ADVERTISEMENT

ಹುಬ್ಬಳ್ಳಿಯಲ್ಲಿ ‘ರಾಬರ್ಟ್‘ ಹವಾ‌: ಅಭಿಮಾನಿಗಳಿಗೆ ‘ಕಾಕಾ‘ ಹೊಡೆಯಲ್ಲ –‌ದರ್ಶನ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 1:53 IST
Last Updated 1 ಮಾರ್ಚ್ 2021, 1:53 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಜೊತೆ ಸಚಿವರಾದ ಜಗದೀಶ ಶೆಟ್ಟರ್‌, ಬಿ.ಸಿ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ನಾಗೇಶ ಕಲಬುರ್ಗಿ ಸೆಲ್ಫಿ ತೆಗೆದುಕೊಂಡರು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಜೊತೆ ಸಚಿವರಾದ ಜಗದೀಶ ಶೆಟ್ಟರ್‌, ಬಿ.ಸಿ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ನಾಗೇಶ ಕಲಬುರ್ಗಿ ಸೆಲ್ಫಿ ತೆಗೆದುಕೊಂಡರು   

ಹುಬ್ಬಳ್ಳಿ: ಡಿ ಬಾಸ್... ಡಿ ಬಾಸ್... ಡಿ ಬಾಸ್...ಡಿ ಬಾಸ್...ಡಿ ಬಾಸ್...

ಮುಗಿಲು ಮುಟ್ಟುತ್ತಿದ್ದ ಡಿ ಬಾಸ್ ಅಭಿಮಾನಿಗಳ ಕೂಗು, ನಟ ದರ್ಶನ್‌ ಅವರ ಒಂದೊಂದು ಮಾತಿಗೂ ಶಿಳ್ಳೆಗಳ ಹಾವಳಿ, ಎಲ್ಲೆ ಮೀರಿದ ಕರತಾಡನ, ಬಾನಂಗಳಕ್ಕೆ ಮುತ್ತಿಕ್ಕುತ್ತಿದ್ದ ಸಿಡಿಮದ್ದುಗಳು, ವರ್ಣ ರಂಜಿತ ಬೆಳಕಿನ ಓಕುಳಿಯಲ್ಲಿ ನಾಲ್ಕು ಗಂಟೆಗಳ ಕಾಲ ಸಂಭ್ರಮಿಸಿದ ಸಿನಿ ರಸಿಕರು...

ನಗರದ ದೇಸಾಯಿ ವೃತ್ತದ ಬಳಿಯ ರೈಲ್ವೆ ಮೈದಾನದಲ್ಲಿ ಭಾನುವಾರ ಮುಸ್ಸಂಜೆ ನಟ ದರ್ಶನ್‌ ಅಭಿನಯದ ‘ರಾಬರ್ಟ್’ ಚಿತ್ರದ ಬಿಡುಗಡೆ ಪೂರ್ವ ನಡೆದ ಅದ್ಧೂರಿ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು ಇವು.
ವೇದಿಕೆಗೆ ದರ್ಶನ್‌ ಬರುತ್ತಿದ್ದಂತೆಯೇ ಅಭಿಮಾನಿಗಳು ಸಂಭ್ರಮದಿಂದ ‘ಡಿ ಬಾಸ್.. ಡಿ ಬಾಸ್’ ಎಂದು ಕೂಗಿದರು. ರಾಬರ್ಟ್ ಚಿತ್ರದ ಕುರಿತು ಲೇಸರ್ ದೃಶ್ಯಾವಳಿ ಅಭಿಮಾನಿಗಳನ್ನು ಆಕರ್ಷಿಸಿದವು.

ADVERTISEMENT

ಸಚಿವರಾದ ಬಿ.ಸಿ. ಪಾಟೀಲ, ಜಗದೀಶ ಶೆಟ್ಟರ್‌, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಶಂಕರಪಾಟೀಲ ಮುನೇನಕೊಪ್ಪ, ರಾಜುಗೌಡ, ನಾಗೇಶ ಕಲಬುರ್ಗಿ, ನಟಿ ಆಶಾ ಭಟ್, ನಟರಾದ ದೇವರಾಜ, ರವಿಶಂಕರ, ವಿನೋದ ಪ್ರಭಾಕರ, ಶರಣ್, ಚಿಕ್ಕಣ್ಣ, ಅಭಿಷೇಕ ಅಂಬರೀಶ, ಧೃವನ್, ಶಿವರಾಜ ಕೆ.ಆರ್. ಪೇಟೆ, ಜಾಹಿದ್ ಖಾನ್, ಚಿತ್ರ ನಿರ್ಮಾಪಕ ಉಪಾಪತಿ ಶ್ರೀನಿವಾಸಗೌಡ, ನಿರ್ದೇಶಕ ತರುಣ ಸುಧೀರ ಇದ್ದರು.

ನಾವು ಜಾತಿಗೋಸ್ಕರ ಹುಟ್ಟಿಲ್ಲ: ದರ್ಶನ

‘ಕನ್ನಡ ಚಿತ್ರರಂಗದಲ್ಲಿ ಇರುವ ಎಲ್ಲ ಕಲಾವಿದರೂ ಒಂದೇ. ನಾವು ಯಾವ ಜಾತಿಗೋಸ್ಕರವೂ ಹುಟ್ಟಿಲ್ಲ, ಯಾರೊಬ್ಬರ ಸ್ವತ್ತೂ ಅಲ್ಲ. ಅಭಿಮಾನಿಗಳೊಂದೇ ನಮಗೆ ಜಾತಿ’ ಎಂದು ನಟ ದರ್ಶನ್‌ ಹೇಳಿದರು.

‌‘ದರ್ಶನ ಅಭಿಮಾನಿಗಳಿಗೆ ಕಾಕಾ ಹೊಡೆಯುತ್ತಾನೆ ಎನ್ನುವ ಆರೋಪವಿದೆ. ಎಂದಿಗೂ ನಾನು ಹಾಗೆ ಮಾಡಿಲ್ಲ. ನನ್ನ ಅಭಿಮಾನಿಗಳಿಗೆ ಉಗಿದದ್ದೂ ಇದೆ, ತಲೆಮೇಲೆ ನಾಲ್ಕು ಬಾರಿಸಿ ಬೈದಿದ್ದೂ ಇದೆ’ ಎಂದು ತಿಳಿಸಿದರು.

‘ನಾನು ಗಾಡಿ ಓಡಿಸುವಾಗ ಯಾರೂ ಅಕ್ಕಪಕ್ಕ ಬರಬೇಡಿ. ಮೊಬೈಲ್‌ ಹಿಡಿದು ಫೋಟೊ ತೆಗೆಯುವ ಧಾವಂತದಲ್ಲಿ ಜೀವ ಕಳೆದುಕೊಳ್ಳಬೇಡಿ. ನನ್ನ ನೋಡದೇ ಇದ್ದರೂ ಪರವಾಗಿಲ್ಲ. ಆದರೆ, ಮನೆಯಲ್ಲಿ ವಯಸ್ಸಾದ ಅಪ್ಪ–ಅಮ್ಮ ಹಾಗೂ ಹೆಂಡತಿ, ಮಕ್ಕಳು ಇರುತ್ತಾರೆ. ಅವರ ಬಗ್ಗೆ ಒಮ್ಮೆ ಯೋಚಿಸಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.