ಸುಳ್ಯ: ಸಾಹಿತಿ, ಸಿನಿಮಾ ನಿರ್ಮಾಪಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ (79) ಸೋಮವಾರ ನಿಧನರಾದರು. ಅವರಿಗೆ ಮೃತರು ಪತ್ನಿ ಇಂದಿರಾ, ಪುತ್ರಿಯರಾದ ಸಹನಾ, ಪ್ರಜ್ಞಾ ಇದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಪಾಜೆಯ ಮನೆಯಲ್ಲಿ ನಿಧನರಾದರು. ಜ.3ರಂದು ಸುಳ್ಯದ ಅಮರ ಶ್ರೀಭಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಕರ್ನಾಟಕ ಅರೆಭಾಷೆ ಅಕಾಡೆಮಿಯ2019–20ನೇ ಸಾಲಿನ ‘ಗೌರವ ಪ್ರಶಸ್ತಿ’ ಸ್ವೀಕರಿಸಿದ್ದರು.
ದೇವಿಪ್ರಸಾದ್ ನಿರ್ಮಿಸಿದ ‘ಮೂರು ದಾರಿಗಳು’ ಸಿನಿಮಾಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ‘ಶಿರಾಡಿ ಭೂತ’ ನಾಟಕ ರಚಿಸಿ ನಿರ್ದೇಶಿಸಿ ಹಲವು ಕಡೆ ಭರ್ಜರಿ ಪ್ರದರ್ಶನ ಕಂಡು ಉತ್ತಮ ರಂಗಕರ್ಮಿ ಎನಿಸಿಕೊಂಡಿದ್ದರು. ‘ಗುಡ್ಡದ ಭೂತ’ ಟಿ.ವಿ. ಧಾರಾವಾಹಿಯಲ್ಲಿ ನಟಿಸಿದ್ದರು.
ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದರು. ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಮೊಕೇಸ್ತರರಾಗಿದ್ದರು.
ಜಮೀನ್ದಾರ ಕುಟುಂಬದ ಅಡಿಪಾಯವಿದ್ದರೂ ಸಾಹಿತ್ಯ ಮಜಲಿನಲ್ಲಿ ಎನ್‌ಎಸ್‌ಡಿ ಸಂಚಾರ:
ಸುಳ್ಯ: ಸಂಪಾಜೆಯ ಸಣ್ಣಯ್ಯ ಪಟೇಲ್ ಮತ್ತು ಪೂವಮ್ಮ ದಂಪತಿಯ ಏಕಮಾತ್ರ ಪುತ್ರನಾಗಿ 1942ರ ಏ.27ರಂದು ಜನಿಸಿದ ಎನ್.ಎಸ್.ದೇವಿಪ್ರಸಾದ್ (ಎನ್.ಎಸ್.ಡಿ) ಅವರಿಗೆ ತಂದೆಯ ಪಟೇಲ್‌ಗಿರಿಯ ಜಮೀನ್ದಾರ ಕುಟುಂಬದ ಅಡಿಪಾಯ ಇದ್ದರೂ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯದ ಮಜಲಿನಲ್ಲಿ ಸಂಚರಿಸಿದವರು.
ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಮಾಡಿದ ಅವರು ತನ್ನ ಕಾಲೇಜು ದಿನಗಳಲ್ಲಿಯೇ ಚರಿತ್ರೆ ಅಧ್ಯಯನದ ಹೊಸ ಸಾಧ್ಯತೆ ಕಂಡುಕೊಂಡವರು.
ಬಳಿಕ ಸಂಪಾಜೆ ಪರಿಸರದಲ್ಲಿ ರಂಗ ಚಟುವಟಿಕೆಗೆ ಮುಹೂರ್ತವಿಟ್ಟರು. ಅಕ್ಕಪಕ್ಕದ ರಂಗಾಸಕ್ತರನ್ನು ಸೇರಿಸಿ ನಿಸರ್ಗ ರಂಗ ಮಂಚ ಕಟ್ಟಿ ಅದರಲ್ಲಿ ಸಾಂಸ್ಕೃತಿಕ ಕಂಪು ಮೂಡಿಸಿದರು. ಅವರೇ ರಚನೆ ಮಾಡಿದ ‘ಶಿರಾಡಿ ಭೂತ’ ನಾಟಕ ಪರಿಣಾಮಕಾರಿ ಪ್ರದರ್ಶನ ಕಂಡಿತು. ಬಿ.ವಿ.ಕಾರಂತ, ಚಂದ್ರಶೇಖರ ಕಂಬಾರ, ಆರ್.ನಾಗೇಶ್, ಅಕ್ಷರ ಕೆ.ವಿ. ಮೊದಲಾದವರನ್ನು ಸಂಪಾಜೆಗೆ ಕರೆಸಿದ್ದರು. ಸಂಚಾರಿ ನಾಟಕ ತಂಡಗಳಿಗೆ ಆಶ್ರಯ ಕಲ್ಪಿಸಿದ ದೇವಿಪ್ರಸಾದ್, ರಾಷ್ಟ್ರೀಯ ನಾಟಕ ರಂಗದ ಹೊಸ ಮತ್ತು ಹಳೆ ಸಾಂಪ್ರದಾಯಿಕ ನಾಟಕಗಳ ಪರಿಚಯ ಮಾಡಿಕೊಟ್ಟರು.
ದೇವಿಪ್ರಸಾದ್ ನಿರ್ಮಾಣದ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಮೂರು ದಾರಿಗಳು’ ಚಲನಚಿತ್ರ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ‘ಅಪಹರಣ’ ಎಂಬ ಟೆಲಿಫಿಲಂ ಕೂಡಾ ಪ್ರಶಸ್ತಿಗೆ ಭಾಜನವಾಗಿತ್ತು. ಯಕ್ಷಗಾನದ ಮೂಲ ಸ್ವರೂಪವನ್ನು ರಕ್ಷಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಗೂ ಪ್ರೋತ್ಸಾಹ ಕೊಟ್ಟು ಬೆಳೆಸಿದರು.
1837ರಲ್ಲಿ ಕೆನರಾ ಮತ್ತು ಕೊಡಗು ರೈತಾಪಿ ಜನರ ತಂಡ ಸುಳ್ಯದಲ್ಲಿ ಸಂಘಟಿತರಾಗಿ ಮಂಗಳೂರಿನಿಂದ ಬ್ರಿಟಿಷರನ್ನು ಓಡಿಸಿ 2 ವಾರಗಳ ಕಾಲ ಕೆನರಾ ಜಿಲ್ಲೆಯನ್ನು ಆಳಿದ್ದರು. ಸ್ವಾತಂತ್ರ್ಯ ಸಮರಕ್ಕೂ ಎಷ್ಟೋ ವರ್ಷಗಳ ಹಿಂದೆ ನಡೆದ ಈ ಸಂಗ್ರಾಮಕ್ಕೆ ಇತಿಹಾಸದಲ್ಲಿ ಬಹಳ ದೊಡ್ಡ ಸ್ಥಾನ ಇದೆ. ರೈತರ ಈ ಹೋರಾಟದ ಕಥೆಯನ್ನು ಬ್ರಿಟಿಷರು ‘ಕಲ್ಯಾಣಪ್ಪನ ಕಾಟುಕಾಯಿ’ ಎಂದು ಕರೆದು ಅಪಮಾನ ಮಾಡಿದ್ದರು. ಈ ಅಪಮಾನವನ್ನು ತೊಡೆದು ಹಾಕುವುದಕ್ಕಾಗಿ ಸುಳ್ಯದಲ್ಲಿ ‘ಅಮರಕ್ರಾಂತಿ ಉತ್ಸವ ಸಮಿತಿ’ ಹುಟ್ಟುಹಾಕಿ 1998ರಲ್ಲಿ ಸುಳ್ಯದಿಂದ ಮಂಗಳೂರುವರೆಗೆ ಜಾಥಾ ಸಂಘಟನೆ ಮಾಡಿ ಜನಗಳಿಗೆ ಸತ್ಯ ಮನದಟ್ಟು ಮಾಡಿದ್ದರು. 1837ರ ಬಂಡಾಯಕ್ಕೆ ಸಂಬಂಧಿಸಿದ ಅವರ ಸಂಶೋಧನಾ ಕೃತಿ ಅಮರ ಸುಳ್ಯ ಸ್ವಾತಂತ್ರ್ಯ- ಅಮರ ಕರ್ನಾಟಕ ಇತಿಹಾಸ ಸಂಶೋಧನೆಯಲ್ಲೊಂದು ಮೈಲುಗಲ್ಲಾಗಿದೆ.
ಹಿಂದೊಮ್ಮೆ ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಸ್ವರ ಎದ್ದಾಗ ಅದನ್ನು ಅಡಗಿಸಲು ಕೊಡಗು ಪ್ರಜಾವೇದಿಕೆಯನ್ನು ಸಮಾನ ಮನಸ್ಕರೊಂದಿಗೆ ಕಟ್ಟಿ, ಅನೇಕ ಸವಾಲುಗಳನ್ನು ಎದುರಿಸಿ ಬೆಳೆಸಿದವರು. ಇಂದು ಕೊಡಗು ಪ್ರತ್ಯೇಕ ರಾಜ್ಯದ ಸೊಲ್ಲಡಗಿದ್ದರೆ ಅದಕ್ಕೆ ಕೊಡಗು ಪ್ರಜಾ ವೇದಿಕೆಯ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟವೇ ಕಾರಣ ಎನ್ನುತ್ತಾದೆ ದೇವಿಪ್ರಸಾದ್ ಅವರ ಆತ್ಮೀಯ ಬಳಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.