ನಟಿ ಶರ್ಮಿಳಾ ಮಾಂಡ್ರೆ ಅವರು ನಟಿಸುತ್ತಿರುವ ಚಿತ್ರ ‘ದಸರಾ’ ದೀರ್ಘ ಕಾಲದ ಬ್ರೇಕ್‌ನ ನಂತರ ಮತ್ತೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಸ್ವತಃ ಮಾಂಡ್ರೆ ಅವರೇ ಈ ಸಂತಸ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಲಂಡನ್‌ನಲ್ಲಿ ಶೂಟಿಂಗ್ ನಡೆಸುತ್ತಿದ್ದ ತಂಡ ಕೋವಿಡ್ ಕಾರಣಕ್ಕೆ ತನ್ನ ಚಟುವಟಿಕೆ ಸ್ಥಗಿತಗೊಳಿಸಿತ್ತು.
‘ಚಿತ್ರದ ಶೀರ್ಷಿಕೆಗೆ ತಕ್ಕಂತೆ ಶೂಟಿಂಗ್ ಪುನರಾರಂಭ ಕೂಡಾ ದಸರಾ ವೇಳೆಗೇ ನಡೆಯುತ್ತಿದೆ. ಅ. 21ರಿಂದ ಆರಂಭವಾಗಿದೆ. ನಟ ನೀನಾಸಂ ಸತೀಶ್ ಕೂಡಾ ತಂಡವನ್ನು ಶೀಘ್ರ ಸೇರಲಿದ್ದಾರೆ’ ಎಂದು ಅವರು ಹೇಳಿದರು.
ಈಗ ನಿಗದಿಯಾಗಿರುವುದು ಚಿತ್ರದ ಥ್ರಿಲ್ಲರ್ ಭಾಗದ ಚಿತ್ರೀಕರಣ. ಚಿತ್ರವನ್ನು ಅರವಿಂದ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ರುಕ್ಮಿಣಿ ವಿಜಯ್‌ಕುಮಾರ್, ತಿಲಕ್ ಕೂಡಾತಂಡವನ್ನು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶರ್ಮಿಳಾ ಪಾತ್ರ ಏನು?
‘ನನ್ನದು ಐಷಾರಾಮಿ ಜೀವನ ಸಾಗಿಸುವ ವ್ಯಕ್ತಿಯ ಪಾತ್ರ. ಬಹುಮುಖ್ಯವಾದ ಪಾತ್ರವೂ ಹೌದು. ಇದು ಕೊಲೆಗಳ ಸುತ್ತ ಸಾಗುವ ಕಥೆ ಆಗಿದೆ. ಇದಕ್ಕಿಂತ ಹೆಚ್ಚೇನೂ ಹೇಳಲಾರೆʼ ಎಂದು ಶರ್ಮಿಳಾ ಸುಮ್ಮನಾದರು.
ನಿರ್ದೇಶಕ ಅರವಿಂದ್ ಶಾಸ್ತ್ರಿ ಪ್ರತಿಕ್ರಿಯಿಸಿ, ‘ಹಬ್ಬದ ಅವಧಿಯಲ್ಲಿ ನಡೆಯುವ ಸರಣಿ ಕೊಲೆಗಳ ಸುತ್ತ ನಡೆಯುವ ಕಥೆ ಇದು. ಹಾಗಾಗಿ ‘ದಸರಾ’ ಹೆಸರೇ ಸೂಕ್ತ ಎನಿಸಿತು. ಕಾಕತಾಳೀಯ ಎಂದರೆ ಚಿತ್ರದ ಶೂಟಿಂಗ್ ಪುನರಾರಂಭವೂ ದಸರಾ ವೇಳೆಗೇ ಆಗಿದೆ. ಚಿತ್ರದ ಕೆಲವು ಭಾಗಗಳನ್ನು ಬೆಂಗಳೂರ ಮತ್ತು ಹೊನ್ನಾವರದಲ್ಲಿ ಚಿತ್ರಿಸಬೇಕಿದೆ. ಶೀಘ್ರವೇ ಚಿತ್ರ ಸಿದ್ಧವಾಗುವ ವಿಶ್ವಾಸವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.