಂಡು ನಿನ್ನೆಯ ದರ್ಶನ್ ಆಗಲು ಅವರಿಗೆ ಅವಕಾಶವಿದೆ’ ಎಂದಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ವಿಷಯ ಹಂಚಿಕೊಂಡರು.
‘ಗೊತ್ತಿರುವ ವ್ಯಕ್ತಿ ತಪ್ಪು ಮಾಡಿದಾಗ, ಆ ವ್ಯಕ್ತಿ ಗೊತ್ತು ಎನ್ನುವ ಕಾರಣಕ್ಕೆ ಆ ತಪ್ಪನ್ನು ತಪ್ಪು ಅಲ್ಲ ಎನ್ನಲು ಸಾಧ್ಯವಿಲ್ಲ. ಹಾಗೆಯೇ ತಪ್ಪು ಎನ್ನುವ ಒಂದೇ ಕಾರಣಕ್ಕೆ ಆ ವ್ಯಕ್ತಿಯೇ ಗೊತ್ತಿಲ್ಲ ಎನ್ನಲೂ ಸಾಧ್ಯವಿಲ್ಲ. ನಾವು ಕಲಾವಿದರಾಗಿ ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದ್ದೇವೆ’ ಎಂದಿದ್ದಾರೆ ರಮೇಶ್ ಅರವಿಂದ್.
‘ದರ್ಶನ್ ಬಗ್ಗೆ ನಾನು ಇಷ್ಟು ದಿನ ಮಾತನಾಡಿಲ್ಲ. ಸಾಮಾನ್ಯವಾಗಿ ಇಂತಹ ವಿಷಯಗಳ ಬಗ್ಗೆ ನಾನು ಮಾತನಾಡುವುದೂ ಇಲ್ಲ. ಇಲ್ಲಿ ಮೂರು ದರ್ಶನ್ ಇದ್ದಾರೆ. ಒಬ್ಬರು ನಿನ್ನೆಯ ದರ್ಶನ್. ಅವರು ಚಿತ್ರಗಳ ಮೂಲಕ ಬಹಳ ಮಜಾ ಕೊಟ್ಟ ಸೂಪರ್‌ಸ್ಟಾರ್. ವೀಕೆಂಡ್ ವಿತ್ ರಮೇಶ್‌ನಲ್ಲಿ ಆ ದರ್ಶನ್ ನೋಡಿದ್ದೆ. ಇನ್ನು ಇವತ್ತಿನ ದರ್ಶನ್ ಒಬ್ಬರು ಇದ್ದಾರೆ. ಈ ಘಟನೆಯಿಂದ ನಮಗೆಲ್ಲರಿಗೂ ಸ್ವಲ್ಪ ಬೇಜಾರಾಗಿದೆ. ಒಂದು ದೊಡ್ಡ ತಪ್ಪು ಆಗಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು. ಅದು ಕಾನೂನು ನೋಡಿಕೊಳ್ಳುತ್ತದೆ ಎಂದರು.
ಇನ್ನೊಂದು ನಾಳೆಯ ದರ್ಶನ್. ಈ ಘಟನೆಯ ಶಿಕ್ಷೆಯನ್ನು ಅನುಭವಿಸಿ ಹೊರಬಂದಾಗ ಆ ನಾಳೆಯ ದರ್ಶನ್ ಏನು ಮಾಡುತ್ತಾರೆ ಎನ್ನುವುದು ನನಗೆ ಬಹಳ ಕುತೂಹಲಕಾರಿಯಾಗಿದೆ. ರಸ್ತೆಯಲ್ಲಷ್ಟೇ ಯೂಟರ್ನ್ ಇಲ್ಲ ಎನ್ನುವ ಎಚ್ಚರಿಕೆ ಇರುತ್ತದೆ. ಜೀವನದಲ್ಲಿ ಅದು ಇರುವುದಿಲ್ಲ. ಶಿಕ್ಷೆ ಅನುಭವಿಸಿದ ಮೇಲೆ ಒಂದು ಅವಕಾಶವಿದೆ. ತಿದ್ದಿಕೊಂಡು ನಿನ್ನೆಯ ದರ್ಶನ್ ಆಗಲು ಅವಕಾಶವಿರುತ್ತದೆ. ಅದನ್ನು ಕಾದುನೋಡಬೇಕು. ಆ ದರ್ಶನ್ ಏನು ಮಾಡುತ್ತಾರೆ ಎನ್ನುವುದೇ ನನಗೆ ಈಗ ಇರುವ ಕುತೂಹಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.