ಬೆಂಗಳೂರು:ಮೈಸೂರಿನ ಸಂದೇಶ್ ದ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿರುವ ಬೆನ್ನಲ್ಲೇ, ದರ್ಶನ್ ಪರಬೆಂಬಲ ಸೂಚಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಇಂದ್ರಜಿತ್ ಲಂಕೇಶ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ದರ್ಶನ್ ಅವರು ಆಡಿದ ಮಾತು ನಾನಾ ತಿರುವುಗಳನ್ನು ಪಡೆದಿತ್ತು. ನಿರ್ದೇಶಕ ಜೋಗಿ ಪ್ರೇಮ್ ಕೂಡಾ ದರ್ಶನ್ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.
‘ದರ್ಶನ್ ಅವರೇ, ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ್ ಪುಡಂಗುನೂ ಅಲ್ಲಾ, ನನಗೆ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ದರ್ಶನ್ ಅವರೇ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮಗೂ ಗೊತ್ತು.. ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತಾನಾಡಬೇಕಿದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ...’ ಎಂದು ಪ್ರೇಮ್ ಹೇಳಿದ್ದರು.
‘ಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. #WeStandWithDBoss’ ಎನ್ನುವ ಅಭಿಯಾನ ಇದೀಗ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆರಂಭವಾಗಿದ್ದು, ಸಾವಿರಾರು ಜನರು ದರ್ಶನ್ ಪರ ಪೋಸ್ಟ್ ಮಾಡಿದ್ದಾರೆ. ನಟ ಆದಿತ್ಯ ಅವರೂ ಈ ಕುರಿತು ಟ್ವೀಟ್ ಮಾಡಿದ್ದು, ‘ನಿಮ್ಮ ಈ ಸಂಕಷ್ಟದ ಸಮಯದಲ್ಲಿ ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ, ನಾನಂತೂ ನಿಮ್ಮ ಜೊತೆಗಿರುತ್ತೇನೆ. ನಿಮ್ಮ ಸೆಲೆಬ್ರಿಟಿಗಳ ಬೆಂಬಲ ನಿಮಗೆ ಸದಾ ಇದೆ ಎನ್ನುವುದನ್ನು ನೀವು ನೆನಪಿನಲ್ಲಿಡಿ. ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಿಮಗೆ ನಮ್ಮ ಬೆಂಬಲ ಸದಾ ಇದೆ’ ಎಂದಿದ್ದಾರೆ.
ಸಂಸದ ಪಿ.ಸಿ.ಮೋಹನ್ ಅವರೂ ದರ್ಶನ್ ಪರ ಟ್ವೀಟ್ ಮಾಡಿದ್ದು, ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ’ ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.