ವಿವಾದಿತ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಾಮ್‌ಗೋಪಾಲ್ ವರ್ಮಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವನಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಿಮಾಕ್ಕೆ 'ಡಿ ಕಂಪನಿ' ಎಂದು ಹೆಸರಿಸಲಾಗಿದೆ. ವರ್ಮಾತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಮ್‌ಗೋಪಾಲ್ ವರ್ಮಾ, ‘ಡಿ ಕಂಪನಿ ಕೇವಲ ದಾವೂದ್ ಇಬ್ರಾಹಿಂ ಕಥೆಯಲ್ಲ, ಆದರೆ ದಾವೂದ್ ಇಬ್ರಾಹಿಂ ಜೊತೆಗೆ ಬದುಕಿದವರು, ಅವರಿಂದ ಸತ್ತವರು ಇವರ ಮೇಲೆಲ್ಲಾ ಬೆಳಕು ಚೆಲ್ಲಲಾಗಿದೆ. ಸ್ಪಾರ್ಕ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ’ ಎಂದಿದ್ದಾರೆ.
ಡಿ ಕಂಪನಿ ಬಗ್ಗೆ ಮಾತನಾಡಿರುವ ವರ್ಮಾ ‘ಇದು ನನ್ನ ಕನಸಿನ ಪ್ರಾಜೆಕ್ಟ್. ಡಿ ಕಂಪನಿ ಸಿನಿಮಾಕ್ಕಾಗಿ ಕಳೆದ 20 ವರ್ಷಗಳ ಭೂಗತ ಜಗತ್ತನ್ನು ಅಧ್ಯಯನ ಮಾಡಿದ್ದೇನೆ. ಭೂಗತ ಪಾತಕಿಗಳು, ಪಾತಕಿಗಳನ್ನು ಮಟ್ಟ ಹಾಕಿರುವ ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳು ಹಾಗೂ ಭೂಗಜಗತ್ತಿನ ಹಲವರ ಜೀವನವನ್ನು ಇದರಲ್ಲಿ ತೋರಿಸಲಾಗಿದೆ. ಭಾರತೀಯ ಭೂಗತ ಜಗತ್ತಿನ ಸಂಪೂರ್ಣ ಚಿತ್ರಣವನ್ನು ಜನರಿಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ. ಇದು ತುಂಬಾ ವಿಲಕ್ಷಣ ಹಾಗೂ ವಿಚಿತ್ರವಾಗಿದೆ. ಇದರಲ್ಲಿ ಅಪರಾಧಿಗಳು, ರಾಜಕಾರಣಿಗಳು, ಪೊಲೀಸರು, ಸಿನಿತಾರೆಯರು ಎಲ್ಲರೂ ಭಾಗಿಯಾದವರು’ ಎಂದಿದ್ದಾರೆ.
‘ಈ ಹಿಂದೆಯೂ ಅನೇಕ ಬಾರಿ ಮಾಫಿಯಾಕ್ಕೆ ಸಂಬಂಧಿಸಿ ಸಿನಿಮಾಗಳನ್ನು ಮಾಡಲಾಗಿದೆ. ಆದರೆ ಡಿ ಕಂಪನಿಯಲ್ಲಿ ಭಾರತದಲ್ಲಿ ಇತ್ತೀಚೆಗೆ ಬಲಿಷ್ಠ ಅಪರಾಧ ಸಂಘಟನೆಯನ್ನು ಕಟ್ಟಿ ಬೆಳೆಸಿದ ದಾವೂದ್ ಇಬ್ರಾಹಿಂ ಕಥೆಯನ್ನು ಹೇಳಲಾಗುತ್ತದೆ. ಅದರೊಂದಿಗೆ ಮುಂಬೈ ಮಹಾನಗರವನ್ನು ತನ್ನ ಸರಪಳಿಯಲ್ಲಿ ಕಟ್ಟಿ ಹಾಕಿದ್ದ ಪಾತಕಿ ಛೋಟಾ ರಾಜನ್ ಬಗ್ಗೆಯೂ ತೋರಿಸಲಾಗುತ್ತದೆ’ ಎಂದು ಡಿ ಕಂಪನಿ ಬಗ್ಗೆ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.